

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಜನರು ಬದುಕು ಕಟ್ಟಿಕೊಂಡಿದ್ದು, ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನ ಸೂಕ್ತ ಹವಾಮಾನ, ಉದ್ಯೋಗಾವಕಾಶಗಳು ಮತ್ತು ಮೂಲಸೌಕರ್ಯಗಳು ಇದಕ್ಕೆ ಕಾರಣ.
ದೇಶದ ಬೇರೆ ಮಹಾನಗರಗಳಲ್ಲೂ ಇತರ ರಾಜ್ಯಗಳ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇದು ಸಹಜ, ಸ್ವಾಭಾವಿಕ ಪ್ರಕ್ರಿಯೆ. ಅದೇ ರೀತಿ ಕೇರಳಿಗರು ಮತ್ತು ಕನ್ನಡಿಗರ ಮಧ್ಯೆಯೂ ಸೌಹಾರ್ದ ಸಂಬಂಧ ಇದೆ. ಇದಕ್ಕೆ ಯಾರದೇ ಅಭ್ಯಂತರವಿಲ್ಲ. ಆದರೆ, ಸರ್ಕಾರಕ್ಕೆ ಸಂಬಂಧಿಸಿದ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ಮನೆ ಕಟ್ಟಿಕೊಂಡು ವಾಸಿಸುವುದು ಕಾನೂನಿಗೆ ವಿರುದ್ಧ. ಈ ಕುರಿತು ಕ್ರಮ ಕೈಗೊಂಡರೆ ಅದಕ್ಕೆ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ.
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್ಗಳ ತೆರವು ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಕೇರಳ ಸರ್ಕಾರ ಉದ್ಧಟತನ ತೋರಿದೆ. ಇದು ಕರ್ನಾಟಕಕ್ಕೆ ಸಂಬಂಧಿಸಿದ ಸ್ಥಳೀಯ ವಿಷಯ. ಇಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಸಮರ್ಥವಾಗಿವೆ. ಹೀಗಿರುವಾಗ, ಕೇರಳದ ಮುಖ್ಯಮಂತ್ರಿಗಳು ಅತೀವ ಆಸಕ್ತಿ ವಹಿಸಿದ್ದಲ್ಲದೆ, ಮಧ್ಯಪ್ರವೇಶಿಸಿ ರಾಜಕೀಯ ಒತ್ತಡ ಹೇರಿರುವುದು ಸೂಕ್ತವಲ್ಲ. ಇಲ್ಲಿ ಯಾವುದೇ ರಾಜ್ಯದವರನ್ನು ಅಥವಾ ಭಾಷಿಕರನ್ನು ಗುರಿಯಾಗಿಸಲಾಗಿಲ್ಲ.
ಅಕ್ರಮವಾಗಿ ಕಟ್ಟಿಕೊಂಡಿರುವ ಶೆಡ್ಗಳನ್ನು ತೆರವುಗೊಳಿಸಲಾಗಿದೆ. ಆದರೆ, ಕೋಗಿಲು ಗ್ರಾಮದ ಹಲವೆಡೆ ಅಕ್ರಮ ಕಟ್ಟಡಗಳ ಒತ್ತುವರಿಯಲ್ಲಿ ಕೇರಳದ ವ್ಯಕ್ತಿಗಳು ಸೇರಿದ್ದಾರೆ ಎಂಬುದರ ಬಗ್ಗೆ ಗಂಭೀರ ಆಪಾದನೆಗಳು ಕೇಳಿಬಂದಿವೆ. ಶೆಡ್ನಲ್ಲಿರುವ ಸಂತ್ರಸ್ತರ ಬಗ್ಗೆ ಕಾಳಜಿ ಇದ್ದರೆ ಕೇರಳ ಸರ್ಕಾರ ಅವರ ನೆರವಿಗೆ ಧಾವಿಸಬಹುದಿತ್ತು. ಅದನ್ನು ಬಿಟ್ಟು ಈ ವಿಷಯವನ್ನು ರಾಜಕೀಯಗೊಳಿಸಲು ಹೊರಟಿದ್ದು ಸರಿಯಲ್ಲ. ಕೇರಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಕ್ರಮ ಶೆಡ್ ತೆರವು ಕಾರ್ಯಾಚರಣೆಯನ್ನು ರಾಜಕೀಯಗೊಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವಿವಾದದ ಕುರಿತಂತೆ ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಲ್ಲದೆ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಕೋಗಿಲು ಗ್ರಾಮದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಪ್ರತಿಯೊಬ್ಬರಿಗೂ ನೋಟಿಸ್ ಜಾರಿ ಮಾಡಿ ಡಿ. 20ರಂದು 167 ಅಕ್ರಮ ಶೆಡ್ಗಳ ತೆರವು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಮತ್ತೆ ಅವಕಾಶ ಕೊಡುವುದಿಲ್ಲ.
ಮಾನವೀಯ ನೆಲೆಯ ಮೇಲೆ ಬೈಯಪ್ಪನಹಳ್ಳಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ನಿರ್ಧಾರ ಮಾಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಇದನ್ನೊಂದು ಒತ್ತುವರಿ ಪ್ರಕರಣವನ್ನಾಗಿ ಮಾತ್ರ ನೋಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೀಗ ಮಾನವೀಯತೆಯ ಮಾತು ಆಡುತ್ತಿರುವುದು, ಅರ್ಹರಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳುತ್ತಿರುವುದು ಅವರ ನಿಲುವಿನಲ್ಲಾದ ಬದಲಾವಣೆಯನ್ನು ತೋರಿಸುತ್ತದೆ. ಸರ್ಕಾರಿ ಜಾಗದಲ್ಲಿ ಅಕ್ರಮ ಶೆಡ್ ಮತ್ತು ಮನೆ ನಿರ್ವಣದ ಬಗ್ಗೆ ಕಠಿಣ ನಿಲುವು ಅತ್ಯಗತ್ಯ. ಕೆಲ ಸ್ಥಳೀಯರು ಈ ಅಕ್ರಮಕ್ಕೆ ಸಹಕರಿಸಿದ್ದು, ಅಂಥವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.