ಮಗುನಗುವಿನ ಕಲಾವಿದ ಉಮೇಶ್ ವಿಧಿವಶ

ನಟ ಉಮೇಶ್
ನಟ ಉಮೇಶ್
Published on

ಮಗುನಗುವಿನ ಕಲಾವಿದ

ಮಗುವಿನಂಥ ನಗು ಮುಖ, ವಿಭಿನ್ನ ಹಾವಭಾವ, ನಗೆಗಡಲಲ್ಲಿ ತೇಲಿಸುವ ಸಂಭಾಷಣೆಯ ಮೂಲಕ ಪ್ರಸಿದ್ಧರಾಗಿದ್ದವರು ಹಿರಿಯ ಹಾಸ್ಯ ಕಲಾವಿದ ಎಂ.ಎಸ್​.ಉಮೇಶ್​. 1960ರಲ್ಲಿ ತೆರೆಕಂಡಿದ್ದ "ಮಕ್ಕಳ ರಾಜ್ಯ' ಮೂಲಕ ಬಣ್ಣದ ಬದುಕು ಆರಂಭಿಸಿದ್ದ ಅವರು ಬಾಲ ನಟನಾಗಿ, ರಂಗಭೂಮಿ ಕಲಾವಿದನಾಗಿ, ಹಾಸ್ಯ ನಟನಾಗಿ ಸುದೀರ್ ಸೇವೆ ಸಲ್ಲಿಸಿದವರು. ಇತ್ತೀಚೆಗೆ ತೆರೆಕಂಡಿದ್ದ "ಕಮಲ್​ ಶ್ರೀದೇವಿ'ಯಲ್ಲೂ ನಟನೆಯ ಛಾಪು ಮೂಡಿಸಿದ್ದರು. ಇಂತಹ ಅಪರೂಪದ ಕಲಾವಿದನ ಐದು ದಶಕಗಳ ಸಿನಿ ಬದುಕಿನಲ್ಲಿ ಹಲವು ಬಾರಿ ಏಳು&ಬೀಳು ಕಂಡರೂ ಅದನ್ನು ಬಹಿರಂಗಪಡಿಸದೆ ಕನ್ನಡ ಪ್ರೇಕ್ಷಕರನ್ನು ನಗಿಸುತ್ತಲೇ ತನ್ನೊಳಗೆ ನೋವುಂಡವರು.

ಹಿರಿಯ ಹಾಸ್ಯ ನಟ ಉಮೇಶ್​ ಅಸ್ತಂಗತ

ಲಿವರ್​ (ಯಕೃತ್​) ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ನಟ ಎಂ.ಎಸ್​. ಉಮೇಶ್​ (80) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಅ. 10ರಂದು ಮನೆಯಲ್ಲಿ ಸ್ನಾನಕ್ಕೆ ತೆರಳುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ ಉಮೇಶ್​ ಅವರಿಗೆ ಬಲವಾಗಿ ಪೆಟ್ಟಾಗಿತ್ತು. ಅವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆಗೆ ಮುಂದಾದಾಗ ಲಿವರ್​ನಲ್ಲಿ ಗಡ್ಡೆ ಪತ್ತೆಯಾಗಿತ್ತು. ಇದು ಲಿವರ್​ ಕ್ಯಾನ್ಸರ್​ ಎಂದು ವೈದ್ಯರು ಖಚಿತಪಡಿಸಿದ್ದರು. ಬಳಿಕ ಅವರನ್ನು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಪಾರ್ಥಿವ ಶರೀರವನ್ನು ಬೆಳಗ್ಗೆ ಅವರ ಜೆಪಿ ನಗರದ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ರವೀಂದ್ರ ಕಲಾಕ್ಷೇತ್ರಕ್ಕೆ ಕರೆತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ನಟ ಡಿಂಗ್ರಿ ನಾಗರಾಜ್​, ನಟಿ ಶ್ರುತಿ, ಗಿರಿಜಾ ಲೋಕೇಶ್​ ಮತ್ತು ಅನೇಕ ಸ್ಯಾಂಡಲ್​ವುಡ್​ ಕಲಾವಿದರು ಅಂತಿಮ ದರ್ಶನ ಪಡೆದರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ನಾಲ್ಕನೇ ವಯಸ್ಸಿಗೆ ಬಣ್ಣ ಹಚ್ಚಿದ್ದ ಪ್ರತಿಭೆ

ಉಮೇಶ್​ 1945ರ ಏ. 24ರಂದು ಮೈಸೂರಿನಲ್ಲಿ ಜನಿಸಿದ್ದರು. ಅವರ ತಂದೆ ಶ್ರೀಕಂಠಯ್ಯ ಕೂಡ ಕೆ. ಹಿರಣ್ಣಯ್ಯ ಮಿತ್ರ ನಾಟಕ ಮಂಡಳಿಯಲ್ಲಿ ಕಲಾವಿದರಾಗಿದ್ದರು. ತಂದೆಯ ನೆರವಿನಿಂದ ಉಮೇಶ್​ ತಮ್ಮ 4ನೇ ವಯಸ್ಸಿನಲ್ಲಿಯೇ ಹಿರಣ್ಣಯ್ಯ ಅವರ ನಾಟಕದಲ್ಲಿ ಬಣ್ಣ ಹಚ್ಚಿ ಮಿಂಚಿದ್ದರು. ಬಳಿಕ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿಕೊಂಡ ಅವರು ಕೆಲ ನಾಟಕಗಳಲ್ಲಿ ಬಾಲ ಕಲಾವಿದನಾಗಿ ಅಭಿನಯಿಸಿದರು. ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಅವರು ಉಮೇಶ್​ ಪ್ರತಿಭೆ ಗುರುತಿಸಿ, ಖ್ಯಾತ ನಿರ್ದೇಶಕ ಬಿ.ಆರ್​. ಪಂತುಲು ಗಮನಕ್ಕೆ ತಂದು ಅವರ "ಮಕ್ಕಳ ರಾಜ್ಯ' (1960) ಸಿನಿಮಾದಲ್ಲಿ ಅವಕಾಶ ಕೊಡಿಸಿದರು. ಆ ಮೂಲಕ ಉಮೇಶ್​ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು.

ಎರಡನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ

"ಮಕ್ಕಳ ರಾಜ್ಯ' ಚಿತ್ರದಲ್ಲಿ ಉಮೇಶ್​ ನಟನೆ ನೋಡಿ ಮೆಚ್ಚಿಕೊಂಡಿದ್ದ ಪುಟ್ಟಣ್ಣ ಕಣಗಾಲ್​ ತಮ್ಮ ನಿರ್ದೇಶನದ "ಕಥಾ ಸಂಗಮ'ಚಿತ್ರಕ್ಕೆ ಅವಕಾಶ ನೀಡಿದರು. "ಕಥಾ ಸಂಗಮ' ನಾಲ್ಕು ಕಥೆಗಳ ಸಿನಿಮಾ. ಅದರಲ್ಲಿ "ಮುನಿತಾಯಿ' ಕಥೆಯಲ್ಲಿ ಉಮೇಶ್​ ತಿಮ್ಮರಾಯ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ರಜನಿಕಾಂತ್​ ಕೂಡ ಇದ್ದರು. ಇದು ಉಮೇಶ್​ ನಟಿಸಿದ್ದ ಎರಡನೇ ಸಿನಿಮಾ. ಇದರಲ್ಲಿನ ನಟನೆಗೆ ಅವರು ಅತ್ಯುತ್ತಮ ಪೋಷಕ ನಟ ರಾಜ್ಯಪ್ರಶಸ್ತಿ ಪಡೆದಿದ್ದರು.

ಗೋಲ್ಮಾಲ್​ "ಸೀತಾಪತಿ'ಯ ಕಿತಾಪತಿ

ಅನಂತ್​ನಾಗ್​ ಅಭಿನಯದ "ಗೋಲ್ಮಾಲ್​' ಸರಣಿಯಲ್ಲಿ ಉಮೇಶ್​ ಅವರ ಸೀತಾಪತಿ ಪಾತ್ರ ಇಂದಿಗೂ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಚಿತ್ರದಲ್ಲಿ "ನೀವೇನೋ ಬೇಜಾರ್​ ಮಾಡಿಕೊಂಡಿಲ್ಲ ತಾನೇ? "ಅಯ್ಯಯ್ಯೋ ಅಪಾರ್ಥ ಮಾಡಿಕೊಂಡು ಬಿಟ್ರಾ?', "ಅಪಾರ್ಥ ಮಾಡ್ಕೋಬೇಡಿ' ಎಂಬ ಡೈಲಾಗ್​ಗಳು ಇಂದಿಗೂ ಹೆಚ್ಚು ಪ್ರಸಿದ್ಧವಾಗಿವೆ. 2 ತಿಂಗಳ ಹಿಂದೆ "ಕಮಲ್​ ಶ್ರೀದೇವಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲೂ ಈ ಡೈಲಾಗ್​ ಹೇಳಿ ಉಮೇಶ್​ ನೆರೆದಿದ್ದವರನ್ನು ರಂಜಿಸಿದ್ದರು.

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

ಉಮೇಶ್​ ಐದೂವರೆ ದಶಕಗಳ ಸಿನಿ ವೃತ್ತಿಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ, ಪೋಷಕ ಹೀಗೆ ಚಿತ್ರದಿಂದ ಚಿತ್ರಕ್ಕೆ ಭಿನ್ನ&ವಿಭಿನ್ನ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. "ನಾಗರಹೊಳೆ'(1977), "ಭಾಗ್ಯವಂತರು' (1977), "ಪುಟಾಣಿ ಏಜೆಂಟ್​ 123' (1979), "ಅಂತ' (1981), "ಗುರು ಶಿಷ್ಯರು' (1981),"ಹಾಲು ಜೇನು' (1982) "ಎರಡು ನಕ್ಷತ್ರಗಳು' (1983), "ಭಕ್ತ ಪ್ರಹ್ಲಾದ' (1983), "ಗೋಲ್ಮಾಲ್​ ರಾಧಾಕೃಷ್ಣ' (1990), "ತರ್ಲೆ ನನ್ಮಗ' (1992), "ಆಕಸ್ಮಿಕ' (1993), "ಹಗಲು ವೇಷ' (2000), "ಜಾಕಿ' (2010), "ಡೇರ್​ ಡೇವಿಲ್​ ಮುಸ್ತಾಫಾ' (2023) ಸೇರಿ 350ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ರಮೇಶ್​ ಅರವಿಂದ ನಟನೆಯ "ವೆಂಕಟ ಇನ್​ ಸಂಕಟ' ಚಿತ್ರದಲ್ಲಿ ಉಮೇಶ್​ ಅವರ "ಗುಂಡಮ್ಮ' ಎಂಬ ಹಳೆಯ ಕಾಲದ ಅಜ್ಜಿ ಪಾತ್ರ ಮೆಚ್ಚುಗೆ ಪಡೆದಿತ್ತು.

ಎಂಬತ್ತರಲ್ಲೂ ಉತ್ಸಾಹಿ

ಉಮೇಶ್​ ತಮ್ಮ ಅಂತಿಮ ದಿನಗಳಲ್ಲೂ ಕಲಾವಿದನಾಗಿಯೇ ಜೀವನ ಸವೆಸಿದ್ದರು. ಅವರ 80ನೇ ವಯಸ್ಸಿನಲ್ಲಿ, ಇತ್ತೀಚೆಗೆ ತೆರೆ ಕಂಡಿದ್ದ ಸಚಿನ್​ ಚಲುವರಾಯಸ್ವಾಮಿ ನಟಿಸಿದ್ದ "ಕಮಲ್​ ಶ್ರೀದೇವಿ' ಚಿತ್ರದಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್​ ಪಾತ್ರ ನಿರ್ವಹಿಸಿದ್ದರು. ಅವರು ನಟಿಸಿದ ಇನ್ನೂ ಕೆಲವು ಚಿತ್ರಗಳು ಬಿಡುಗಡೆ ಬಾಕಿಯಿವೆ.

ದಿಗ್ಗಜರ ಜತೆ ನಟನೆ

ಉಮೇಶ್​ 50 ವರ್ಷಗಳ ಸಿನಿ ಬದುಕಿನಲ್ಲಿ ಕನ್ನಡದ ದಿಗ್ಗಜ ಕಲಾವಿದರ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಕುಮಾರ್​, ವಿಷ್ಣುವರ್ಧನ್​, ಅಂಬರೀಷ್​, ಅನಂತ್​ ನಾಗ್​, ಲೋಕೇಶ್​ ಅವರ ಸಿನಿಮಾಗಳಲ್ಲಿ ನಟಿಸುವ ಜತೆಗೆ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಇನ್ನೂ ವಿಶೇಷವೆಂದರೆ ಉಮೇಶ್​ ಡಾ.ರಾಜಕುಮಾರ್​ ಕುಟುಂಬದ 3 ತಲೆಮಾರುಗಳ ಜತೆ ಕೆಲಸ ಮಾಡಿದ್ದಾರೆ. ರಾಜಕುಮಾರ್​, ಪುತ್ರರಾದ ಶಿವರಾಜ ಕುಮಾರ್​, ಪುನೀತ್​ರಾಜಕುಮಾರ್​ ಸಿನಿಮಾ ಗಳಲ್ಲಿ ನಟಿಸಿದ್ದಾರೆ. ಹಾಗೆಯೇ ಅವರ ಕುಟುಂಬದ 3ನೇ ತಲೆಮಾರಿನ ನಟ ವಿನಯ್​ ರಾಜಕುಮಾರ್​ ಚೊಚ್ಚಲ ಸಿನಿಮಾ "ಸಿದ್ದಾರ್ಥ್​' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
15 ವರ್ಷಗಳ ಹಿಂದೆ ನನಗೋಸ್ಕರ ಉಮೇಶ್​ ಸರ್​ ಕಾರಿನ ಕಥೆ ಬರೆದಿದ್ದರು. ದುಡ್ಡು ತೆಗೆದುಕೊಳ್ಳದೆ ನನಗೆ ಆ ಕಥೆ ನೀಡಿದ್ದರು. ಉಮೇಶಣ್ಣ ಇದ್ದರೆ ಸೆಟ್​ನಲ್ಲಿ ಯಾವಾಗಲೂ ನಗು ಇರುತ್ತಿತ್ತು. ಕಲೆಯಿಂದ, ಕಲೆಗಾಗಿಯೇ ಅವರು ಬದುಕಿದ್ದರು.
> ಸಾಧು ಕೋಕಿಲ ಹಾಸ್ಯ ನಟ
ಉಮೇಶ್​ ರಂಗಭೂಮಿ, ಚಿತ್ರರಂಗದಲ್ಲಿ ದೀರ್ ಕಾಲ ಸೇವೆ ಸಲ್ಲಿಸಿದವರು ಎಂಬುದು ಹೆಮ್ಮೆಯ ಸಂಗತಿ. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾಗ ನನ್ನನ್ನು ಭೇಟಿ ಮಾಡಿದ್ದರು. ಆಗ ನಾನು ಚಿಕಿತ್ಸೆಗೆ ನೆರವಾಗಿದ್ದೆ. ಕುಟುಂಬಕ್ಕೆ ದು@ಖ ಭರಿಸುವ ಶಕ್ತಿ ಸಿಗಲಿ.
> ಸಿದ್ದರಾಮಯ್ಯ ಮುಖ್ಯಮಂತ್ರಿ
ಉಮೇಶ್​ ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯವಿಲ್ಲ. ಆದರೆ ಕಲಾವಿದರಾಗಿ ಅವರ ಅಭಿನಯವನ್ನು ಆನಂದಿಸಿದ್ದೇನೆ. ಅವರ ಅಗಲಿಕೆ ಬೇಸರ ತಂದಿದೆ. ಚಿತ್ರರಂಗಕ್ಕೆ ನಷ್ಟವಾಗಿದೆ.
> ಡಿ.ಕೆ. ಶಿವಕುಮಾರ್​ ಉಪಮುಖ್ಯಮಂತ್ರಿ
ಉಮೇಶ್​ ಅಂಕಲ್​ ನನ್ನ ತಂದೆಯ ಬಾಲ್ಯ ಸ್ನೇಹಿತರಾಗಿದ್ದರು. ಇಬ್ಬರೂ ಒಟ್ಟಿಗೇ ಗುಬ್ಬಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಆರಂಭವಾದ ಕುಟುಂಬದ ಜತೆಗಿನ ಒಡನಾಟ, ಸ್ನೇಹ ಇಂದಿಗೆ ಕೊನೆ ಆಯಿತು ಅನಿಸುತ್ತದೆ. ಕಲಾವಿದರಿಗೆ ಸಾವಿಲ್ಲ. ಸಿನಿಮಾ ಹಾಗೂ ವ್ಯಕ್ತಿತ್ವದ ಮೂಲಕ ಅವರು ಅಜರಾಮರ. > ಶ್ರುತಿ ನಟಿ
ತಮ್ಮ ಹಾಸ್ಯಮಯ ಪಾತ್ರಗಳಿಂದ ಜನಪ್ರಿಯರಾಗಿದ್ದ ಉಮೇಶ್​ ನಿಧನದಿಂದ ಚಿತ್ರರಂಗ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ವಿಶಿಷ್ಟ ಅಭಿನಯ ಮತ್ತು ಸಂಭಾಷಣಾ ಶೈಲಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
> ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ
ಉಮೇಶ್​ ನಿಧನ ಸುದ್ದಿ ತಿಳಿದು ದು@ಖಿತನಾಗಿದ್ದೇನೆ. ಹಾಸ್ಯಭರಿತ ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಅವರ ಕಾಯ ಅಳಿದರೂ ನಟನೆ ಕನ್ನಡಿಗರ ಜನಮಾನಸದಲ್ಲಿ ಸದಾ ಜೀವಂತವಾಗಿರುತ್ತದೆ.
> ಆರ್​. ಅಶೋಕ ವಿಧಾನಸಭೆ ಪ್ರತಿಪಕ್ಷ ನಾಯಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net