_1775412729742.webp?w=480&auto=format%2Ccompress&fit=max)
_1775412729742.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕೇರಳದಿಂದ ಕೊಡಗು ಜಿಲ್ಲೆಯ ತಡಿಯಾಂಡಮೋಲ್ ಶಿಖರಕ್ಕೆ ಚಾರಣಕ್ಕೆ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ (36) ಕೊನೆಗೂ ಪತ್ತೆಯಾಗಿದ್ದಾರೆ. 9 ತಂಡಗಳು ಹಗಲಿರುಳು ಕಾರ್ಯಾಚರಣೆ ನಡೆಸಿ ಶರಣ್ಯರನ್ನು ರಕ್ಷಿಸಿದ್ದಾರೆ. ಸದ್ಯ ಅವರು ಆರೋಗ್ಯವಾಗಿದ್ದಾರೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭಾನುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಣ್ಯ ಅವರನ್ನು ಸುರಕ್ಷಿತವಾಗಿ ಕೇರಳದ ಅವರ ಮನೆಗೆ ತಲುಪಿಸುವಂತೆ ಸೂಚಿಸಲಾಗಿದೆ. ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಯುವತಿ ನಾಪತ್ತೆ ಆಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಿಎಂ ಸೂಚನೆಯ ಮೇರೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಖಂಡ್ರೆ ಮಾಹಿತಿ ಹಂಚಿಕೊಂಡರು. ಏ.2ರ ಗುರುವಾರ ಶರಣ್ಯ ಇತರ 15 ಮಂದಿ ಚಾರಣಿಗರೊಂದಿಗೆ ಮತ್ತು ನೇಚರ್ ಗೈಡ್ ಜತೆ ಚಾರಣಕ್ಕೆ ಹೋಗಿದ್ದರು. ಆದರೆ ಮಧ್ಯಾಹ್ನ ಮೂಲ ನೆಲೆಗೆ ಎಲ್ಲ ಚಾರಣಿಗರು ಬಂದಾಗ ಇವರು ದಾರಿ ತಪ್ಪಿರುವುದು ತಿಳಿಯಿತು.
ವಿಷಯ ತಿಳಿದ ಕೂಡಲೇ ಏಪ್ರಿಲ್ 2ರಿಂದಲೇ 5 ತಂಡದಿಂದ ಶೋಧ ಕಾರ್ಯಾಚರಣೆ ನಡೆಸಿತ್ತು. ಮೂರು ದಿನವಾದರೂ ಏಕಾಂಗಿಯಾಗಿ ಕಾಡಿನಲ್ಲಿ ಓಡಾಡಿರುವ ಶರಣ್ಯ ಧೈರ್ಯವಂತೆಯಾಗಿದ್ದಾರೆ. ಸಾಹಸಿಗರಾಗಿದ್ದಾರೆ. ಕಾಡಿನಲ್ಲಿ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಹೀಗಾಗಿ ಅವರು ಇದ್ದ ನಿಶ್ಚಿತ ಸ್ಥಳದ ಮಾಹಿತಿ ತಿಳಿದಿರಲಿಲ್ಲ. ಹೀಗಾಗಿ ಶೋಧ ವಿಳಂಬವಾಗಿತ್ತೆಂದು ಸಚಿವರು ವಿವರಿಸಿದರು. ಯಾರೇ ಯಾವುದೇ ರಾಜ್ಯದಿಂದ ಚಾರಣಕ್ಕೆ ಬಂದು ನಾಪತ್ತೆಯಾದರೆ, ಅವರನ್ನು ಹುಡುಕುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ನಾವು ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದೂ ಖಂಡ್ರೆ ತಿಳಿಸಿದರು.
ಶರಣ್ಯರನ್ನು ಕಾಡಿನಿಂದ ಯಶಸ್ವಿಯಾಗಿ ಕರೆತಂದ ಬಳಿಕ ಸಮೀಪದ ಕಕ್ಕಬ್ಬೆ ಗ್ರಾಮಕ್ಕೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ತೀವ್ರ ಹಸಿವು ಹಾಗೂ ಸುಸ್ತಿನಿಂದ ಬಳಲಿದ್ದರೂ, ಅವರ ಮಾನಸಿಕ ಸ್ಥಿತಿ ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ಕಾಲೇಜು ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗಿದೆ. ವೈದ್ಯರ ಅನುಮತಿ ಬಳಿಕ ಕುಟುಂಬಸ್ಥರೊಂದಿಗೆ ಕೇರಳಕ್ಕೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಚಾರಣದ ವೇಳೆ ದಾರಿ ತಪ್ಪಿ ಅರಣ್ಯದಲ್ಲಿ ಕಳೆದ ಅನುಭವವನ್ನು ಶರಣ್ಯ ಹಂಚಿಕೊಂಡಿದ್ದಾರೆ. ಬೆಟ್ಟದ ಮೇಲೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜತೆ ಆಟವಾಡುತ್ತಾ ಹಿಂದೆ ಉಳಿದೆ. ದಾರಿ ತಪ್ಪಿದಾಗ ನನ್ನ ಸ್ನೇಹಿತರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ನಾನು ತಂಗಿದ್ದ ಹೋಂ ಸ್ಟೇ ಸಿಬ್ಬಂದಿಗೆ ಮಧ್ಯಾಹ್ನ ಮೆಸೇಜ್ ಕಳುಹಿಸಿದ್ದೆ. ಆ ಬಳಿಕ ಫೋನ್ ಸ್ವಿಚ್ ಆಫ್ ಆಯಿತು. 4 ದಿನಗಳಿಂದ ಅರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದೆ. ರಕ್ಷಣಾ ತಂಡ ನನ್ನನ್ನು ಹುಡುಕಲು ಡ್ರೋನ್ ಬಳಸಬಹುದು ಎಂದು ನನಗೆ ತಿಳಿದಿತ್ತು. ಹಾಗಾಗಿ ಡ್ರೋನ್ಗೆ ಕಾಣಿಸುವಂಥ ಬಯಲು ಪ್ರದೇಶದಲ್ಲೇ ಹೆಚ್ಚಾಗಿ ನಿಂತಿದ್ದೆ ಎಂದು ಹೇಳಿದ್ದಾರೆ.