ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘಕ್ಕೆ ಜಾಗ: ಸಿಎಂ ಡಿಕೆಶಿ ಭರವಸೆ

DK SHIVAKUMAR
DK SHIVAKUMAR
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಚೇರಿಗಾಗಿ ಜಾಗ ನೀಡಲು ಸರ್ಕಾರ ಬದ್ಧ
  • ಮಹಿಳಾ ನೌಕರರು ಸಂಘಟಿತರಾಗಿ ನಾಯಕತ್ವ ಬೆಳೆಸಿಕೊಳ್ಳಬೇಕು.
  • ಕಾನೂನು ಚೌಕಟ್ಟಿನೊಳಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಂಘದ ಬೇಡಿಕೆಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು
ಬೆಂಗಳೂರು:
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಚೇರಿಗಾಗಿ ಜಾಗ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಷಣಿ ಗೌಡ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದನೆ ಸಲ್ಲಿಸಿದಾಗ ಮಾತನಾಡಿದರು.
ಮಹಿಳೆಯರ ಬೆಂಬಲದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಚುನಾವಣಾ ಪೂರ್ವದಲ್ಲಿ ನೀಡಿದ್ದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಈ ಯೋಜನೆಗಳಿಗೆ ಸರ್ಕಾರ ವರ್ಷಕ್ಕೆ ₹52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಇವು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿವೆ ಎಂದು ಹೇಳಿದರು.
ರಾಜ್ಯದ ನಾಗರಿಕರ ಆಸ್ತಿ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಿ ದಾಖಲೆಗಳನ್ನು ಸರಿಪಡಿಸುವ ಕಾರ್ಯಕ್ಕೂ ಸರ್ಕಾರ ಮುಂದಾಗಿದೆ ಎಂದರು.
ಮಹಿಳಾ ನೌಕರರು ಸಂಘಟಿತರಾಗಿ ನಾಯಕತ್ವ ಬೆಳೆಸಿಕೊಳ್ಳಬೇಕು. ಸಂಘದಲ್ಲಿ ಈಗಾಗಲೇ 5,500 ಸದಸ್ಯೆಯರಿದ್ದು, ದೊಡ್ಡ ಮಟ್ಟದ ಸಮಾವೇಶ ಆಯೋಜಿಸಿದರೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಕಾನೂನು ಚೌಕಟ್ಟಿನೊಳಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಂಘದ ಬೇಡಿಕೆಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಹಿಳೆಯರಲ್ಲಿ ನಾಯಕತ್ವ ಬೆಳೆಸುವ ಉದ್ದೇಶದಿಂದ ಈ ಹಿಂದೆ ಆರಂಭಿಸಿದ್ದ ನಾ ನಾಯಕಿ ಕಾರ್ಯಕ್ರಮಕ್ಕೆ ಹೊಸ ರೂಪ ನೀಡುವ ಪ್ರಯತ್ನ ಮಾಡಲಾಗುವುದು. ಭವಿಷ್ಯದಲ್ಲಿ ಮಹಿಳಾ ಮೀಸಲಾತಿ ಜಾರಿಯಾಗುವುದು ಖಚಿತವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ನಾಯಕತ್ವದ ಅವಕಾಶಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ನಿಮ್ಮ ಜೊತೆ ಇದೆ. ನೀವು ಕೂಡ ಸರ್ಕಾರದ ಜೊತೆ ನಿಲ್ಲಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

*ಮಹಿಳಾ ನೌಕರರು ಸಂಘಟಿತರಾಗಿ ನಾಯಕತ್ವ ಬೆಳೆಸಿಕೊಳ್ಳಬೇಕು. ಸಂಘದಲ್ಲಿ ಈಗಾಗಲೇ 5,500 ಸದಸ್ಯೆಯರಿದ್ದು, ದೊಡ್ಡ ಮಟ್ಟದ ಸಮಾವೇಶ ಆಯೋಜಿಸಿದರೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು.-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net