ಬೈಕ್ ಟ್ಯಾಕ್ಸಿಗೆ ಅನುಮತಿ ನೀಡುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರ್ಕಾರ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದಿಲ್ಲ ಎಂದ ಸರ್ಕಾರ
  • ಅನುಮತಿ ನೀಡದಿರಲು ಸರ್ಕಾರಕ್ಕೆ ವಿಶೇಷ ಅಧಿಕಾರ ಇದೆ
  • ಹಳದಿ ಬೋರ್ಡ್‌ ರಿಜಿಸ್ಟ್ರೇಷನ್‌ಗೆ ಅವಕಾಶ ಕೇಳಿದ ಕಂಪನಿಗಳು
ಬೆಂಗಳೂರು: ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಅನ್ನು ಸಾರಿಗೆ ವಾಹನ ಎಂದು ಪರಿಗಣಿಸದಿರುವ ಕಾರಣ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ ಮಂಡಿಸಿದೆ. ರಾಜ್ಯ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸುವ ತನಕ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಉಬರ್ ಸೇರಿ ವಿವಿಧ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಸಿಜೆ ವಿಭು ಬಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ವಿಭಾಗೀಯ ಪೀಠ ಶುಕ್ರವಾರ ನಡೆಸಿತು.
ಕಾಯ್ದೆಯ ಶಾಸನಬದ್ಧ ವ್ಯಾಖ್ಯಾನವು ಮೋಟಾರ್ ಸೈಕಲ್‌ಗಳನ್ನು ಪ್ರಯಾಣಿಕರನ್ನು ಸಾಗಿಸಲು ಅಥವಾ ಬಾಡಿಗೆಗೆ ಬಳಸಲು ಅನುಮತಿ ನೀಡುವುದಿಲ್ಲ. ಮೋಟಾರ್ ಸೈಕಲ್‌ಗಳನ್ನು ಮೋಟಾ‌ರ್ ಕ್ಯಾಬ್‌ಗಳ ವ್ಯಾಪ್ತಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಸರ್ಕಾರ ಸಾಧಿಸಬಹುದು ಎಂದು ಸರ್ಕಾರದ ಪರ ಅಡೋಕೇಟ್ ಜನರಲ್‌ ಕೆ. ಶಶಿಕಿರಣ್ ಶೆಟ್ಟಿ ತಿಳಿಸಿದರು.
ಆಗ, ಮೋಟಾರ್ ಸೈಕಲ್ ಗಳನ್ನು ಸಾರಿಗೆಗೆ ಬಳಸಲು ಸಾಧ್ಯವಿಲ್ಲ ಎಂದಾದರೆ, ಇ.ವಿ. ಬೈಕ್ ಗಳಿಗೆ ಅನುಮತಿ ನೀಡಿ ಸರ್ಕಾರ ಹೇಗೆ ಆದೇಶ ಹೊರಡಿಸಿತ್ತು ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರವು ಆ ಆದೇಶ ಹಿಂಪಡೆದಿದ್ದು, ತಪ್ಪನ್ನು ಸರಿಪಡಿಸಿಕೊಂಡಿದೆ ಎಂದು ಎಜಿ ತಿಳಿಸಿದರು.

ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ

ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ನೀಡಲಾದ ಯಾವುದೇ ಪರವಾನಗಿ ಮಾರ್ಪಾಡು ಮಾಡಲು, ಸರಕು ಮತ್ತು ಪ್ರಯಾಣಿಕರ ಸಾಗಣೆಗೆ ಯೋಜನೆಗಳನ್ನು ರೂಪಿಸಲು ಮತ್ತು ಪರವಾನಗಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಮೋಟಾರ್ ಸೈಕಲ್ ಗಳನ್ನು ವಾಣಿಜ್ಯ ಸಾರಿಗೆಯಾಗಿ ಬಳಸಲು ಅನುಮತಿ ನೀಡದಿರುವ ವಿಶೇಷಾಧಿಕಾರವನ್ನು ಕಾಯ್ದೆಯು ರಾಜ್ಯ ಸರ್ಕಾರಕ್ಕೆ ನೀಡಿದೆ. ನಾವು ಜೀವನೋಪಾಯಕ್ಕೆ ಬೈಕ್‌ಗಳನ್ನು ಬಳಸುವುದನ್ನು ನಿಷೇಧಿಸಿಲ್ಲ. ಗಿಗ್ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ. ಆದರೆ, ಜನರ ಸಾಗಣಿಕೆಗೆ ಅನುಮತಿ ಇಲ್ಲ ಎಂದು ಎಜಿ ಸ್ಪಷ್ಟಪಡಿಸಿದರು.

ಹಳದಿ ಬೋರ್ಡ್ ಕೇಳಿದ ಕಂಪನಿಗಳು
ಅರ್ಜಿದಾರರ ಪರ ವಾದಿಸಿದ ವಕೀಲರು, ಹಳದಿ ಬೋರ್ಡ್ ನೋಂದಣಿ ಮಾಡಲು ಮತ್ತು ಪರವಾನಗಿ ಪಡೆದು ಸೇವೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಆದರೆ, ವಿವಿಧ ಕಾರಣಗಳನ್ನು ಪರಿಗಣಿಸಿ ಅನುಮತಿ ನೀಡದಿರಲು ಸರ್ಕಾರ ತೀರ್ಮಾನಿಸಿದೆ ಎಂದು ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು. ಈ ಹಿಂದೆ ಇ.ವಿ. ಬೈಕ್‌ಗಳನ್ನು ಬೈಕ್‌ ಟ್ಯಾಕ್ಸಿಯಾಗಿ ಬಳಸಲು ಅನುಮತಿ ನೀಡಿದ್ದಾಗ ಅಗ್ರಿಗೇಟರ್‌ಗಳು ಒಂದೇ ಒಂದು ಅರ್ಜಿ ಸಲ್ಲಿಸಿರಲಿಲ್ಲ ಎಂದೂ ಎಜಿ ನ್ಯಾಯಾಲಯದ ಗಮನಕ್ಕೆ ತಂದರು.
ಜೀವನೋಪಾಯಕ್ಕೆ ಬೈಕ್‌ ಬಳಸುವುದನ್ನು ನಿಷೇಧಿಸಿಲ್ಲ. ಗಿಗ್ ಕಾರ್ಮಿಕರಿಗೆ ಅನುಮತಿ ನೀಡಲಾಗಿದೆ ಎಂದು ಎಜಿ ತಿಳಿಸಿದರು. ಮುಂದಿನ ವಿಚಾರಣೆ ನ.24ಕ್ಕೆ ನಿಗದಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net