ಮುಳಬಾಗಿಲು: ಕುವೆಂಪು ಅವರ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸವೋರ್ದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಗಳು ವಿಶ್ವಮಾನವತೆಯ ಮಾರ್ಗಗಳಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಅಧ್ಯಾಪಕಿ ಗಾಯತ್ರಿದೇವಿ ಹೇಳಿದರು.Kuvempu
ತಾಲೂಕಿನ ಆವಣಿ ಗ್ರಾಮದ ಸರ್ಕಾರಿ ಆರ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಚಕೋರ -ಕೋಲಾರ ಸಹಭಾಗಿತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕುವೆಂಪು: ವರ್ತಮಾನ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಾಹಿತ್ಯವನ್ನು ಮನರಂಜನೆಯ ಮಾಧ್ಯಮವನ್ನಾಗಿ ನೋಡದೆ ತಾತ್ವಿಕತೆಯ ದೃಷ್ಟಿಯಿಂದ ನೋಡಬೇಕು ಎಂದರು.
ಆವಣಿ ಸರ್ಕಾರಿ ಆರ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಚಂದ್ರಪ್ಪ ಮಾತನಾಡಿ, ಕುವೆಂಪು ಅವರ ಸಾಹಿತ್ಯದಲ್ಲಿ ಕನ್ನಡ ನಾಡು, ನುಡಿ, ಆಧ್ಯಾತ್ಮಿಕ ಚಿಂತನೆ, ಪ್ರಕರತಿ ಸೌಂದರ್ಯ ಹಾಗೂ ವೈಚಾರಿಕ ಪ್ರಜ್ಞೆ ಕಾಣಬಹುದಾಗಿದೆ. ಅವರ ಸಾಹಿತ್ಯ ವಿಶ್ವಮಟ್ಟದಲ್ಲಿ ದಾಖಲಾಗಿರುವುದು ಕನ್ನಡಿಗರ ಹೆಮ್ಮೆ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಸಂಚಾಲಕ ಡಾ.ಜಯಮಂಗಲ ಚಂದ್ರಶೇಖರ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಕುವೆಂಪು ಬರೆಯದ ಸಾಹಿತ್ಯ ಪ್ರಕಾರವಿಲ್ಲ ಎಂಬಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಕುವೆಂಪುರವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ವೆಂಕಟೇಶಮೂರ್ತಿ, ತಾಲೂಕು ಅಧ್ಯಕ್ಷ ಕೆ.ತ್ಯಾಗರಾಜ್, ಚುಟುಕು ಸಾಹಿತ್ಯ ಪರಿಷತ್ತಿನ ಮಾಲೂರು ತಾಲೂಕು ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್, ಉಪನ್ಯಾಸಕ ಸತೀಶ್, ವೆಂಕಟರಮಣಪ್ಪ, ಶ್ರುತಿ, ನವೀನ್ ಇದ್ದರು.