‘ಕ್ಯಾನ್ಸರ್ ಆತಂಕ ಬಿಡಿ’ ತಪಾಸಣೆ- ಚಿಕಿತ್ಸೆಗೆ ಮುಂದಾಗಿ : ಕಿದ್ವಾಯಿ ನಿರ್ದೇಶಕ ಡಾ. ಟಿ. ನವೀನ್
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವೈದ್ಯರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
* ನಿಯಮಿತ ವೈದ್ಯಕೀಯ ತಪಾಸಣೆಯಿಂದ ಕ್ಯಾನ್ಸರ್ ಆರಂಭಿಕ ಪತ್ತೆ ಸಾಧ್ಯ
* ಆರಂಭಿಕವಾಗಿ ಕ್ಯಾನ್ಸರ್ ಪತ್ತೆಯಿಂದ ಗುಣಹೊಂದಲು ಸಾಧ್ಯ
ಬೆಂಗಳೂರು: ಮನುಷ್ಯನ ದೇಹದಲ್ಲಿ ಜೀವಕೋಶಗಳ ಉತ್ಪತ್ತಿಯನ್ನು ನಿಯಂತ್ರಿಸುವ ಕೋಟ್ಯಂತರ ಆಂಕೋ ಜೀನ್‌ಗಳು ಇರುತ್ತವೆ. ಇವುಗಳಲ್ಲಿನ ವ್ಯತ್ಯಾಸದಿಂದ ಸಂಭವಿಸುವ ಮಾರಕ ಕಾಯಿಲೆಯೇ ‘ಕ್ಯಾನ್ಸರ್’. ಇದು ಪ್ರತಿ ವ್ಯಕ್ತಿಯಲ್ಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಜಾಗತಿಕವಾಗಿ ಜನರನ್ನು ಆತಂಕಕ್ಕೆ ದೂಡಿರುವ ಈ ಕಾಯಿಲೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ‘ಯೂನೈಟೆಡ್ ಬೈ ಯೂನಿಕ್’ ಘೋಷವಾಕ್ಯದೊಂದಿಗೆ ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ.
ಈ ದಿಸೆಯಲ್ಲಿ ಕ್ಯಾನ್ಸರ್‌ಗೆ ಕಾರಣಗಳು, ತಪಾಸಣೆ, ಚಿಕಿತ್ಸೆ, ಆರೈಕೆ, ಆಧುನಿಕ ವೈದ್ಯಕೀಯ ಸೌಲಭ್ಯಗಳ ಕುರಿತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ. ಟಿ. ನವೀನ್ ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಕ್ಯಾನ್ಸರ್ ’ಎಂಬ ಪದ ಕಿವಿಗೆ ಬೀಳುತ್ತಲೇ ಎಂಥ ವ್ಯಕ್ತಿಯಾದರೂ ಆತ್ಮಸ್ಥೈರ್ಯ ಕುಗ್ಗುತ್ತದೆ. ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಲಭ್ಯವಿರುವ ಚಿಕಿತ್ಸೆ ಹಾಗೂ ತಪಾಸಣಾ ವಿಧಾನಗಳ ಮೂಲಕ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಿದಲ್ಲಿ ಶೇ.95 ಗುಣಹೊಂದಬಹುದು. ಜಾಗೃತಿ ಕೊರತೆ ಹಾಗೂ ಹಿಂಜರಿಕೆಯಿಂದಾಗಿ ಬಹಳಷ್ಟು ರೋಗಿಗಳು ಕ್ಯಾನ್ಸರ್ 3-4ನೇ ಹಂತಕ್ಕೆ ತಲುಪಿದಾಗ ಚಿಕಿತ್ಸೆ ಪಡೆಯಲು ಬರುತ್ತಾರೆ. ಇದರಿಂದಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪ್ರತಿ ವ್ಯಕ್ತಿಯಲ್ಲೂ ಸಾಮಾನ್ಯವಾಗಿ ಆರೋಗ್ಯಕರ ಸೆಲ್ (ಅಂಗಾಂಶ)ಗಳೇ ಇರುತ್ತವೆ. ಯಾರಲ್ಲೂ ಪ್ರತ್ಯೇಕವಾಗಿ ಕ್ಯಾನ್ಸರ್ ಸೆಲ್ ಎಂದಿರುವುದಿಲ್ಲ. ಆದರೆ, ಕೆಲವರ ಜೀನ್‌ನಲ್ಲಿ ಆಗುವ ತೊಡಕುಗಳಿಂದ ಯಾವುದೇ ನಿಖರ ಕಾರಣಗಳು ಇಲ್ಲದೆಯೇ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅಂತಹವರು ಯಾವುದೇ ದುಶ್ಚಟ ರೂಢಿಸಿಕೊಂಡಿದ್ದರೆ ಬೇಗನೆ ಕಾಯಿಲೆ ಬರುತ್ತದೆ. ಇಲ್ಲವಾದಲ್ಲಿ ತಡವಾಗಿ ಕಾಣಿಸಿಕೊಳ್ಳುತ್ತದೆ. ಧೂಮವ್ಯಸನಿಗಳಲ್ಲಿ ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಉಂಟಾಗುತ್ತದೆ. ಹೀಗೆ ಪ್ರತಿ ಕ್ಯಾನ್ಸರ್‌ಗೂ ಒಂದೊಂದು ಕಾರಣ ಇರುತ್ತದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಯೋಜನೆಗಳು:
ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆ ರೂಪಿಸುವುದರ ಜತೆಗೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗರ್ಭಕಂಠದ ಕ್ಯಾನ್ಸರ್ ತಡೆಗೆ 9ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ೋಷಿಸಿರುವುದು ಸ್ವಾಗತಾರ್ಹ. ಇದರಿಂದ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆ ಸಾಧ್ಯವಾಗಲಿದೆ. ಬಜೆಟ್‌ನಲ್ಲಿ ಬಹಳಷ್ಟು ಕ್ಯಾನ್ಸರ್ ಔಷಧಗಳ ದರ ಇಳಿಕೆ ಮಾಡಿರುವುದು ಸಹ ರೋಗಿಗಳಿಗೆ ಅನುಕೂಲವಾಗಿದೆ ಎಂದರು.
ವಾರ್ಷಿಕ 15.62 ಲಕ್ಷ ರೋಗಿಗಳು ಪತ್ತೆ
ಕ್ಯಾನ್ಸರ್‌ಗೆ ಸಂಬಂಧಿಸಿ 2022ರ ವರದಿ ಪ್ರಕಾರ ಭಾರತದಲ್ಲಿ ವರ್ಷಕ್ಕೆ 15.62 ಲಕ್ಷ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಕರ್ನಾಟಕದಲ್ಲಿ 89,215 ಹೊಸ ಕ್ಯಾನ್ಸರ್ ಪ್ರಕರಣ ವರದಿಯಾಗಿದ್ದು, ಶೇ.24.6 ತಂಬಾಕು ಬಳಕೆಯಿಂದ ಕ್ಯಾನ್ಸರ್‌ಗೆ ಒಳಗಾದವರಾಗಿದ್ದಾರೆ. ಈ ಪೈಕಿ ಶೇ.36.4 ಪುರುಷರು ಹಾಗೂ ಶೇ.15.2 ಮಹಿಳೆಯರಿದ್ದಾರೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆಶಾಕಿರಣ
ಕ್ಯಾನ್ಸರ್ ರೋಗಿಯನ್ನು ಮಾತ್ರ ಬಾಧಿಸುವುದಿಲ್ಲ. ಒಬ್ಬರಿಗೆ ಈ ಕಾಯಿಲೆ ಬಂದರೆ ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕ್ಯಾನ್ಸರ್ ರೋಗಿಗಳ ಹಾಗೂ ಕುಟುಂಬದವರ ಪಾಲಿಗೆ ಆಶಾಕಿರಣವಾಗಿದೆ. ಇಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಬಡರೋಗಿಗಳಿಗೆ ಸಂಪೂರ್ಣ ಉಚಿತ ಹಾಗೂ ಮಧ್ಯಮವರ್ಗದವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆರೈಕೆ ಒದಗಿಸಲಾಗುತ್ತಿದೆ. ಸಂಸ್ಥೆಯಲ್ಲಿ ನಿತ್ಯ 2 ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. 25 ಸಾವಿರ ಹೊಸ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 3.50 ಲಕ್ಷ ಮಂದಿ ನಿಯಮಿತ ಚಿಕಿತ್ಸೆ (ಾಲೋಅಪ್ ಟ್ರೀಟ್‌ಮೆಂಟ್) ಪಡೆಯುತ್ತಾರೆ. ಸುಮಾರು 60 ಸಾವಿರ ಮಂದಿ ರೇಡಿಯೇಷನ್ ಥೆರಪಿ, 35 ಸಾವಿರಕ್ಕೂ ಹೆಚ್ಚು ಮಂದಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕು ಸಾವಿರಕ್ಕೂ ಹೆಚ್ಚು ಮೇಜರ್ ಶಸಚಿಕಿತ್ಸೆ ನಡೆಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಯಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರೋಬಾಟಿಕ್ ಶಸಚಿಕಿತ್ಸೆ, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಅಸ್ಥಿಮಜ್ಜೆ ಕಸಿ ಶಸಚಿಕಿತ್ಸೆ) ಸಹ ನಡೆಸಲಾಗುತ್ತಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆ ಆಗಮಿಸುತ್ತಿದ್ದು, ಸಂಸ್ಥೆಯ ಹೊರೆಯನ್ನು ತಪ್ಪಿಸಲು ಶೀಘ್ರದಲ್ಲೇ ತುಮಕೂರು ಮತ್ತು ಮೈಸೂರಿನಲ್ಲಿ ಸಂಸ್ಥೆಯ ಶಾಖೆ ಕಾರ್ಯಾರಂಭಿಸಲಿವೆ.
ಮನೆ ಬಾಗಿಲಿಗೇ ಉಪಶಮನ ಆರೈಕೆ
ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರಲು ಸಾಧ್ಯವಾಗದ ಕ್ಯಾನ್ಸರ್ ರೋಗಿಗಳಿಗೆ ಮನೆ ಬಾಗಿಲಿಗೇ ಉಪಶಮನ ಆರೈಕೆ (ಪ್ಯಾಲಿಯೇಟಿವ್ ಕೇರ್) ಸೇವೆ ಒದಗಿಸುವ ಕ್ರಮ ವಹಿಸಲಾಗಿದೆ. ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಕೆ ಮಾಡಿಕೊಂಡು ಈ ಸೇವೆ ನೀಡಲಾಗುವುದು. ಇದರಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ತಂಡವು ಕ್ಯಾನ್ಸರ್ ಪೀಡಿತರಿಗೆ ಮನೆಯಲ್ಲಿಯೇ ಅಗತ್ಯ ವೈದ್ಯಕೀಯ ಆರೈಕೆ ಒದಗಿಸಲಿದ್ದು, ರೋಗಿಗೆ ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗಿ ಜೀವನ ಗುಣಮಟ್ಟ ಸುಧಾರಿಸಲು ನೆರವಾಗಲಿದೆ. ಆರಂಭದಲ್ಲಿ ಆಸ್ಪತ್ರೆಯ ಸುತ್ತಮುತ್ತಲ 25 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ಮನೆ ಆರೈಕೆ ಜತೆಗೆ ಟೆಲಿ ಮೆಡಿಸಿನ್ ಸೇವೆಯ ಮೂಲಕ ಅಗತ್ಯ ಸಲಹೆ ಸೂಚನೆಗಳನ್ನೂ ನೀಡಲಾಗುವುದು ಎಂದು ಪ್ಯಾಲಿಯೇಟಿವ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಎಂ.ಕೆ. ಯದುರಾಜ್ ತಿಳಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಾರ್ವಜನಿಕ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮದ ಜತೆಗೆ ಶಾಲಾ ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಲು ನಿರ್ಧರಿಸಲಾಗಿದೆ.