'ನಮ್ಮ ಬೆಕ್ಕು ಮರಿ ಹಾಕೋಕೆ ನಿಮ್ಮ ಬೆಕ್ಕು ಕಾರಣ ನೀವೆ ಮರಿ ಸಾಕಿ'; ಬೆಂಗಳೂರಿನಲ್ಲಿ ಠಾಣೆ ಮೆಟ್ಟಿಲೇರಿದ Cat Fight

Bengaluru Cat Dispute
Bengaluru Cat Dispute
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ನೆರೆಹೊರೆಯವರ ನಡುವೆ ಬೆಕ್ಕು ಮರಿ ಸಾಕುವ ವಿಚಾರಕ್ಕೆ ಜಗಳ, ಪೊಲೀಸರ ಎಂಟ್ರಿ
  • ನಿಮ್ಮ ಬೆಕ್ಕಿನಿಂದ ಮರಿ ಹಾಕಿದೆ ನೀವೆ ಸಾಕಿ ಎಂದು ವಾಗ್ದಾಳಿ
  • ಆಸಿಡ್​ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ಹೆಣ್ಣು ಬೆಕ್ಕು ಮಾಲೀಕರು
ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಾಯಿಗೆ ಊಟ ಹಾಕುವ ವಿಚಾರಕ್ಕೆ ಗಲಾಟೆಯಾಗೋದು, ಸಾಕು ಹಸುಗಳು ರಸ್ತೆ ಮಧ್ಯೆ ಬಂದು ನಿಂತಾಗ ಮಾಲೀಕರನ್ನು ಬೈದಾಡೋದು, ಮನೆ ಮುಂದೆ ಕಸ ಸುರಿದರೆ, ಹೂ ಕಿತ್ತರೆ ಜಗಳ ಮಾಡೋದು ನೋಡಿದ್ದೇವೆ. ಆದ್ರೆ ಜೈಭೀಮನಗರದಲ್ಲಿ ಬೆಕ್ಕು ಮರಿ ಹಾಕಿದ್ದಕ್ಕಾಗಿ, ಬೆಕ್ಕಿನ ಮರಿಗಳ(Bengaluru Cat Dispute) ತಂದೆ ಯಾರು ಎನ್ನುವ ವಿಚಾರಕ್ಕೆ ನೆರೆಹೊರೆಯವರು ಕಿತ್ತಾಡಿಕೊಂಡ ವಿಚಿತ್ರ ಘಟನೆ ಸದ್ಯ ಶೇಷಾದ್ರಿಪುರಂ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.
ಶೇಷಾದ್ರಿಪುರಂನಲ್ಲಿರುವ ಜೈಭೀಮನಗರದಲ್ಲಿರುವ ಕುಟುಂಬವೊದು ಹೆಣ್ಣು ಬೆಕ್ಕನ್ನು ಸಾಕಿಕೊಂಡಿತ್ತು. ಅದು ಭಾನುವಾರ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಿಂದ ಸಿಟ್ಟಾದ ಇವರು, ಗಂಡು ಬೆಕ್ಕು ಸಾಕಿಕೊಂಡಿದ್ದ ಕುಟುಂಬದ ಜೊತೆ ವಾಗ್ವಾದಕ್ಕಿಳಿದ ಘಟನೆ ವಿಕೋಪಕ್ಕೆ ತಿರುಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಮಧ್ಯಪ್ರವೇಶಿಸಿದ ನಂತರವೇ ಸಮಸ್ಯೆಗೆ ಮುಕ್ತಿ ಸಿಕ್ಕಿದೆ ಎನ್ನಲಾಗಿದೆ.

ನಿಮ್ಮ ಬೆಕ್ಕು ಮರಿಗಳ ತಂದೆ

ಜೈ ಭೀಮನಗರದಲ್ಲಿ ಭಾನುವಾರ ಬೆಳಿಗ್ಗೆ ಹೆಣ್ಣು ಬೆಕ್ಕಿನ ಮಾಲೀಕರು ಅವುಗಳ ನಾಲ್ಕು ಮರಿ ಹಿಡಿದು, ಅದನ್ನೊಂದು ಬುಟ್ಟಿಗೆ ಹಾಕಿ ಗಂಡು ಬೆಕ್ಕಿನ ಮನೆಯ ಮುಂದೆ ಇಟ್ಟರು. ನಿಮ್ಮ ಬೆಕ್ಕಿನಿಂದಲೇ ನಮ್ಮ ಬೆಕ್ಕಿಗೆ ಮರಿ ಹುಟ್ಟಿವೆ. ಇದಕ್ಕೆ ನೀವೇ ಜವಾಬ್ದಾರರು. ಇವುಗಳನ್ನು ನೀವೇ ಸಾಕಬೇಕು ಎಂದು ಪಟ್ಟು ಹಿಡಿದರು. ಇದ್ರಿಂದ ಸಿಟ್ಟಾದ ಅವರು ಇಲ್ಲ ಇದು ಸತ್ಯಕ್ಕೆ ದೂರವಾದ ಮಾತು ಎಂದು ವಾಗ್ದಾಳಿ ನಡೆಸಿದರು.

ಆಸಿಡ್​ ಹಾಕೋದಾಗಿ ಬೆದರಿಕೆ

ಬೆಕ್ಕಿನ ಮರಿ ಸಾಕುವ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿತು. ಕೈಕೈ ಮಿಲಾಯಿಸಿಕೊಂಡಿದ್ದಾರೆ. ಕೊನೆಗೆ ಹೆಣ್ಣು ಬೆಕ್ಕಿನ ಮರಿಗಳ ಮಾಲೀಕರು, ಗಂಡು ಬೆಕ್ಕಿನ ಮಾಲೀಕರ ಮಕ್ಕಳ ಮೇಲೆ Acid ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದ್ರಿಂದ ಆತಂಕಗೊಂಡ ಅವರು ಕೂಡಲೇ 112ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಗಲಾಟೆ ಪೀಡಿತ ಪ್ರದೇಶಕ್ಕೆ ಬಂದ ಶೇಷಾದ್ರಿಪುರಂ ಪೊಲೀಸ್ ಠಾಣೆಯ ಹೊಯ್ಸಳ ತಂಡದವರು, ಎರಡು ಕಡೆಯವರನ್ನು ಸಮಾಧಾನ ಪಡಿಸಿ ಕ್ಷುಲ್ಲಕ್ಕ ವಿಚಾರಕ್ಕೆ ಗಲಾಟೆ ಮಾಡಬೇಡಿ ಎಂದು ಸಮಾಧಾನ ಪಡಿಸಿದರು. ಆ ನಂತರ ಇಬ್ಬರಿಗೆ ಎರೆಡೆಡು ಬೆಕ್ಕನ್ನು ಸಮಾನವಾಗಿ ಹಂಚಿದರು. ಗಲಾಟೆ ಇತ್ಯರ್ಥಗೊಳಿಸಿ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net