ಧಗಧಗನೇ ಹೊತ್ತಿ ಉರಿದ KSRTC ಬಸ್‌: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ 17 ಪ್ರಯಾಣಿಕರು!

KSRTC
KSRTC
Published on
ರಾಣೆಬೆನ್ನೂರು (ಹಾವೇರಿ): ಬೆಂಗಳೂರಿನಿಂದ ಗದಗಕ್ಕೆ ತೆರಳುತ್ತಿದ್ದ KSRTC ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಸ್ ಸಂಪೂರ್ಣ ಸುಟ್ಟು ಕರಕಲಾದ ಭೀಕರ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಬಳಿ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ 17 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಘಟನೆಯ ವಿವರ

ಸೋಮವಾರ ರಾತ್ರಿ ಬೆಂಗಳೂರಿನಿಂದ ಗದಗಕ್ಕೆ ಹೊರಟಿದ್ದ ಸಾರಿಗೆ ಬಸ್, ಮಂಗಳವಾರ ಬೆಳಗಿನ ಜಾವ ದೇವರಗುಡ್ಡದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಇಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ದಟ್ಟ ಹೊಗೆ ಬಸ್‌ನೊಳಗೆ ಆವರಿಸಿದ್ದು, ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ, ಬಸ್ಸನ್ನು ರಸ್ತೆಯ ಬದಿಗೆ ನಿಲ್ಲಿಸಿ ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಯುವಂತೆ ಸೂಚಿಸಿದ್ದಾರೆ.

ಸುಟ್ಟು ಕರಕಲಾದ ಬಸ್

ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಬಸ್‌ನಾದ್ಯಂತ ವ್ಯಾಪಿಸಿ ಅಟ್ಟಹಾಸ ಮೆರೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಅಷ್ಟರಲ್ಲಾಗಲೇ ಬಸ್ ಸಂಪೂರ್ಣವಾಗಿ ಅಸ್ಥಿಪಂಜರದಂತಾಗಿತ್ತು. ಸದ್ಯ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆದ್ದಾರಿಯಲ್ಲಿ ಕೆಲಕಾಲ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಪೊಲೀಸರು ತೆರವುಗೊಳಿಸಿದರು. "ಸಾವು-ನೋವು ಸಂಭವಿಸಬಹುದಾದ ದೊಡ್ಡ ದುರಂತವೊಂದು ಚಾಲಕನ ತಾಳ್ಮೆಯಿಂದ ತಪ್ಪಿದೆ" ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net