ಕಬಡ್ಡಿಯಲ್ಲಿ ಕುಣಿಗಲ್ನ ಸಿಕೆಸಿ ರನ್ನರ್ ಅಪ್

Kunigal's CKC runners-up in Kabaddi
Kunigal's CKC runners-up in Kabaddi
Published on
ಕುಣಿಗಲ್: ಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಪಟ್ಟಣದ 2ನೇ ವಾರ್ಡ್‌ನ ಜನತಾ ಕಾಲನಿಯ ಶ್ರೀ ಕೋಡಿ ಬಸವೇಶ್ವರಸ್ವಾಮಿ ತಪೋ ಪುಣ್ಯಕ್ಷೇತ್ರದಲ್ಲಿ ಭಾನುವಾರ ರಾತ್ರಿ ಕುಣಿಗಲ್ನ ಶ್ರೀ ಚಾಮುಂಡೇಶ್ವರಿ ಕಬಡ್ಡಿ ಕ್ಲಬ್(ಸಿಕೆಸಿ) ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ 5ನೇ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಜಾತ್ರೆಗೆ ಮೆರುಗು ನೀಡಿತು.
ಜೆಡಿಎಸ್ ಯುವ ಮುಖಂಡ ದಿ.ಶ್ರೀನಿವಾಸ ಎಂ.ಜಿ. ಹಾಗೂ ಕಬಡ್ಡಿ ಕೋಚ್ ದಿ.ಜಭಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಬಡ್ಡಿ ಪಂದ್ಯವನ್ನ ಶ್ರೀನಿವಾಸ್ ಅವರ ತಾಯಿ ಗಂಗಮ್ಮ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ದೇವಸ್ಥಾನದ ಅರ್ಚಕ ರವೀಶ್ ಅವರು ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ಕರೆತಂದು ಕ್ರೀಡಾಂಗಣಕ್ಕೆ ಪೂಜೆ ಸಲ್ಲಿಸಿ ಕ್ರೀಡಾಪಟುಗಳಿಗೆ ಆಶೀರ್ವದಿಸಿದರು. ಶಾಸಕ ಡಾ.ಎಚ್.ಡಿ.ರಂಗನಾಥ್, ಮಲ್ಲಾಘಟ್ಟ ವಾರ್ಡ್‌ನ ಪುರಸಭೆ ಮಾಜಿ ಸದಸ್ಯ ಮಲ್ಯನಾಗರಾಜ್ ಕ್ರೀಡಾಪಟುಗಳಿಗೆ ಶುಭಕೋರಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 20 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಫೈನಲ್ ಪ್ರವೇಶಿಸಿದ ಬೆಂಗಳೂರಿನ ವಿನಾಯಕ ಫ್ರೆಂಡ್ಸ್ ತಂಡವು ಕುಣಿಗಲ್ನ ಶ್ರೀ ಚಾಮುಂಡೇಶ್ವರಿ ಕಬಡ್ಡಿ ಕ್ಲಬ್(ಸಿಕೆಸಿ) ತಂಡದ ವಿರುದ್ಧ ಗೆದ್ದು ಟ್ರೋಫಿಗೆ ಮುತ್ತಿಟ್ಟಿತು. ಸಿಕೆಸಿ ತಂಡವು ರನ್ನರ್ ಅಪ್ ಸ್ಥಾನ ಪಡೆಯಿತು. ತೃತೀಯ ಸ್ಥಾನ ನಂಜನಗೂಡು ್ರೆಂಡ್ಸ್ ತಂಡಕ್ಕೆ, ನಾಲ್ಕನೇ ಸ್ಥಾನ ಬೆಂಗಳೂರಿನ ಮಲ್ಲತ್ತಹಳ್ಳಿ ಬಾಯ್ಸ್ ತಂಡಕ್ಕೆ ಒಲಿಯಿತು. ವಿಜೇತ ತಂಡಗಳಿಗೆ ಸಿಕೆಸಿ ಸಂಸ್ಥಾಪಕ ಎಂ.ಆರ್.ಶಿವಕುಮಾರ್ ಟ್ರೋಫಿ ವಿತರಿಸಿದರು. ವಿಜೇತ ತಂಡಕ್ಕೆ ಕ್ರಮವಾಗಿ 20 ಸಾವಿರ, 10 ಸಾವಿರ , 5 ಸಾವಿರ, 5 ಸಾವಿರ ನಗದು ಬಹುಮಾನ ನೀಡಲಾಯಿತು.
ಸಿಕೆಸಿಯ ಶಿವಕುಮಾರ್, ಚರಣ್, ಪ್ರಜ್ವಲ್ ದರ್ಶನ್, ಧನುಷ್, ಕುಶಾಲ್ ಅವರು ಪಂದ್ಯಾವಳಿಯ ಉಸ್ತುವಾರಿ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net