ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು
ಯಳಂದೂರು: ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಆಸ್ಪತ್ರೆಗೆ ಹೋಗಲು ರಸ್ತೆ ವಿಸ್ತರಣೆ ಅವಶ್ಯಕತೆ ಇದ್ದು, ಕಂದಾಯ, ತೋಟಗಾರಿಕೆ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿ ಬೇಗ ಜಾಗ ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ ನೀಡಿದರು.
ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಆಸ್ಪತ್ರೆಗೆ ಸಾಗಲು ಬೈಪಾಸ್ ರಸ್ತೆ ಹಾಗೂ ಅದರ ಪಕ್ಕದಲ್ಲಿರುವ ಹಳೇ ಕಟ್ಟಡದಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಈ ರಸ್ತೆ ಕಿರಿದಾಗಿದ್ದು, ಎರಡು ವಾಹನಗಳು ಸಾಗಲು ಅಸಾಧ್ಯ. ಹಾಗಾಗಿ ಈ ರಸ್ತೆಯನ್ನು ವಿಸ್ತರಣೆ ಮಾಡಬೇಕಿದೆ. ಇದರ ಪಕ್ಕದಲ್ಲೇ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವಿದ್ದು, ಈ ಜಾಗವನ್ನು ಆದಷ್ಟು ಬೇಗ ತೆರವುಗೊಳಿಸಬೇಕಿದೆ. ಇದಕ್ಕೆ ಕಂದಾಯ, ಸರ್ವೇ, ತೋಟಗಾರಿಕೆ ಹಾಗೂ ಪಟ್ಟಣ ಪಂಚಾಯಿತಿ ಸರ್ವೇ ನಡೆಸಿ ಸ್ಕೆಚ್ ತಯಾರಿಸಿ ರಸ್ತೆಗೆ ಅಗತ್ಯವಾಗಿರುವ ಜಾಗವನ್ನು ಗುರುತಿಸಬೇಕು ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ನಿರ್ಮಾಣವಾಗಲಿರುವ ಈ ಆಸ್ಪತ್ರೆಯಿಂದ ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಬಹುತೇಕ ಮುಗಿಯುವ ಹಂತ ತಲುಪಿದೆ. ಇಲ್ಲಿಗೆ ಆಂಬುಲೆನ್ಸ್ ಸೇರಿದಂತೆ ಇತರ ವಾಹನಗಳು ಬರಲು ಅನುಕೂಲವಾಗುವಂತೆ ಬೈಪಾಸ್ ಹಾಗೂ ಪಟ್ಟಣ ರಸ್ತೆಯಿಂದ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಆದರೆ ಇದಕ್ಕೆ ಬೇಕಿರುವ ಜಾಗವನ್ನು ಗುರುತಿಸುವ ಕೆಲಸ ನಡೆಯಬೇಕಿದ್ದು ಇದನ್ನು ಬೇಗ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.
ತಹಸೀಲ್ದಾರ್ ಎಸ್.ಎಲ್.ನಯನಾ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ವೈದ್ಯಾಧಿಕಾರಿ ಡಾ.ಶ್ರೀಧರ್, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಸಿಪಿಐ ಸುಬ್ರಹ್ಮಣ್ಯ, ಸರ್ವೇ ಇಲಾಖೆಯ ಕೀರ್ತಿಕುಮಾರ್, ನಗರಾಭಿವೃದ್ಧಿ ಕೋಶದ ಎಇಇ ರಾಮಚಂದ್ರು ಅನೇಕರು ಇದ್ದರು.