ಮಹತ್ವದ ಹೆಜ್ಜೆ ಇಟ್ಟ ಕೆಪಿಟಿಸಿಎಲ್ಟ್ರಾ: ನ್ಸ್‌ಫಾರ್ಮರ್‌ಗಳಿಗೆ ಹಾನಿಕಾರಕ ಆಯಿಲ್ ಗೆ ಬದಲಿಗೆ ಬಯೋಡಿಗ್ರೇಡಬಲ್ ನ್ಯಾಚುರಲ್ ಎಸ್ಟರ್ ಆಯಿಲ್ ಬಳಕೆ

k j george
k j george
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಾದ್ಯಂತ ವಿದ್ಯುತ್ ಜಾಲದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 3,754 ಟ್ರಾನ್ಸ್‌ಫಾರ್ಮರ್‌
  • ಸಾಮಾನ್ಯ ಮಿನರಲ್ ಆಯಿಲ್ ಗಳಿಗೆ ಹೋಲಿಸಿದರೆ, ಸಸ್ಯ ಆಧಾರಿತ ಎಸ್ಟರ್ ತೈಲಗಳು ಬಯೋಡಿಗ್ರೇಡಬಲ್ ಆಗಿವೆ
ಬೆಂಗಳೂರು:
ಪರಿಸರ ಸಂರಕ್ಷಣೆ ಮತ್ತು ವಿದ್ಯುತ್ ಜಾಲದ ಆಧುನೀಕರಣದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್), ತನ್ನ ಹೈ-ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳ ಜಾಲದಲ್ಲಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಮತ್ತು ಹಾನಿಕಾರಕ ಮಿನರಲ್ ಆಯಿಲ್ (ಖನಿಜ ತೈಲ) ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಹಾಗೂ ಬಯೋಡಿಗ್ರೇಡಬಲ್ ನ್ಯಾಚುರಲ್ ಎಸ್ಟರ್ ಆಯಿಲ್ ಗೆ ಬದಲಾಯಿಸಲು ಆದೇಶ ಹೊರಡಿಸಿದೆ.
ಲಕ್ಷಾಂತರ ಗ್ರಾಹಕರಿಗೆ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳವ ನಿಟ್ಟಿನಲ್ಲಿ, ಕೆಪಿಟಿಸಿಎಲ್ ಕೈಗೊಂಡಿರುವ ಈ ಪರಿಸರ ಸ್ನೇಹಿ ಉಪಕ್ರಮವು, ಮೂಲಸೌಕರ್ಯ ನಿರ್ವಹಣೆಯಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲಾಗಿದೆ.
ರಾಜ್ಯದಾದ್ಯಂತ ವಿದ್ಯುತ್ ಜಾಲದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 3,754 ಟ್ರಾನ್ಸ್‌ಫಾರ್ಮರ್‌ಗಳ ಪೈಕಿ, ಕೆಪಿಟಿಸಿಎಲ್ ಕಾರ್ಯತಂತ್ರದ ಭಾಗವಾಗಿ 45 ಹೈ-ಕೆಪಾಸಿಟಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಸ್ಯ ಆಧಾರಿತ ನ್ಯಾಚುರಲ್ ಎಸ್ಟರ್ ಆಯಿಲ್ ನೊಂದಿಗೆ ಬದಲಾಯಿಸಲಾಗಿದೆ.
ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವ ಆರ್ಥಿಕ ಹೊರೆಯ ಬದಲಿಗೆ, 15 ವರ್ಷಗಳಿಗಿಂತಲೂ ಹಳೆಯ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಿ, ಅವುಗಳ ಜೀವಿತಾವಧಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವಿಧಾನವು ಹಳೆಯ ಗ್ರಿಡ್ ಸ್ವತ್ತುಗಳ ಉಷ್ಣ ದಕ್ಷತೆಯನ್ನು ಹೆಚ್ಚಿಸುವುದಲ್ಲದೆ, ಸಾಂಪ್ರದಾಯಿಕ ಪೆಟ್ರೋಲಿಯಂ ಆಧಾರಿತ ತೈಲಗಳ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯದ ಅಪಾಯಗಳನ್ನು ತಡೆಯುತ್ತದೆ.
ಸಾಮಾನ್ಯ ಮಿನರಲ್ ಆಯಿಲ್ ಗಳಿಗೆ ಹೋಲಿಸಿದರೆ, ಸಸ್ಯ ಆಧಾರಿತ ಎಸ್ಟರ್ ತೈಲಗಳು ಬಯೋಡಿಗ್ರೇಡಬಲ್ ಆಗಿವೆ ಹಾಗೂ ಹೆಚ್ಚಿನ ಉಷ್ಣ ಸಹಿಷ್ಣುತೆಯನ್ನು ಹೊಂದಿವೆ. ಇದರಿಂದಾಗಿ ಹೆಚ್ಚು ಜನನಿಬಿಡ ನಗರ ಪ್ರದೇಶಗಳು ಹಾಗೂ ದೂರದ ಉಪಕೇಂದ್ರಗಳಲ್ಲಿ ಕಾರ್ಯಾಚರಣೆಯ ಸುರಕ್ಷತೆ ಹೆಚ್ಚಾಗಲಿದೆ.
ಈಗಾಗಲೇ ಕೆಪಿಟಿಸಿಎಲ್, ಪ್ರಾಯೋಗಿಕವಾಗಿ 45 ಟ್ರಾನ್ಸ್‌ಫಾರ್ಮರ್‌ಗಳಲ್ಲಿ ನ್ಯಾಚುರಲ್ ಎಸ್ಟರ್ ಆಯಿಲ್ ಅಳವಡಿಸಲಾಗಿದ್ದು, ಸುಮಾರು 1500 ಲೀಟರ್‌ಗಳಷ್ಟು ಮಿನರಲ್ ಆಯಿಲ್ ಬಳಕೆಯನ್ನು ತಪ್ಪಿಸಲಾಗಿದೆ. ಹಂತಹಂತವಾಗಿ ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಕೆಪಿಟಿಸಿಎಲ್ ತನ್ನ ವ್ಯಾಪ್ತಿಯಲ್ಲಿನ ಟ್ರಾನ್ಸ್‌ಫಾರ್ಮ್‌ರ್‌ಗಳಲ್ಲಿ ಪರಿಸರ ಸ್ನೇಹಿ ಆಯಿಲ್ ಅಳವಡಿಸಿಕೊಳ್ಳಲಿದೆ.

*ಕೆಪಿಟಿಸಿಎಲ್ ಜಾಲದಲ್ಲಿ ಬಯೋಡಿಗ್ರೇಡಬಲ್ ನ್ಯಾಚುರಲ್ ಎಸ್ಟರ್ ಆಯಿಲ್ ಅನ್ನು ಅಳವಡಿಸಿಕೊಳ್ಳುವ ಮೂಲಕ, ಪರಿಸರವನ್ನುವಿಷಕಾರಿ ರಾಸಾಯನಿಕಗಳಿಂದ ರಕ್ಷಿಸುವುದರೊಂದಿಗೆ, ಪ್ರಮುಖ ವಿದ್ಯುತ್ ಕೇಂದ್ರಗಳಲ್ಲಿ ಬೆಂಕಿ ಅವಘಡಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ಮುಂದಾಗಿದೆ.-ಕೆ.ಜೆ. ಜಾರ್ಜ್, ಇಂಧನ ಸಚಿವರು.



* 15 ವರ್ಷ ಮೇಲ್ಪಟ್ಟ ಹಳೆಯ ಟ್ರಾನ್ಸ್‌ಫಾರ್ಮರ್‌ಗಳಿಗೆ ನ್ಯಾಚುರಲ್ ಎಸ್ಟರ್ ಆಯಿಲ್ ಅಳವಡಿಸಲು ಆದ್ಯತೆ ನೀಡುವುದರಿಂದ, ಅತಿ ಕಡಿಮೆ ವೆಚ್ಚದಲ್ಲಿ ಪ್ರಮುಖ ಗ್ರಿಡ್ ಸ್ವತ್ತುಗಳ ಜೀವಿತಾವಧಿಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿದೆ. ಕೆಪಿಟಿಸಿಎಲ್ ನ ಎಂಜಿನಿಯರಿಂಗ್ ಕಾರ್ಯವೈಖರಿಯಲ್ಲಿ ಪರಿಸರ ಕಾಳಜಿಯು ಹಾಸುಹೊಕ್ಕಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಾಂಪ್ರದಾಯಿಕ ವಿಧಾನಗಳಿಂದ ವ್ಯವಸ್ಥಿತವಾಗಿ ಬದಲಾಗುತ್ತಿದ್ದೇವೆ.-ಡಾ. ವಿ. ರಾಮ್ ಪ್ರಸಾತ್ ಮನೋಹರ್, ಕೆಪಿಟಿಸಿಎಲ್ ನ ವ್ಯವಸ್ಥಾಪಕ ನಿರ್ದೇಶಕರು



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net