ಕೋಲಾರವನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಲಿ

Kolar should be declared a drought-hit district.
Kolar should be declared a drought-hit district.
Published on
ಕೋಲಾರ: ಸರ್ಕಾರದ ಮಟ್ಟದಲ್ಲಿರುವ ಎಪಿಎಂಸಿ ಜಾಗದಲ್ಲಿ 100 ಎಕರೆ ಕಡತಕ್ಕೆ ಕೂಡಲೇ ಮುಕ್ತಿ ನೀಡಬೇಕು. ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಿಸಿ ಸ್ಥಳಿಯರಿಗೆ ಉಸ್ತುವಾರಿ ಹೊಣೆ ನೀಡುವ ಜತೆಗೆ ಕೋಲಾರವನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ಬರ ನಿರ್ವಹಣೆಗೆ 3 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಮಂಗಳಾ ಅವರಿಗೆ ಮನವಿ ಸಲ್ಲಿಸಿದರು.
ಸಂಘದವರ ಮನವಿ ಸ್ವೀಕರಿಸದೆ ಸಭೆಗೆ ಹೋದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಘದ ಕಾರ್ಯಕರ್ತರನ್ನು ಸಮಾಧಾನಿಸಿದ ಪೋಲೀಸರು ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸ್ವೀಕರಿಸಿ ಉಪ ಮುಖ್ಯಮಂತ್ರಿಗಳಿಗೆ ತಲುಪಿಸುವ ಭರವಸೆ ನೀಡಿದರು.
ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯ ರೈತರು, ಕೂಲಿ ಕಾರ್ಮಿಕರು ಹಾಗೂ ಕೃಷಿ ವಲಯದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬದಲಿಸಿ ಸ್ಥಳಿಯ ಹಿರಿಯ ಶಾಸಕರಿಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
ಏಷ್ಯಾದ 2ನೇ ಅತಿದೊಡ್ಡ ಟೊಮ್ಯಾಟೊ ಮತ್ತು ತರಕಾರಿ ಮಾರುಕಟ್ಟೆಯಾದ ಕೋಲಾರ ಎಪಿಎಂಸಿಯಲ್ಲಿ ಜಾಗದ ಕೊರತೆ ತೀವ್ರವಾಗಿದೆ. ಸರ್ಕಾರದ ಮಟ್ಟದಲ್ಲಿರುವ 100 ಎಕರೆ ಜಾಗದ ಕಡತ ಕಳೆದ 20 ವರ್ಷಗಳಿಂದ ಬಾಕಿ ಇರುವುದರಿಂದ ರೈತರು ಹಾಗೂ ವ್ಯಾಪಾರಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಅಧ್ಯಕ್ಷ ಮರಗಲ್​ ಶ್ರೀನಿವಾಸ ಮಾತನಾಡಿ, ಗೊಬ್ಬರ, ಬೀಜ, ಕೃಷಿ ಪರಿಕರಗಳ ಬೆಲೆ ಏರಿಕೆ ಹಾಗೂ ಕಾರ್ಮಿಕರ ಕೊರತೆಯಿಂದ ಒಂದು ಎಕರೆ ಟೊಮ್ಯಾಟೊ ಬೆಳೆಯಲು ಸುಮಾರು 3 ಲಕ್ಷ ರೂ. ತಗಲುತ್ತದೆ. ಆದರೆ ಮಾರುಕಟ್ಟೆಯ ಅವ್ಯವಸ್ಥೆಯಿಂದ ರೈತರಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುವ ಜತೆಗೆ ತರಕಾರಿ ಸಾಗಾಣಿಕೆ ವಾಹನಗಳು ವಿಳಂಬವಾಗಿ ತಲುಪುವುದರಿಂದ ಹರಾಜು ಪ್ರಕ್ರಿಯೆಯಲ್ಲೂ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಉಪಾಧ್ಯಕ್ಷ ಕೆ.ನಾರಾಯಣಗೌಡ, ಅಧ್ಯಕ್ಷ ಮರಗಲ್​ ಶ್ರೀನಿವಾಸ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ಪುತ್ತೇರಿ ರಾಜು, ಮಂಗಸಂದ್ರ ತಿಮ್ಮಣ್ಣ, ಗಿರೀಶ್​ ಮಂಗಸಂದ್ರ ನಾಗೇಶ, ವಕ್ಕಲೇರಿ ಹನುಮಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net