ಕನ್ನಡ ಚಳವಳಿ ವಾಙ್ಮಯದಿಂದ ಕನ್ನಡಿಗರಿಗೆ ಶ್ರೇಯಸ್ಸು: ನಾಗಾಭರಣ
ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
* ಹುಸೇನ್, ಮಂಜುಳಾಂಬಾಗೆ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ
* ಹಿರಿಯ ಕನ್ನಡಪರ ಚಿಂತಕ ರಾ. ನಂ. ಚಂದ್ರಶೇಖರ -75ರ ಸಂಭ್ರಮ
ಬೆಂಗಳೂರು:ಕನ್ನಡದ ಪರಂಪರೆಯ ಹಿರಿಮೆಗಳನ್ನು ನಾವೆಲ್ಲ ಹೇಳುತ್ತಲೇ ಇರಬೇಕು. ಅಂತಹ ವಾಙ್ಮಯವನ್ನು ಸೃಷ್ಟಿಸಿರುವ ರಾ.ನಂ. ಚಂದ್ರಶೇಖರ್ ಅವರು ವಸ್ತುನಿಷ್ಠ ಮತ್ತು ಪ್ರಾಮಾಣಿಕ ಕನ್ನಡ ಹೋರಾಟಕ್ಕೆ ಹೆಸರಾಗಿದವರು ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಕನ್ನಡಪರ ಚಿಂತಕ ಮತ್ತು ಲೇಖಕ ರಾ. ನಂ. ಚಂದ್ರಶೇಖರ - 75ರ ಗೌರವಾರ್ಥವಾಗಿ ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಬಿಎಂಟಿಸಿ ಸಂಸ್ಥೆಯ ಕೆ.ಎಸ್.ಎಂ. ಹುಸೇನ್ ಅವರಿಗೆ 2025ನೇ ಸಾಲಿನ ಹಾಗೂ ಅಂಚೆ ಇಲಾಖೆಯ ಎಸ್. ಮಂಜುಳಾಂಬಾಗೆ 2026ನೇ ಸಾಲಿನ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಾ. ನಂ. ಚಂದ್ರಶೇಖರ ಅವರು ಕನ್ನಡದ ಸಾಕ್ಷೀಪ್ರಜ್ಞೆ ಆಗಿದ್ದಾರೆ. ಆದರೆ ಯಾವ ಪಕ್ಷದ ಸರ್ಕಾರ ಬಂದರೂ ಕನ್ನಡದ ಪರ ನಿಲ್ಲುವುದಿಲ್ಲ ಎನ್ನುವುದು ಕಹಿ ವಾಸ್ತವ. ಹೀಗಾಗಿ ಕನ್ನಡ ಮ್ಯೂಸಿಯಂ ಸ್ಥಾಪನೆ ಸೇರಿ ಹೆಚ್ಚಿನ ಕನ್ನಡದ ಕೆಲಸಗಳು ತಾರ್ಕಿಕ ಅಂತ್ಯವನ್ನೇ ಮುಟ್ಟುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಬಾಬು ಕೃಷ್ಣಮೂರ್ತಿ ಮಾತನಾಡಿ, ಗೋಕಾಕ್ ಚಳವಳಿಯು ಕನ್ನಡಪರ ಹೋರಾಟದಲ್ಲಿ ಉಜ್ವಲ ಅಧ್ಯಾಯವಾಗಿದೆ. 50 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಚಳವಳಿಯಲ್ಲಿ ಇರುವ ರಾ.ನಂ. ನಿಸ್ವಾರ್ಥವಾಗಿ ನಮ್ಮ ಭಾಷೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸತತ ಸಾಹಿತ್ಯ ಕೃಷಿಯು ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ತ ವಿಚಾರಗಳನ್ನೂ ಒಳಗೊಂಡಿದೆ ಎಂದು ಬಣ್ಣಿಸಿದರು.
ನಿಸ್ವಾರ್ಥ ಚೇತನ:
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿ, ಕನ್ನಡದ ಕೆಲಸಗಳಿಗೆ ಬಂದಾಗ ವ್ಯಾಪ್ತಿ ಮತ್ತು ಪ್ರಾಪ್ತಿ ನಿರ್ಣಾಯಕವಾಗಿವೆ. ಒಂದು ಭಾಷಿಕ ಸಮುದಾಯಕ್ಕೆ ರಾ.ನಂ. ಅವರಂತೆ ನಿಸ್ವಾರ್ಥವಾಗಿ ದುಡಿಯುವ ಚೇತನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಾ.ನಂ. ಚಂದ್ರಶೇಖರ ಅವರ ಸಾಹಿತ್ಯಕೃಷಿ ಕುರಿತ ವಿಮರ್ಶಾ ಲೇಖನಗಳ ಸಂಕಲನ ’ಅಕ್ಷರಸಾಕ್ಷ್ಯ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಜತೆಗೆ ರಾ. ನಂ. ಚಂದ್ರಶೇಖರ ಮತ್ತು ಗಾಯತ್ರಿ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಂಘಟಕ ವ.ಚ.ಚನ್ನೇಗೌಡ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ್, ಹಿರಿಯ ಸಂಶೋಧಕ ಆರ್. ಶೇಷ ಶಾಸ್ತ್ರಿ, ಭಾರತಿ ಶೇಷಗಿರಿ ರಾವ್, ಶಿವಲಿಂಗಯ್ಯ ಇತರರು ಇದ್ದರು.
ನಾನು ಲೇಖಕನಾಗಲು ಪ್ರೇರಣೆಯಾದವರು ಹಾ.ಮಾ. ನಾಯಕ ಮತ್ತು ಖಾದ್ರಿ ಶಾಮಣ್ಣ ಅವರು. ನಂತರದ ದಿನಗಳಲ್ಲಿ ಚಿದಾನಂದಮೂರ್ತಿ ಮತ್ತು ಎಲ್. ಎಸ್. ಶೇಷಗಿರಿರಾಯರು ಇದಕ್ಕೆ ಇಂಬು ನೀಡಿದರು.