ಏಕಾತ್ಮ ಮಾನವ ದರ್ಶನ ವಿವಿಯ ಅಧಿಕೃತ ಕಾರ್ಯಕ್ರಮವಲ್ಲವೆಂದ ಕೆಎಸ್‌ಒಯು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಈ ಕಾರ್ಯಕ್ರಮವು ವಿವಿಯ ಅಧಿಕೃತ ಕಾರ್ಯಕ್ರಮವಲ್ಲ. ಸ್ಥಳವನ್ನು ಮಾತ್ರ ಬಾಡಿಗೆ ನೀಡಲಾಗಿದೆ. ಗಣ್ಯರ ಆಯ್ಕೆ, ವಕ್ತಾರರು, ಅತಿಥಿಗಳ ಆಯ್ಕೆ ಮತ್ತು ಆಹ್ವಾನದ ಆಯ್ಕೆಯಲ್ಲಿ ವಿವಿಯ ಪಾತ್ರವಿಲ್ಲ
  • ಆಯೋಜಕ ಸಂಸ್ಥೆಯ ಆಹ್ವಾನದ ಮೇರೆಗೆ ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.
  • ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅನುಕೂಲವಾಗಲೆಂದು ಆಹ್ವಾನ ಪತ್ರಿಕೆಯಲ್ಲಿ ಕೆಎಸ್‌ಒಯು ಲೋಗೋ ಬಳಸಲಾಗಿದೆ.
ಬೆಂಗಳೂರು: ‘ಏಕಾತ್ಮ ಮಾನವ ದರ್ಶನ- ಭಾರತದ ವಿಶ್ವದೃಷ್ಟಿ’ ಎಂಬ ಸಮ್ಮೇಳನವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ಕಾರ್ಯಕ್ರಮವಲ್ಲ. ಪ್ರಜ್ಞಾ ಪ್ರವಾಹ ಸಂಸ್ಥೆಯ ವಿನಂತಿ ಮೇರೆಗೆ ವಿವಿಯ ಘಟಿಕೋತ್ಸವ ಭವನವನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗಿದೆ. ಕಾರ್ಯಕ್ರಮವನ್ನು ಸಂಪೂರ್ಣವಾಗಿ ಈ ಸಂಸ್ಥೆಯೇ ಸ್ವತಂತ್ರವಾಗಿ ಆಯೋಜಿಸಿದ್ದು, ಬಾಡಿಗೆ ಸಹ ಪಾವತಿಸಿದೆ ಎಂದು ಕೆಎಸ್‌ಒಯು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸ್ಪಷ್ಟನೆ ನೀಡಿದ್ದಾರೆ.
ಕೆಎಸ್‌ಒಯು ಮೇ 25ರಿಂದ 27ರವರೆಗೆ ‘ಪ್ರಜ್ಞಾ ಪ್ರವಾಹ ಮತ್ತು ಡಾ. ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನ’ದ ಸಹಯೋಗದಲ್ಲಿ ‘ಏಕಾತ್ಮ ಮಾನವ್ ದರ್ಶನ್’ ಎಂಬ ಭಾರತ್ ವರ್ಲ್ಡ್ ವ್ಯೆ (ಭಾರತದ ವಿಶ್ವ ದೃಷ್ಟಿಕೋನ) ಕುರಿತು ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಮ್ಮೇಳನ ಆಯೋಜಿಸಿರುವ ವಿಚಾರವಾಗಿ ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ಕಾರಣ ಕೇಳಿ ರಾಜ್ಯ ಸರ್ಕಾರವು ಸೋಮವಾರ ನೋಟಿಸ್ ಜಾರಿಗೊಳಿಸಿತ್ತು.
ಈ ವಿಚಾರವಾಗಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕೆಎಸ್‌ಒಯು ಕುಲಪತಿಗಳು ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಈ ಕಾರ್ಯಕ್ರಮವು ವಿವಿಯ ಅಧಿಕೃತ ಕಾರ್ಯಕ್ರಮವಲ್ಲ. ಸ್ಥಳವನ್ನು ಮಾತ್ರ ಬಾಡಿಗೆ ನೀಡಲಾಗಿದೆ. ಗಣ್ಯರ ಆಯ್ಕೆ, ವಕ್ತಾರರು, ಅತಿಥಿಗಳ ಆಯ್ಕೆ ಮತ್ತು ಆಹ್ವಾನದ ಆಯ್ಕೆಯಲ್ಲಿ ವಿವಿಯ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ಆಯೋಜಕ ಸಂಸ್ಥೆಯ ಆಹ್ವಾನದ ಮೇರೆಗೆ ರಾಜ್ಯಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ. ವಿವಿಯು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದು, ಕಾರ್ಯಕ್ರಮ ಆಯೋಜನೆ ಅಥವಾ ಶಿಷ್ಟಾಚಾರ ಸಂಬಂಧಿತ ವಿಷಯಗಳಲ್ಲಿ ಯಾವುದೇ ಪಾತ್ರವಹಿಸಿಲ್ಲ ಎಂಬ ಮಾಹಿತಿನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅನುಕೂಲವಾಗಲೆಂದು ಆಹ್ವಾನ ಪತ್ರಿಕೆಯಲ್ಲಿ ಕೆಎಸ್‌ಒಯು ಲೋಗೋ ಬಳಸಲಾಗಿದೆ. ವಾಡಿಕೆಯಂತೆ ಕುಲಪತಿಗಳನ್ನು ಮುಖ್ಯ ಅತಿಥಿಗಳನ್ನಾಗಿ ಕರೆಯಲಾಗಿದೆ ಎಂದು ಪತ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net