ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಪುತ್ರ ಯತೀಂದ್ರಗೆ ಪ್ರಮುಖ ಸಚಿವ ಸ್ಥಾನ ಸಿಗುವ ಸಾಧ್ಯತೆ! Karnataka Congress

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಪುತ್ರ ಯತೀಂದ್ರಗೆ ಪ್ರಮುಖ ಸಚಿವ ಸ್ಥಾನ ಸಿಗುವ ಸಾಧ್ಯತೆ! Karnataka Congress
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಪುತ್ರ ಯತೀಂದ್ರಗೆ ಪ್ರಮುಖ ಸಚಿವ ಸ್ಥಾನ ಸಿಗುವ ಸಾಧ್ಯತೆ! Karnataka Congress
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕಾಂಗ್ರೆಸ್​ನಲ್ಲಿ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಆಂತರಿಕ ಕಸರತ್ತು ಈಗ ಅಂತಿಮ ಹಂತಕ್ಕೆ
  • ರಾಜ್ಯದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯಾಗುವುದು ಇದೀಗ ಬಹುತೇಕ ಖಚಿತವಾಗಿದೆ
  • ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ ಎಂಬ ವರದಿ
  • ಕಾವೇರಿ ನಿವಾಸದ ನಾಳಿನ ಹೈಪ್ರೊಫೈಲ್ ಉಪಹಾರ ಕೂಟದ ಬೆನ್ನಲ್ಲೇ ಅಧಿಕಾರ ಹಸ್ತಾಂತರದ ಬಿಗ್​ ಅಪ್ಡೇಟ್​ ಸಾಧ್ಯತೆ
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ( Karnataka Congress ) ಪಾಳಯದಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಆಂತರಿಕ ಕಸರತ್ತು ಈಗ ಅಂತಿಮ ಘಟ್ಟ ತಲುಪಿದಂತಿದ್ದು, ರಾಜ್ಯದ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದಂತಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ಸುಳಿವು ನೀಡಿವೆ. ಈ ಸ್ಫೋಟಕ ರಾಜಕೀಯ ಬೆಳವಣಿಗೆಯು ಇಡೀ ರಾಜ್ಯದ ಗಮನವನ್ನು ಸೆಳೆದಿದ್ದು, ಕಾವೇರಿ ನಿವಾಸದ ನಾಳಿನ ಹೈಪ್ರೊಫೈಲ್ ಉಪಹಾರ ಕೂಟದ ಬೆನ್ನಲ್ಲೇ ಅಧಿಕಾರ ಹಸ್ತಾಂತರದ ಬಿಗ್ ಅಪ್‌ಡೇಟ್ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ರಾಜಕೀಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೈವೋಲ್ಟೇಜ್ ಬೆಳವಣಿಗೆಯೊಂದಕ್ಕೆ ಮುಹೂರ್ತ ಫಿಕ್ಸ್ ಆದಂತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28ರಂದೇ ತಮ್ಮ ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪಕ್ಷದೊಳಗಿನ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುವ ಜಾಣ್ಮೆಯ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಿರುವ ಸಿದ್ದರಾಮಯ್ಯ ಅವರನ್ನು ಮುಂದಿನ ದಿನಗಳಲ್ಲಿ ಹೈಕಮಾಂಡ್ ಗೌರವಯುತವಾಗಿ ರಾಜ್ಯಸಭೆಗೆ ಕಳುಹಿಸಿಕೊಡಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಾವೇರಿ ನಿವಾಸದ ಉಪಹಾರ ಕೂಟದ ಬೆನ್ನಲ್ಲೇ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸುವ ಬಿಗ್ ಡಿಸಿಷನ್ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ರಾಜ್ಯದ ಜನತೆಯ ಕಣ್ಣು ನಾಳೆ ನಡೆಯಲಿರುವ ಬ್ರೇಕ್​ ಫಾಸ್ಟ್​ ಮೀಟಿಂಗ್​ ಮೇಲೆ ನೆಟ್ಟಿದೆ.
ಅಂದಹಾಗೆ, 2023ರ ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ, ಕರ್ನಾಟಕ ಕಾಂಗ್ರೆಸ್ ಘಟಕದಲ್ಲಿ ಸೃಷ್ಟಿಯಾಗಿದ್ದ ಎರಡು ಪ್ರಬಲ ಶಕ್ತಿ ಕೇಂದ್ರಗಳನ್ನು ನಿಭಾಯಿಸಲು ದೆಹಲಿ ನಾಯಕರು ಕಳೆದ ಹಲವು ತಿಂಗಳುಗಳಿಂದ ತೀವ್ರ ಕಸರತ್ತು ನಡೆಸುತ್ತಿದ್ದರು. ಇದೀಗ ಉಭಯ ನಾಯಕರನ್ನು ಒಪ್ಪಿಸಿ ಅಧಿಕಾರ ಹಸ್ತಾಂತರದ ಸೂತ್ರವನ್ನು ಅಂತಿಮಗೊಳಿಸಿರುವುದು ಎಐಸಿಸಿ (AICC) ವರಿಷ್ಠರಿಗೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಯಶಸ್ಸು ಎಂದೇ ವಿಶ್ಲೇಷಿಸಲಾಗುತ್ತಿದೆ. ಹೈಕಮಾಂಡ್‌ನ ಈ ಬಿಗ್ ಬ್ರೇಕ್‌ಥ್ರೂ, ಹಲವು ದಿನಗಳಿಂದ ಮುಂದುವರಿದಿದ್ದ ನಾಯಕತ್ವದ ಬಿಕ್ಕಟ್ಟಿಗೆ ಶಾಶ್ವತ ತೆರೆ ಎಳೆಯುವ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬೆನ್ನಲ್ಲೇ ಹೊಸ ಸಚಿವ ಸಂಪುಟದಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಸರಿದೂಗಿಸಲು ಕಾಂಗ್ರೆಸ್ ಹೈಕಮಾಂಡ್ ಭಾರಿ ಕಸರತ್ತು ನಡೆಸುತ್ತಿದ್ದು, ಈ ಬಾರಿ ಹಲವು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಇದರ ಭಾಗವಾಗಿ ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಮತ್ತು ಒಬಿಸಿ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಹುದ್ದೆಯ ಪ್ರಾತಿನಿಧ್ಯ ನೀಡುವ ಸೂತ್ರದ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಹು-ಡಿಸಿಎಂ ಫಾರ್ಮುಲಾ ಕುರಿತಾದ ಮಾತುಕತೆಗಳು ಸದ್ಯ ಆರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲೇ ಅಂತಿಮ ರೂಪ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪುತ್ರ ಯತೀಂದ್ರಗೆ ಸಚಿವ ಸ್ಥಾನದ ಭರವಸೆ?

ಮತ್ತೊಂದೆಡೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ ಅವರ ರಾಜಕೀಯ ಹಿರಿತನ ಹಾಗೂ ಗೌರವಕ್ಕೆ ಧಕ್ಕೆಯಾಗದಂತೆ ಹೈಕಮಾಂಡ್ ಹಲವು ಪ್ರಮುಖ ಭರವಸೆಗಳನ್ನು ನೀಡಿದೆ ಎನ್ನಲಾಗಿದೆ. ಮುಂದಿನ ಹೊಸ ಕ್ಯಾಬಿನೆಟ್‌ನಲ್ಲಿ ಪ್ರಮುಖ ಸಚಿವರ ಆಯ್ಕೆ ಮತ್ತು ಕರ್ನಾಟಕದ ಭವಿಷ್ಯದ ರಾಜಕೀಯ ರಚನೆಯಲ್ಲಿ ಸಿದ್ದರಾಮಯ್ಯ ಅವರ ನಿರ್ಧಾರ ಹಾಗೂ ಸಲಹೆಗಳಿಗೇ ಮೊದಲ ಆದ್ಯತೆ ಇರಲಿದೆ ಎಂದು ವರಿಷ್ಠರು ಆಶ್ವಾಸನೆ ನೀಡಿದ್ದಾರೆ. ಇದರ ಜೊತೆಗೆ, ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿರುವ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ನೀಡುವ ಕುರಿತು ಕೂಡ ದೆಹಲಿ ಮಟ್ಟದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ವರದಿಗಳು ಬಿಚ್ಚಿಟ್ಟಿವೆ.

ನಿನ್ನೆ ಕಾಂಗ್ರೆಸ್ ಸಭೆಯಲ್ಲಿ ಏನಾಯಿತು?

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ (ಮೇ 26) ಒಂದು ಮಹತ್ವದ ಸಭೆ ಜರುಗಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಈ ಹೈಪ್ರೊಫೈಲ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದರು. ಮೇಲ್ನೋಟಕ್ಕೆ ಕಾಂಗ್ರೆಸ್ ನಾಯಕತ್ವ ಬದಲಾವಣೆಯ ವರದಿಗಳನ್ನು ಸಾರ್ವಜನಿಕವಾಗಿ ನಿರಾಕರಿಸಿದ್ದರೂ, ತೆರೆಮರೆಯ ರಾಜಕೀಯ ಚಿತ್ರಣ ಮಾತ್ರ ತೀರಾ ಸಂಕೀರ್ಣವಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಸುದೀರ್ಘ ಮ್ಯಾರಥಾನ್ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಉಭಯ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಒಟ್ಟಾಗಿ ಸಾಗಬೇಕು ಎಂದು ರಾಹುಲ್ ಗಾಂಧಿ ಅವರು ಗಂಭೀರವಾಗಿ ಒತ್ತಿಹೇಳಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ನಿರಂತರ ಅಧಿಕಾರ ಮುನಿಸು ಮತ್ತು ಶಕ್ತಿ ಪ್ರದರ್ಶನದಿಂದಾಗಿ ಸಾರ್ವಜನಿಕ ವಲಯದಲ್ಲಿ ನಾಯಕರ ಮೇಲಿರುವ ರಾಜಕೀಯ ಗ್ರಹಿಕೆ ತುಸು ಕುಸಿದಿದೆ, ಹೀಗಾಗಿ ಈ ಹಿಂದಿನ ಒಪ್ಪಂದದಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ?

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸೂಚಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರಿಗೆ ಗೌರವಯುತವಾಗಿ ರಾಜ್ಯಸಭಾ ಸ್ಥಾನದ ಭರವಸೆಯನ್ನು ನೀಡಲಾಗಿದ್ದು, ಕೇಂದ್ರ ಮಟ್ಟದಲ್ಲಿ ಪಕ್ಷದ ಜವಾಬ್ದಾರಿಯನ್ನು ಹೊರಲು ಸಿದ್ಧರಾಗುವಂತೆ ತಿಳಿಸಲಾಗಿದೆ. ಈ ದೆಹಲಿ ಸಭೆಯ ಬೆನ್ನಲ್ಲೇ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಾಳೆ ನಡೆಯಲಿರುವ ಉಪಹಾರ ಕೂಟವು ಮತ್ತಷ್ಟು ರಾಜಕೀಯ ರಂಗು ಪಡೆದುಕೊಂಡಿದೆ.​ ನಾಳೆಯ ಬ್ರೇಕ್​ಫಾಸ್ಟ್​ ಮೀಟಿಂಗ್​ ಬಳಿಕ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net