ಈ ವರ್ಷವೂ ಕರುನಾಡು ಕೊತಕೊತ: ಫೆ.1ರಿಂದಲೇ ತಾಪಮಾನ ಹೆಚ್ಚಳ-heat wave

ಸುಡು ಬಿಸಿಲು
ಸುಡು ಬಿಸಿಲು
Published on
ಬೆಂಗಳೂರು: ಈ ಬಾರಿ ತೀವ್ರ ಚಳಿಗೆ ನಡುಗಿದ ಜನರು,ಮುಂದಿನ 4 ತಿಂಗಳು ಸುಡು ಬಿಸಿಲು ಎದುರಿಸಲು ಅಣಿಯಾಗಬೇಕಿದೆ.
ಕಳೆದ 3 ವರ್ಷಗಳಿಂದ ಬಿಸಿಲಿನ ಝಳಕ್ಕೆ ಬೆಳಲಿ ಬೆಂಡಾಗಿದ್ದ ರಾಜ್ಯದಲ್ಲಿ ಈ ವರ್ಷವೂ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆ ಹೆಚ್ಚಿದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ‘ಲಾ ನಿನಾ’ ತಗ್ಗುವುದು ಮತ್ತು ಒಣಗಾಳಿ ಬೀಸುವುದೂ ಸೇರಿ ಇತರ ಹವಾಮಾನ ವೈಪರೀತ್ಯ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 5-6 ಡಿ. ಸೆ.ಉಷ್ಣಾಂಶ ಹೆಚ್ಚಳವಾಗಲಿದೆ.
ಹವಾಮಾನ ಇಲಾಖೆ ಪ್ರಕಾರ ಮಾರ್ಚ್‌ನಿಂದ ಮೇ.31ವರೆಗೆ ಬೇಸಿಗೆಗಾಲ ಎಂದು ಕರೆಯಲಾಗುತ್ತದೆ. ಆದರೆ, ವಾಡಿಕೆಗಿಂತ ಮುನ್ನವೇ ಅಂದರೆ ಫೆ.1ರಿಂದ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಫೆಬ್ರವರಿ ಆರಂಭದಲ್ಲೇ ಉಷ್ಣಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬಿಸಿಲಿನ ತೀವ್ರತೆ ಜಾಸ್ತಿ ಇರಲಿದೆ. ಈ ಸಂದರ್ಭದಲ್ಲಿ ಬೀಸಿಗಾಳಿ(ಹೀಟ್‌ವೇವ್) ಬೀಸಲಿದೆ.
ವಿಜಯಪುರ, ಕಲಬುರಗಿ, ಯಾದಗಿರಿ, ಧಾರವಾಡ, ಹಾವೇರಿ, ಕೊಪ್ಪಳ, ಬೀದರ್, ಬೆಳಗಾವಿ, ರಾಯಚೂರು, ಗದಗ, ಬಾಗಲಕೋಟೆ,ಮೈಸೂರು, ಶಿವಮೊಗ್ಗ, ಬೆಂಗಳೂರು, ಚಾಮರಾಜನಗರ, ಮಂಡ್ಯ, ಹಾಸನ, ದಾವಣಗೆರೆ ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಖಾ ಅಲೆ ಭೀತಿ ಇರಲಿದೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತಿದೆ. ಆರು ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ಈ ಬಾರಿಯೂ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಲಿದೆ.
ಕಾಡಲಿದೆ ಆರೋಗ್ಯ ಸಮಸ್ಯೆ
ಗರಿಷ್ಠ, ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗದರೆ ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ತಾಪಮಾನ ಹೆಚ್ಚಿದಂತೆ ಜನರಿಗೆ ಊತ, ತಲೆನೋವು, ವಾಕರಿಕೆ, ನಿರ್ಜಲೀಕರಣ, ಸುಸ್ತು, ವಾಂತಿ,ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಜತೆಗೆ, ಜ್ವರ (102 ಡಿಗ್ರಿ) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ (104 ಡಿಗ್ರಿ) ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗಬಹುದು.
ತಾಪಮಾನ ಹೆಚ್ಚಳಕ್ಕೆ ಕಾರಣವೇನು?
* ಮಣ್ಣಿನಲ್ಲಿ ತೇವಾಂಶ ಕೊರತೆ
* ಕೆರೆ,ಗುಂಟೆಗಳಲ್ಲಿ ನೀರು ಬರಿದಾಗುವುದು
* ತೇವಾಂಶ ಭರಿತ ಮೋಡ ಇಲ್ಲದಿರುವುದು
* ಅರಣ್ಯ ನಾಶ
* ಪಳೆಯುಳಿಕೆ ಇಂಧನ ಸುಡುವುದು
* ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ
ಪರಿಣಾಮವೇನು?
* ಕೃಷಿ ಉತ್ಪಾದನೆಯಲ್ಲಿ ಗಣನೀಯ ಕುಂಠಿತ
* ವಿದ್ಯುತ್ ಕೊರತೆ
* ಕುಡಿಯುವ ನೀರಿಗೆ ಹಾಹಾಕಾರ
* ಮೂಲಸೌಕರ್ಯಕ್ಕೆ ಅಡ್ಡಿ
* ಗಾಳಿಯ ಗುಣಮಟ್ಟ ಹದಗೆಡುವುದು
* ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಜೀವಕ್ಕೆ ಕಂಟಕ
* ಜನರಿಗೆ ಆರೋಗ್ಯ ಸಮಸ್ಯೆ
* ನಿರ್ಜಲೀಕರಣದಿಂದ ಸಾವು
* ಹೀಟ್ ಸ್ಟ್ರೋಕ್‌ದಿಂದ ಸಾವು ಸಂಭವ
ಇವರು ಎಚ್ಚರವಹಿಸುವ ಅಗತ್ಯ?
* ಮನೆ ಇಲ್ಲದೆ ಬೀದಿಯಲ್ಲಿ ಮಲಗುವ ನಿರಾಶ್ರಿತರು
* ಆಟೋ ಚಾಲಕರು, ಸಂಚಾರ ಪೊಲೀಸರು
* ರೈತರು, ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾರ್ಮಿಕರು
* ಬಿಸಿಲಿನ ಪ್ರಖರತೆ ಇದ್ದಾಗ ವಯಸ್ಸಾದವರು ಹೊರಗಡೆ ಓಡಾಡಬಾರದು
* ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಬಾರದು
* ಹೊರಗಡೆ ತೆರಳುವಾಗ ಛತ್ರಿ, ನೀರಿನ ಬಾಟಲ್ ತೆಗೆದುಕೊಂಡು ಹೋಗಬೇಕು
* ವಿಶೇಷವಾಗಿ ನಿರ್ಮಾಣ ಹಂತದ ಕಾಮಗಾರಿ ನಡೆಸಬಾರದು
ಪ್ರಸಕ್ತ ತಿಂಗಳ ಅಂತ್ಯಕ್ಕೆ ಚಳಿಯ ತೀವ್ರತೆ ತಗ್ಗಲಿದೆ. ಫೆ.1ರಿಂದಲೇ ತಾಪಮಾನ ಹೆಚ್ಚಳವಾಗಲಿದೆ. ತಾಪಮಾನ ಏರಿಕೆಗೆ ಹವಾಮಾನ ವೈಪರೀತ್ಯವೇ ಕಾರಣ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 5-6 ಡಿ.ಸೆ.ಹೆಚ್ಚು ಉಷ್ಣಾಂಶ ವರದಿಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶೇ.90 ಪ್ರದೇಶಗಳು ಬಿಸಿಲಿನ ತಾಪಕ್ಕೆ ನಲುಗಲಿವೆ.
| ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net