ಕೆಜಿಎಫ್ ಮಿನಿವಿಧಾನಸೌಧದಲ್ಲಿ ಕೈಕೊಟ್ಟ ಲಿಫ್ಟ್​ lift

ಕೆಜಿಎಫ್ ಮಿನಿವಿಧಾನಸೌಧದಲ್ಲಿ ಕೈಕೊಟ್ಟ ಲಿಫ್ಟ್​ lift
ಕೆಜಿಎಫ್ ಮಿನಿವಿಧಾನಸೌಧದಲ್ಲಿ ಕೈಕೊಟ್ಟ ಲಿಫ್ಟ್​ lift
Published on

ಪ್ರಮುಖ ಮುಖ್ಯಾಂಶಗಳು

  • 2 ತಿಂಗಳಾದರೂ ಸರಿಪಡಿಸದ ತಾಲೂಕು ಆಡಳಿತ
  • ವೃದ್ಧರು, ಅಂಗವಿಕಲರಿಗೆ 3ಅಂತಸ್ತು ಹತ್ತುವುದೇ ಸಾಹಸ
ಕೆಜಿಎಫ್​: ಶಾಸಕಿ ರೂಪಕಲಾ ಅವರ ಅವಿರತ ಪ್ರಯತ್ನದ ಫಲವಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧದಲ್ಲಿ ಕಳೆದ 2ತಿಂಗಳಿಂದ ಲಿಫ್ಟ್​ ಕೆಟ್ಟು ನಿಂತಿದ್ದು, ಸಾರ್ವಜನಿಕರು 3 ಅಂತಸ್ತುಗಳ ಮೆಟ್ಟಿಲು ಹತ್ತಲು ಹರಸಾಹಸ ಪಡುವಂತಾಗಿದೆ. lift
ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಆದಾಯ ತರುತ್ತಿರುವ ಉಪನೋಂದಣಿ ಕಚೇರಿಗೆ ನಿತ್ಯ ನೂರಾರು ಮಂದಿ ತಮ್ಮ ಸ್ವತ್ತುಗಳ ಕ್ರಯ, ವಿಕ್ರಯ, ಇಸಿ, ದೃಢೀಕೃತ ಪ್ರತಿ, ವಿವಾಹ ನೋಂದಣಿ, ಸ್ವತ್ತುಗಳ ಮಾರ್ಟಿಗೇಜ್​, ಆಧಾರ ಬಿಡುಗಡೆ ಸೇರಿ ಇನ್ನಿತರ ಕೆಲಸ ಕಾರ್ಯಗಳಿಗೆಂದು ಬರುತ್ತಿದ್ದು, ಲಿಫ್ಟ್​ ಕೆಟ್ಟು ನಿಂತಿರುವುದರಿಂದ ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ.
ವಯೋವೃದ್ಧರು ಅಥವಾ ದೀರ್ಘ ಕಾಲದ ಖಾಯಿಲೆಗಳಿಂದ ನರಳುತ್ತಿರುವವರು ತಮ್ಮ ಆಸ್ತಿ ವಿಲ್​ ಅಥವಾ ಮರಣ ಪ್ರಮಾಣ ಪತ್ರ ನೋಂದಣಿ ಮಾಡಲು ಮೊದಲನೇ ಮಹಡಿಯಲ್ಲಿನ ಉಪನೋಂದಣಿ ಕಚೇರಿಗೆ ಹತ್ತಲು ಹರಸಾಹಸ ಪಡುವಂತಾಗಿದೆ.
ಈ ಹಿಂದೆ ಲಿಫ್ಟ್​ ಕೆಟ್ಟು ನಿಂತಿದ್ದಾಗ ಒಂದೆರಡು ದಿನದಲ್ಲಿ ಲಿಫ್ಟ್​ನ್ನು ಸರಿಪಡಿಸಲಾಗಿದ್ದು, ಈ ಬಾರಿ ಬರೋಬ್ಬರಿ 2 ತಿಂಗಳಾದರೂ ಇನ್ನೂ ಸರಿಪಡಿಸಿಲ್ಲ. ರಿಪೇರಿಗೆ ಹಣ ಕೊರತೆಯಿದೆಯೇ? ಅಥವಾ ಇಚ್ಛಾ ಶಕ್ತಿ ಕೊರತೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಕಚೇರಿ ನಿರ್ವಹಣೆಗೆಂದು ಹಣ ವಸೂಲಿ: ನೆಲಮಹಡಿಯಲ್ಲಿ ಕಂದಾಯ ಇಲಾಖೆ, ಚುನಾವಣಾ ಶಾಖೆ, ಭೂಮಿ, ನಾಡ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಮೊದಲನೇ ಮಹಡಿಯಲ್ಲಿ ಉಪನೋಂದಣಾಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಅಭಿಲೇಖಾಲಯ, ಕಾರ್ಮಿಕ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಕಾರ್ಯಾನಿರ್ವಹಿಸುತ್ತಿವೆ. ಎರಡನೇ ಮಹಡಿಯಲ್ಲಿ ಅಬಕಾರಿ ಇಲಾಖೆಯ ಉಪಾಧೀಕ್ಷಕರ ಕಚೇರಿ, ಸಿಡಿಪಿಒ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಇಲಾಖೆಗಳಿಂದ ಪ್ರತಿ ತಿಂಗಳು ಕಚೇರಿ ನಿರ್ವಹಣೆಗೆಂದು ಇಂತಿಷ್ಟು ಹಣ ವಸೂಲಿ ಮಾಡಲಾಗುತ್ತಿದೆ.
ಮೊದಲನೇ ಮಹಡಿಯ ಅಭಿಲೇಖಾಲಯ ಕಚೇರಿಗೆ ತಾಲೂಕಿನ ಮೂಲೆ ಮೂಲೆಗಳಿಂದ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸಾಗುವಳಿ ಚೀಟಿ, ಹಳೆಯ ಕೈ ಬರಹದ ಪಹಣಿ, ಮ್ಯುಟೇಷನ್​ಗಳಿಗಾಗಿ ನಿತ್ಯ ಬರುತ್ತಾರೆ. ಪಡಿತರ ಚೀಟಿಯಲ್ಲಿ ತಮ್ಮ ಹೆಸರು ಸೇರಿಸಲು, ಇರುವ ಹೆಸರು ತಿದ್ದುಪಡಿ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳಿಗೆಂದು ಬಂದು ಹೋಗುವವರೂ ಸಹ ಲಿಫ್ಟ್​ ಕೆಟ್ಟು ನಿಂತಿರುವುದರಿಂದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು 2ನೇ ಮಹಡಿಯ ಸಿಡಿಪಿಒ ಕಚೇರಿಗೆ ಬರುವ ಗರ್ಭಿಣಿಯರು, ಬಾಣಂತಿಯರು, ವೃದ್ಧರು ಮೆಟ್ಟಿಲು ಹತ್ತಿ ಇಳಿಯಲು ಹರಸಾಹಸ ಪಡುವಂತಾಗಿದೆ.
"

ಈಗಾಗಲೇ ಲಿಫ್ಟ್​ ಪರಿಶೀಲನೆ ನಡೆಸಿದ್ದು, ಬ್ಯಾಟರಿ ಹಾಳಾಗಿರುವುದರಿಂದ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗಿದೆ. ಕೂಡಲೇ ರಿಪೇರಿ ಮಾಡುವಂತೆ ಸೂಚಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಸರಿಪಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net