‘ತತ್ವಜ್ಞಾನ’ ‘ತಂತ್ರಜ್ಞಾನ’ದ ವಿಶಿಷ್ಟ ಸಮ್ಮಿಲನದ ನಾಡು ಕರ್ನಾಟಕ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ  ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ನರೇಂದ್ರ ಮೋದಿ ಬಣ್ಣನೆ
ಆದಿಚುಂಚನಗಿರಿ: ಕರ್ನಾಟಕವು ‘ತತ್ವಜ್ಞಾನ’ ಮತ್ತು ‘ತಂತ್ರಜ್ಞಾನ’ದ ವಿಶಿಷ್ಟ ಸಮ್ಮಿಲನ ನಾಡು. ಇಲ್ಲಿಗೆ ಬಂದರೆ ಪ್ರಸನ್ನ ಭಾವದೊಂದಿಗೆ ಹೊಸ ಪ್ರೇರಣೆಯೂ ದೊರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ  ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಧಾರ್ಮಿಕತೆ, ತಾಂತ್ರಿಕೆ ಎರಡರ ಸಮಾಗಮವೂ ಆಗಿದೆ. ಮಠಗಳಿಂದ ಆಧ್ಯಾತ್ಮಿಕ ಕೇಂದ್ರವೂ ಆಗಿದೆ ಎಂದರು.
ಮಂಡ್ಯ ಸಕ್ಕರೆ ನಾಡು. ಇದು ಮಧುರ(ಸಿಹಿ) ನಾಡು ಹೌದು. ಈ ಭೂಮಿ ಕಬ್ಬಿನ ಬೆಳೆಗೆ ಹೆಸರುವಾಸಿ. ಹೀಗಾಗಿಯೇ ಜನರ ಸಂಸ್ಕೃತಿಯಲ್ಲೂ ಸಿಹಿ ಗೋಚರವಾಗುತ್ತದೆ ಎಂದು ಬಣ್ಣಿಸಿದರು.
ಶ್ರೀ ಗುರು ಭೈರವೈಕ್ಯ ಮಂದಿರದ ಭವ್ಯ ಉದ್ಘಾಟನೆಗೆ ಸಾಕ್ಷಿಯಾಗಲು ಮತ್ತು ಉನ್ನತ ಶ್ರೇಣಿಯ ಸಂತರೊಂದಿಗೆ ಸಂವಾದ ನಡೆಸಲು ಸಿಕ್ಕ ಅವಕಾಶಕ್ಕಾಗಿ ನಾನು ಚಿರಋಣಿ.
 ಐತಿಹಾಸಿಕ ಜ್ಞಾಲಾ ಪೀಠದಲ್ಲಿ ಸಮಯ ಕಳೆದದ್ದು ಮತ್ತು ಭಕ್ತರನ್ನುದ್ದೇಶಿಸಿ ಮಾತನಾಡಿದ್ದು ಪದಗಳಿಗೆ ನಿಲುಕದ ಪ್ರಬಲ ಭಾವನೆ ಜಾಗೃತಗೊಳಿಸಿದೆ. ಈ ದೈವಿಕ ಅನುಭವ ನನ್ನ ನೆನಪಿನಲ್ಲಿ ಎಂದೆಂದಿಗೂ ಅಚ್ಚೊತ್ತಿರುತ್ತವೆ. ಇಲ್ಲಿಯ ಅತಿಥಿ ಸತ್ಕಾರ ಹೃದಯವನ್ನೂ ಸ್ಪರ್ಶಿಸಿದೆ ಎಂದು ಸಂತಸದಿಂದ ಹೇಳಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಂತಹ ಸಂಸ್ಥೆಗಳು ಈ ಪ್ರದೇಶದ ನೈತಿಕ ಮತ್ತು ಆಧ್ಯಾತ್ಮಿಕ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತವೆ. 
ಗುರು ಪರಂಪರೆ ದೇಶದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಮಠವು ಈ ಪರಂಪರೆಯನ್ನು ಸಾಕ್ಷೀಕರಿಸಿದ ಪ್ರತಿರೂಪದಂತೆ ಇದೆ. ಇದಕ್ಕೆ 2000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಗುರುಪರಂಪರೆ, ಆಧ್ಯಾತ್ಮಿಕ ದರ್ಶನ, ಸೇವಾ ಪರಂಪರೆಯನ್ನು ತಲತಲಾಂತರದಿಂದ ಮುಂದುವರಿಸಿಕೊಂಡು ಬಂದಿರುವುದರಿಂದಲೇ ಈ ನಾಡನ್ನು ಸಮೃದ್ಧಗೊಳಿಸಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ಥಾವರಚಂದ್ ಗೆಹಲೋತ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇದ್ದರು.

ಮೋದಿ ಅವರದು ಜಾಗತಿಕ ನಾಯಕತ್ವ

ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವವು ಜಾಗತಿಕ ನಾಯಕತ್ವ. ಅವರ ನೇತೃತ್ವದಲ್ಲಿ ಭಾರತ ಪರಿವರ್ತನಾತ್ಮಕ ಅಭಿವೃದ್ಧಿ ಕಾಣುತ್ತಿದೆ. ಲಕ್ಷಾಂತರ ಭಾರತೀಯರ ಹೃದಯದಲ್ಲಿ ಅವರ ನಾಯಕತ್ವದ ಶ್ರೇಷ್ಠತೆಯು ಆಳವಾಗಿ ಬೇರೂರಿದೆ ಎಂದು ಬಣ್ಣಿಸಿದರು. 
ಮೋದಿ ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣಾ ಭಾವವು ಸಮಸ್ತ ಭಾರತೀಯರ ಹೃದಯದಲ್ಲಿ ನೆಲೆಸಿದೆ. ಜತೆಗೆ ಅವರ ದಣಿವರಿಯದ ಸಮರ್ಪಣೆ, ಆಡಳಿತದಲ್ಲಿ ಭಾರತೀಯರು ಶಕ್ತಿ, ಸಾಮರ್ಥ್ಯ ವೃದ್ಧಿಸಿಕೊಂಡು, ಎಲ್ಲ ಆಯಾಮಗಳಲ್ಲೂ ದೇಶವು ಸರ್ವಶಕ್ತ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಕರ್ನಾಟಕದ ಅಧ್ಯಾತ್ಮ ಮತ್ತು ತ್ರಿವಿಧ ದಾಸೋಹದ ಇತಿಹಾಸದಲ್ಲಿ ಬಾಲಗಂಗಾಧರನಾಥಶ್ರೀಗಳು ಅಜರಾಮರ, ಧ್ರುವತಾರೆ. ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳ ಪಾಲಿಗೆ ಜ್ಞಾನದ ಬೆಳಕಾಗಿ, ಅಸಂಖ್ಯಾತ ಬಡ ಕುಟುಂಬಗಳ ಪ್ರತ್ಯಕ್ಷ ದೈವವಾಗಿ ಶ್ರೀಗಳು ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಸ್ಮರಿಸಿದರು.
ಅಧ್ಯಾತ್ಮದೊಂದಿಗೆ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಜೀವಿತ ಕಾಲದ ಉದ್ದಕ್ಕೂ ಅವಿರತವಾಗಿ ದುಡಿದ ಶ್ರೀಗಳು, ತಮ್ಮ ಸಾಧನೆ ಮತ್ತು ಸಂದೇಶದೊಂದಿಗೆ ದಾರಿದೀಪವಾಗಿದ್ದಾರೆ. ಸಣ್ಣ ಮಠವಾಗಿದ್ದ ಶ್ರೀ ಆದಿಚುಂಚನಗಿರಿ ಕ್ಷೇತ್ರವನ್ನು ಜಾಗತಿಕ ಶ್ರದ್ಧಾಕೇಂದ್ರವನ್ನಾಗಿ ಬೆಳೆಸಿ ಮಹಾವೃಕ್ಷವನ್ನಾಗಿ ರೂಪಿಸಿದ ಬಾಲಗಂಗಾಧರನಾಥಶ್ರೀಗಳಿಗೆ ಸಲ್ಲುತ್ತದೆ ಎಂದರು.
ಪರಿಸರ ಕ್ಷೇತ್ರದಲ್ಲಿ ಶ್ರೀಗಳದು ಅನನ್ಯ ಕೊಡುಗೆ. ಸುಮಾರು ಐದು ಕೋಟಿ ಸಸಿ ಬೆಳೆಸಿದ ಮಹಾನ್ ತಪಸ್ವಿ. ಅವರು ನೆಟ್ಟ ಸಸಿಗಳು ಇಂದು ಮಹಾವೃಕ್ಷಗಳಾಗಿ ಬೆಳೆದಿವೆ. ಶ್ರೀಕ್ಷೇತ್ರ ಬಹುವಿಧದ ದಾಸೋಹಗಳಲ್ಲಿ ದೊಡ್ಡ ಹೆಸರು. ಕಷ್ಟ ಎಂದು ಬರುವ ದೀನರಿಗೆ ಕಲ್ಪವೃಕ್ಷವಾಗಿದೆ. ಜ್ಞಾನ ಎಂದು ಬರುವವರೆಗೆ ಕಾಮಧೇನು. ಸನಾತನ ಪರಂಪರೆ ಮತ್ತು ಆಧುನಿಕತೆಯ ಮಹಾಸಂಗಮವಾಗಿ, ಮೇರು ಮಹಾ ಪುಣ್ಯಕ್ಷೇತ್ರವಾಗಿ ದಾರಿದೀಪವಾಗಿದೆ ಎಂದರು.

ಮೋದಿ ವಿಷನರಿ ವ್ಯಕ್ತಿ 

ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನರೇಂದ್ರ ಮೋದಿ ದೂರದೃಷ್ಟಿವುಳ್ಳ ವ್ಯಕ್ತಿ. ಅವರ ನವೋದ್ಯಮದ ಪರಿಕಲ್ಪನೆ ದೇಶದಲ್ಲಿ ಕ್ರಾಂತಿ ಮಾಡಿದೆ. 2016ರಲ್ಲಿ ದೇಶದಲ್ಲಿ 400 ನವೋದ್ಯಮಗಳಿದ್ದವು.
 ಅದೀಗ 2 ಲಕ್ಷ ದಾಟಿದೆ. ಮೋದಿಯ ಇಂತಹ ಕೆಲಸ ಕಾರ್ಯಗಳಿಂದಲೇ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಬಣ್ಣಿಸಿದರು. ಬಾಲಗಂಗಾದರನಾಥಶ್ರೀಗಳು ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ತೊರಿಸಿದ್ದಾರೆ. ಈಗ ಅವರಿಲ್ಲ. ಆದರೆ, ಅವರ ಮಾಡಿದ ಕೆಲಸಗಳು ನಮ್ಮೊಂದಿಗೆ ಇವೆ ಎಂದರು.
ಮೋದಿ ಧರ್ಮರಕ್ಷಕ 
ರಾಜಕೋಟದ ಅರ್ಷ ವಿದ್ಯಾಮಂದಿರದ ಸ್ವಾಮಿ ಪರಮಾನಾತ್ಮನಂದ ಸರಸ್ವತಿ ಮಾತನಾಡಿ, ಸ್ವಯಂ ಧರ್ಮನಿಷ್ಠೆ, ಸ್ವಯಂನಿಯಂತ್ರಣ ಹೊಂದಿರುವ ನರೇಂದ್ರ ಮೋದಿ, ಧರ್ಮರಕ್ಷಕ, ಲೋಕ ಉದ್ಧಾರಕ, ನ್ಯಾಯಪಾಲಕ ಎಂದು ಬಣ್ಣಿಸಿದರು. 
ಅತ್ಯುತ್ತಮ ಶಾಸನ ರಚನೆಯಿಂದ ವಿಶ್ವದಲ್ಲೇ ಗಮನ ಸೆಳೆದಿರುವ ಮೋದಿ, ದೇಶ ಸೇವೆ, ಸಂಸ್ಕೃತಿ ರಕ್ಷಣೆ, ಧಾರ್ಮಿಕ ಸ್ಥಳ ಅಭಿವೃದ್ಧಿಯನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಯುವ ಜನರಲ್ಲೂ ಆತ್ಮವಿಶ್ವಾಸ, ಆತ್ಮಭಾವ, ರಾಷ್ಟ್ರಾಭಿಮಾನ ತುಂಬಿದ್ದಾರೆ. ದೇಶವನ್ನು ವಿಶ್ವಗುರು ಮಾಡಿದ್ದಾರೆ. ಅದೇ ಆತ್ಮವಿಶ್ವಾಸದಲ್ಲಿ ಯುವಜನರನ್ನು ಕರೆದೊಯ್ಯುತ್ತಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net