ರಚನೆಯಾಗದ ಕೃಷ್ಣಾ ನೀರಾವರಿ ಸಲಹಾ ಸಮಿತಿ

ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ಆಲಮಟ್ಟಿ ಜಲಾಶಯದಲ್ಲಿ ಶೇ. 82ರಷ್ಟು ನೀರು ಸಂಗ್ರಹ
  • ಆರಂಭವಾಗದ ಬಿತ್ತನೆ ಕಾರ್ಯ
  • ರೈತರಲ್ಲಿ ಹೆಚ್ಚಿದ ಆತಂಕ
ಆಲಮಟ್ಟಿ : ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾಗಿರುವ ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿ ಹಲವು ಜಿಲ್ಲೆಗಳ ರೈತರು ಮುಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆ ನೀರಿನ ನಿರೀಕ್ಷೆಯಲ್ಲಿದ್ದಾರೆ.
ಆದರೆ ಕೃಷ್ಣಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಇನ್ನೂ ರಚನೆಯಾಗದಿರುವುದು ಹಾಗೂ ಸಭೆ ನಡೆಯದಿರುವುದರಿಂದ ನೀರು ಬಿಡುಗಡೆ ಕುರಿತು ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಇದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರ ಸೇರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಉತ್ತಮ ಪ್ರಮಾಣದಲ್ಲಿ ಒಳಹರಿವು ಬರುತ್ತಿದ್ದು, ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಪ್ರಸ್ತುತ ಆಲಮಟ್ಟಿ ಜಲಾಶಯದಲ್ಲಿ ಶೇ. 82ರಷ್ಟು ನೀರು ಸಂಗ್ರಹವಾಗಿದ್ದು, ನೀರಾವರಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಆದರೂ ಕಾಲುವೆಗಳಿಗೆ ನೀರು ಹರಿಸುವ ಕುರಿತು ಅಧಿಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ.
ಪ್ರತಿ ವರ್ಷ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ, ಕುಡಿಯುವ ನೀರಿನ ಅಗತ್ಯ, ಬೆಳೆಗಳ ಅವಧಿ ಹಾಗೂ ರೈತರ ಬೇಡಿಕೆಗಳನ್ನು ಪರಿಗಣಿಸಿ ಕಾಲುವೆಗಳಿಗೆ ನೀರು ಬಿಡುವ ದಿನಾಂಕ ನಿಗದಿಪಡಿಸಲಾಗುತ್ತದೆ. ಆದರೆ ಈ ಬಾರಿ ಸಮಿತಿ ರಚನೆ ವಿಳಂಬವಾಗಿರುವುದರಿಂದ ಸಭೆಯೂ ನಿಗದಿಯಾಗಿಲ್ಲ. ಇದರಿಂದ ರೈತರು ಯಾವ ಬೆಳೆ ಬೆಳೆಯಬೇಕು, ಬಿತ್ತನೆ ಕಾರ್ಯವನ್ನು ಯಾವಾಗ ಆರಂಭಿಸಬೇಕು ಎಂಬ ಗೊಂದಲದಲ್ಲಿದ್ದಾರೆ.

ಬೆಳೆ ಯೋಜನೆಗೆ ತೊಂದರೆ

ಆಲಮಟ್ಟಿ ಜಲಾಶಯದ ನೀರಿನ ಮೇಲೆ ಅವಲಂಬಿತವಾಗಿರುವ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ ಸೇರಿ ವಿವಿಧ ಭಾಗಗಳ ರೈತರು ಕಾಲುವೆ ನೀರಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕೆಲವೆಡೆ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಿದ್ದು, ನೀರಾವರಿ ಬೆಳೆಗಳಾದ ಕಬ್ಬು, ಭತ್ತ, ತೋಟಗಾರಿಕಾ ಬೆಳೆಗಳಿಗೆ ನೀರಿನ ಲಭ್ಯತೆ ಕುರಿತು ರೈತರು ಚಿಂತಿತರಾಗಿದ್ದಾರೆ.

ಸಮಿತಿ ರಚನೆಗೆ ಒತ್ತಾಯ

ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ರೈತರ ಹಿತದೃಷ್ಟಿಯಿಂದ ನೀರು ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ. ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ವಿಳಂಬ ಮಾಡದೆ ಕಾಲುವೆಗಳಿಗೆ ಹಂತ ಹಂತವಾಗಿ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೃಷ್ಣಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರವೇ ಈ ಭಾಗದ ಲಕ್ಷಾಂತರ ರೈತರ ಬೆಳೆ ಭವಿಷ್ಯವನ್ನು ನಿರ್ಧರಿಸಲಿದೆ. ಹೀಗಾಗಿ ಸಮಿತಿ ರಚನೆ ಹಾಗೂ ಸಭೆಗಾಗಿ ರೈತರು ಎದುರು ನೋಡುತ್ತಿದ್ದಾರೆ.

ಜಲಾಶಯದಲ್ಲಿ ನೀರಿನ ಸಂಗ್ರಹ ಉತ್ತಮವಾಗಿದ್ದರೂ ಕಾಲುವೆ ನೀರು ಬಿಡುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ರೈತರು ಬೆಳೆ ಯೋಜನೆ ರೂಪಿಸಿಕೊಳ್ಳಲು ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಕೃಷ್ಣಾ ನೀರಾವರಿ ಸಲಹಾ ಸಮಿತಿ ರಚಿಸಿ ಸಭೆ ನಡೆಸಿ ನೀರು ಬಿಡುಗಡೆ ದಿನಾಂಕ ಪ್ರಕಟಿಸಬೇಕು.

ಸಾಬಣ್ಣ ಅಂಗಡಿ ರೈತ ಮುಖಂಡ, ಮಜೀರೆಕೊಪ್ಪ

"

ಕೃಷ್ಣಾ ನೀರಾವರಿ ಸಲಹಾ ಸಮಿತಿ ರಚನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೇ ಕೆಬಿಜೆಎನ್‌ಎಲ್ ಎಂಡಿ ಅವರಿಗೆ ಸೂಚಿಸಲಾಗಿದೆ. ಪ್ರಸ್ತಾವನೆ ಬಂದ ದಿನವೇ ಸಮಿತಿ ರಚಿಸಲಾಗುವುದು.

ರಾಮಲಿಂಗಾ ರೆಡ್ಡಿ ಜಲ ಸಂಪನ್ಮೂಲ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net