ಕರ್ನಾಟಕ ಮಾಹಿತಿ ಆಯೋಗದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತ: ಸರ್ಕಾರಕ್ಕೆ ವರದಿ | RTI Karnataka

RTI
RTI
Published on
ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗವು ಪ್ರಕರಣಗಳ ವಿಲೇವಾರಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರೂ, ಆಯೋಗದ ಆಂತರಿಕ ಆಡಳಿತ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿತಗೊಂಡಿದೆ ಎಂದು ರಾಜ್ಯ ಮಾಹಿತಿ ಆಯುಕ್ತರ ಸಭೆಯಲ್ಲಿ ತೀವ್ರ ಆತಂಕ ವ್ಯಕ್ತಪಡಿಸಲಾಗಿದೆ. 2025-26ನೇ ಸಾಲಿನಲ್ಲಿ ಒಟ್ಟು 70,000 ಪ್ರಕರಣಗಳ ಪೈಕಿ 46,000 ಪ್ರಕರಣಗಳನ್ನು (ಶೇ. 60ಕ್ಕೂ ಹೆಚ್ಚು) ವಿಲೇವಾರಿ ಮಾಡುವ ಮೂಲಕ ಆಯೋಗವು ಮುಂಚೂಣಿಯಲ್ಲಿದೆ. ಆದರೆ, ಆಡಳಿತಾತ್ಮಕ ವೈಫಲ್ಯಗಳು ಈ ಯಶಸ್ಸಿಗೆ ಕಪ್ಪುಚುಕ್ಕೆಯಾಗಿವೆ.

ಕಾರ್ಯದರ್ಶಿಗಳ ನಡೆಗೆ ಆಯುಕ್ತರ ಆಕ್ರೋಶ

ಸಭೆಯಲ್ಲಿ ಮುಖ್ಯವಾಗಿ ಪ್ರಭಾರ ಕಾರ್ಯದರ್ಶಿಗಳಾದ ಶ್ರೀ ಸತೀಶ, ಬಿ.ಸಿ. ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಲಾಯಿತು. ಡಿಸೆಂಬರ್ 2025ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅವರು ಕಚೇರಿಗೆ ಸರಿಯಾಗಿ ಹಾಜರಾಗದೆ, ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ರಚಿಸಲಾಗಿದ್ದ ವಾಟ್ಸಾಪ್ ಗ್ರೂಪ್‌ನಿಂದಲೂ ಹೊರನಡೆದಿದ್ದಾರೆ. ಇದು ಆಯುಕ್ತರ ಗೌರವಕ್ಕೆ ಚ್ಯುತಿ ತಂದಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

ಆಯೋಗ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು

ವೃಂದ ಮತ್ತು ನೇಮಕಾತಿ ನಿಯಮ: ಆಯೋಗ ಅಸ್ತಿತ್ವಕ್ಕೆ ಬಂದು 21 ವರ್ಷಗಳಾದರೂ ಸ್ವಂತ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಲ್ಲ. ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ. ಮಮತಾ ಮತ್ತು ಡಾ. ರಿಚರ್ಡ್ ಡಿಸೋಜ ಅವರ ನೆರವು ಪಡೆಯಲು ಸೂಚಿಸಿದ್ದರೂ ಕಾರ್ಯದರ್ಶಿಗಳು ನಿರ್ಲಕ್ಷಿಸಿದ್ದಾರೆ.
ದಂಡ ವಸೂಲಾತಿಯಲ್ಲಿ ವೈಫಲ್ಯ: ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ವಿಧಿಸಲಾಗಿರುವ ಸುಮಾರು 8 ಕೋಟಿ ರೂಪಾಯಿ ದಂಡದ ಮೊತ್ತ ವಸೂಲಾಗದೆ ಬಾಕಿ ಉಳಿದಿದೆ. ಇದರಿಂದ ಆಯೋಗದ ಆದೇಶಗಳಿಗೆ ಬೆಲೆ ಇಲ್ಲದಂತಾಗಿದೆ.
ತಾಂತ್ರಿಕ ಮತ್ತು ಮೂಲಸೌಕರ್ಯ ಕೊರತೆ: ಕಿಯೋನಿಕ್ಸ್ ಸಂಸ್ಥೆಗೆ 80 ಲಕ್ಷ ರೂ. ನೀಡಿದ್ದರೂ ಹೈಬ್ರಿಡ್ ವಿ.ಸಿ ಸಿಸ್ಟಂ ಅಳವಡಿಕೆಯಾಗಿಲ್ಲ. ಇಂಟರ್ನೆಟ್ ಮತ್ತು ವಿದ್ಯುತ್ ಸಮಸ್ಯೆಯಿಂದ ವಿಚಾರಣೆಗಳಿಗೆ ಅಡ್ಡಿಯಾಗುತ್ತಿದೆ. ಮಹಿಳಾ ನೌಕರರ ಶೌಚಾಲಯ ಕಳೆದ ಎರಡು ವರ್ಷಗಳಿಂದ ದುರಸ್ತಿಯಾಗಿಲ್ಲ.
ಮಾಹಿತಿ ಜಾಲದ ಅವ್ಯವಸ್ಥೆ: ಸುಪ್ರೀಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ವೆಬ್‌ಸೈಟ್‌ನಲ್ಲಿ ಆದೇಶಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಇದ್ದ ಅವಕಾಶವನ್ನು ರದ್ದುಗೊಳಿಸಲಾಗಿದೆ.

ಸಭೆಯ ಪ್ರಮುಖ ತೀರ್ಮಾನಗಳು

ಆಯೋಗದ ಘನತೆಯನ್ನು ಉಳಿಸಲು ಮತ್ತು ಆಡಳಿತವನ್ನು ಹಳಿಗೆ ತರಲು ಸಭೆಯು ಈ ಕೆಳಗಿನ ನಿರ್ಣಯಗಳನ್ನು ಕೈಗೊಂಡಿದೆ.
ಪೂರ್ಣ ಪ್ರಮಾಣದ ಕಾರ್ಯದರ್ಶಿ ನೇಮಕ: ಆಯೋಗಕ್ಕೆ ತಕ್ಷಣವೇ ಸಮರ್ಥ ಹಾಗೂ ಪೂರ್ಣಾವಧಿ ಕಾರ್ಯದರ್ಶಿಯನ್ನು ನಿಯೋಜಿಸಲು ಸರ್ಕಾರವನ್ನು ಒತ್ತಾಯಿಸುವುದು.
ಶಿಸ್ತು ಕ್ರಮ: ಆಡಳಿತ ಕುಸಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದು.
ವರದಿ ಸಲ್ಲಿಕೆ: ಈ ಎಲ್ಲಾ ಅವ್ಯವಸ್ಥೆಗಳ ಕುರಿತು ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಮಗ್ರ ವರದಿಯನ್ನು ಸಲ್ಲಿಸಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಆಯೋಗದ ಸ್ಥಿತಿಯನ್ನು ಸರಿಪಡಿಸದಿದ್ದರೆ ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಈ ಮಹತ್ವದ ಸಭೆಯಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ (ಪ್ರ) ರಾಮನ್‌ ಕೆ, ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ ಸೇರಿದಂತೆ ಒಟ್ಟು 8 ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net