ನಾಯಕತ್ವ ಬದಲಾವಣೆ; ಹೈ ಕಮಾಂಡ್​ ತೀರ್ಮಾನವೇ ಅಂತಿಮ ಎಂದ ಸಿಎಂ ಸಿದ್ದರಾಮಯ್ಯ | Siddaramaiah

Siddaramaiah | ಸಿಎಂ ಸಿದ್ದರಾಮಯ್ಯ ( ಕೃಪೆ- Social Media)
Siddaramaiah | ಸಿಎಂ ಸಿದ್ದರಾಮಯ್ಯ ( ಕೃಪೆ- Social Media)
Published on

ಪ್ರಮುಖ ಮುಖ್ಯಾಂಶಗಳು

  • ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್​ ನಾಯಕರು ಮಾತನಾಡಿದ್ದಾರಾ..?
  • ಹೈ ಕಮಾಂಡ್​ ನಾಯಕರು ಹೇಳುವ ಮಾತೇ ಅಂತಿಮ
  • ದೆಹಲಿಗೆ ಹೋಗುವವರು ಹೋಗಲಿ
ಬೆಂಗಳೂರು: ಹೈ ಕಮಾಂಡ್​ ನಾಯಕರು ಹೇಳುವ ಮಾತೇ ಅಂತಿಮವಾಗಿದ್ದು, ನಾನಾಗಲಿ, ಡಿಸಿಎಂ ಡಿಕೆ ಶಿವಕುಮಾರ ಆಗಲಿ ವರಿಷ್ಠರು ಹೇಳಿದ್ದನ್ನು ಪಾಲಿಸುತ್ತೇವೆ, ಅಲ್ಲಿಯವರೆಗೆ ನಾನೇ ಮುಂದುವರೆಯುತ್ತೇನೆ, ಬಜೆಟ್​ ಕೂಡ ನಾನೇ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಯಕತ್ವದ ಬದಲಾವಣೆಯ ಬಗ್ಗೆ ಹೈ ಕಮಾಂಡ್​ ನಾಯಕರು ಮಾತನಾಡಿದ್ದಾರಾ..? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದು, ಅವರೇ ಹೇಳದಿದ್ದ ಮೇಲೆ ಈ ಚರ್ಚೆ ಅನಾವಶ್ಯಕ, ದೆಹಲಿಗೆ ಹೋಗುವವರು ಹೋಗಲಿ ಎಂದು ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್​ನ ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದು, ಇವರೆಲ್ಲಾ ಡಿಸಿಎಂ ಡಿಕೆಶಿ ಆಪ್ತರು ಎನ್ನಲಾಗಿದೆ, ತಮ್ಮ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಮಾಜಿ ಸಂಸದ ಡಿಕೆ ಸುರೇಶ್​ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೌದು ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುವವನು, ಆದ್ದರಿಂದಲೇ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇನೆ ಎಂದರು. ಕೃಷಿ ಸಚಿವ ಚೆಲುವರಾಯಸ್ವಾಮಿ ದೆಹಲಿ ಭೇಟಿಯ ಕುರಿತು ಮಾತನಾಡಿದ ಸಿಎಂ, ಈಗಾಗಲೇ ನಾನು ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಮಾತನಾಡಿದ್ದೇನೆ, ಕೇಂದ್ರ ಸಚಿವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾರೆ, ಈ ವಿಷಯವಾಗಿ ಹೆಚ್ಚಿಗೆ ವಿವರಣೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net