ಸುರಕ್ಷತಾ ಕ್ರಮಗಳ ತಿಳಿವಳಿಕೆ ಅಗತ್ಯ

ಮಹಾಲಿಂಗಪುರ ಸಮೀಪದ ಗೋದಾವರಿ ಬಯೋರಿಫೈನರೀಸ್‌ನಲ್ಲಿ ಜರುಗಿದ ತುರ್ತು ಪರಿಸ್ಥಿತಿ ಕುರಿತು ಜರುಗಿದ ಅಣಕು ಪ್ರದರ್ಶನದಲ್ಲಿ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ಪ್ರಕಾಶ ಪವಾರ, ದಿನೇಶ ಶರ್ಮಾ ಸೇರಿ ಇತರರು ಭಾಗಿಯಾಗಿದ್ದರು.
ಮಹಾಲಿಂಗಪುರ ಸಮೀಪದ ಗೋದಾವರಿ ಬಯೋರಿಫೈನರೀಸ್‌ನಲ್ಲಿ ಜರುಗಿದ ತುರ್ತು ಪರಿಸ್ಥಿತಿ ಕುರಿತು ಜರುಗಿದ ಅಣಕು ಪ್ರದರ್ಶನದಲ್ಲಿ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ, ಪ್ರಕಾಶ ಪವಾರ, ದಿನೇಶ ಶರ್ಮಾ ಸೇರಿ ಇತರರು ಭಾಗಿಯಾಗಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಬಾಲಚಂದ್ರ ಬಕ್ಷಿ ಹೇಳಿಕೆ
  • ತುರ್ತು ಪರಿಸ್ಥಿತಿ ಕುರಿತು ಅಣಕು ಪ್ರದರ್ಶನ
ಮಹಾಲಿಂಗಪುರ: ಅಗ್ನಿ ಅವಘಡ ಸಂದರ್ಭದಲ್ಲಿ ಸಣ್ನ ನಿರ್ಲಕ್ಷೃ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದಾದ್ದರಿಂದ ಇಂತಹ ಸಂದರ್ಭಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿವಳಿಕೆ ಇರುವುದು ಮುಖ್ಯ ಎಂದು ಗೋದಾವರಿ ಬಯೋರಿಫೈನರೀಸ್ ಕಾರ್ಖಾನೆ ಕಾರ್ಯ ನಿರ್ವಾಹಕ ನಿರ್ದೇಶಕ ಬಾಲಚಂದ್ರ ಬಕ್ಷಿ ಹೇಳಿದರು.
ಇತ್ತೀಚೆಗೆ ಕಾರ್ಖಾನೆಯಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಕುರಿತು ಅಣಕು ಪ್ರದರ್ಶನದಲ್ಲಿ ಮಾತನಾಡಿದ ಅವರು, ಸುರಕ್ಷತೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಕಾರ್ಖಾನೆಯಲ್ಲಿ ಅಣಕು ಪ್ರದರ್ಶನಗಳನ್ನು ಆಯೋಜಿಸುವುದರಿಂದ, ಉದ್ಯೋಗಿಗಳು ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಸ್ಪಂದಿಸಲು ಸಿದ್ಧರಾಗುತ್ತಾರೆ.
ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದರೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಕಾರ್ಖಾನೆ ತುರ್ತು ಪ್ರತಿಕ್ರಿಯಾ ತಂಡ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ, ತುರ್ತು ನಿರ್ವಹಣಾ ಕಾರ್ಯವಿಧಾನಗಳನ್ನು ಕಾರ್ಯಗತಗೊಳಿಸಿತು.
ಅಣಕು ಪ್ರದರ್ಶನದಲ್ಲಿ ತುರ್ತು ಕಾರ್ಯಾಚರಣೆ ಯೋಜನೆ ಸಕ್ರಿಯಗೊಳಿಸುವುದು, ತುರ್ತು ಅಲಾರಾಂ ಮೊಳಗಿಸುವುದು, ಉದ್ಯೋಗಿಗಳನ್ನು ಸುರಕ್ಷಿತವಾಗಿ ನಿಯೋಜಿತ ಸಭೆ ಸೇರುವ ಸ್ಥಳಗಳಿಗೆ ಸ್ಥಳಾಂತರಿಸುವುದು, ಅಗ್ನಿಶಾಮಕ ಕಾರ್ಯಾಚರಣೆ, ಗಾಯಗೊಂಡ ಸಿಬ್ಬಂದಿಯನ್ನು ರಕ್ಷಿಸುವುದು, ಅವರಿಗೆ ಪ್ರಥಮ ಚಿಕಿತ್ಸೆ ನೀಡುವುದು ಮತ್ತು ವಿವಿಧ ತುರ್ತು ಸೇವಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಪ್ರಕ್ರಿಯೆಗಳನ್ನು ಪ್ರದರ್ಶಿಸಲಾಯಿತು.
ಘಟನೆಗೆ ಸ್ಪಂದಿಸುವ ಸಮಯ, ಸಂವಹನ ವ್ಯವಸ್ಥೆಗಳು ಮತ್ತು ವಿವಿಧ ತಂಡಗಳ ನಡುವಿನ ಪರಸ್ಪರ ಸಮನ್ವಯತೆಯನ್ನು ಮೌಲ್ಯಮಾಪನ ಮಾಡಲಾಯಿತು. ಬಾಗಲಕೋಟೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ ಪವಾರ ಅವರ ಮಾರ್ಗದರ್ಶನದಲ್ಲಿ ಈ ಪ್ರದರ್ಶನ ಜರುಗಿತು.
ಕಾರ್ಖಾನೆ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ, ವಿ.ಕೆ.ಕಿಲಾರಿ, ಸೋಮಶೇಖರ ಪೇಟಿಮನಿ, ರಾಮಚಂದ್ರ ಸೋನವಾಲ್ಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net