ರೈಲ್ವೆಯಲ್ಲಿ ಕನ್ನಡ ಕಡೆಗಣನೆ: ಹಿಂದಿಯಲ್ಲಿ ವೆಬ್​ಸೈಟ್ ಆರಂಭಿಸಲು ನಿರ್ದೇಶನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

| ಆನಂದ ಅಂಗಡಿ, ಹುಬ್ಬಳ್ಳಿ

ಕನ್ನಡಿಗರ ಆಕ್ರೋಶ, ಕನ್ನಡಪರ ಸಂಘಟನೆಗಳ ನಿರಂತರ ಹೋರಾಟಗಳ ನಡುವೆಯೂ ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಹಿಂದೇಟು ಹಾಕುತ್ತಿರುವ ರೈಲ್ವೆ ಸಚಿವಾಲಯ ಇದೀಗ ಇಂಗ್ಲಿಷ್​ನಲ್ಲಿರುವ ರೈಲ್ವೆ ಅಧಿಕೃತ ವೆಬ್​ಸೈಟ್ ಅನ್ನು ಹಿಂದಿಯಲ್ಲಿಯೂ ಆರಂಭಿಸುವಂತೆ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ.

ವೆಬ್​ಸೈಟ್​ನ ಎಲ್ಲ ಲಿಂಕ್, ಮಾಹಿತಿ ಹಾಗೂ ಅಗತ್ಯ ಸೇವೆಗಳು ಇಂಗ್ಲಿಷ್ ಜತೆಗೆ ಹಿಂದಿಯಲ್ಲಿಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂಬ ನಿರ್ದೇಶನವನ್ನು ರೈಲ್ವೆ ಸಚಿವಾಲಯ ನೀಡಿದೆ. 2026 ಜುಲೈ 23ರಂದು ಈ ಸಂಬಂಧ ನಿರ್ದೇಶನ ನೀಡಲಾಗಿದೆ. ಆ.7ರೊಳಗೆ ವೆಬ್​ಸೈಟ್ ಹಿಂದಿಯಲ್ಲಿ ಪ್ರದರ್ಶನಗೊಳ್ಳಬೇಕು ಎಂದು ಹೇಳಿದೆ. 

ಈ ಸೂಚನೆ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ಮುಖ್ಯ ಕಚೇರಿಗೂ ತಲುಪಿದೆ. ನೈಋತ್ಯ ರೈಲ್ವೆ ವಲಯದ ವೆಬ್​ಸೈಟ್ ಜತೆಗೆ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗೀಯ ವೆಬ್​ಸೈಟ್​ಗಳು ಸಹ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಕಾಣಿಸಲಿವೆ. ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯ ಕೊಡುವಂತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೋರಾಟ ನಡೆಯುತ್ತಿದೆ. ರೈಲ್ವೆ ಪರೀಕ್ಷೆ, ರೈಲುಗಳ ಪ್ರಯಾಣದ ವಿವರ ಸೇರಿದಂತೆ ಹಲವಾರು ಮಾಹಿತಿಗಳನ್ನು ಒಳಗೊಂಡಿರುವ ರೈಲ್ವೆ ವೆಬ್​ಸೆಟ್ ಅನ್ನು ಇಂಗ್ಲಿಷ್​ನಲ್ಲಿ ಓದಲು ಪರದಾಡುವ ಅನೇಕ ಜನರಿದ್ದಾರೆ. 

ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ವೆಬ್​ಸೈಟ್ ರಚನೆಯಾಗಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತೆಂಬ ಅಭಿಪ್ರಾಯವಿದೆ. ರೈಲ್ವೆ ವೆಬ್​ಸೈಟ್​ ಅನ್ನು ಹಿಂದಿಯಲ್ಲಿ ರಚಿಸುವ ಬದಲು ಕನ್ನಡ ಸೇರಿದಂತೆ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಮಾಡುವುದು ಉತ್ತಮ. ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಸುವಂತೆ ಕನ್ನಡಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಬಾರಿ ಹೋರಾಟ ಮಾಡಿದರೂ ರೈಲ್ವೆ ಇಲಾಖೆ ಕಣ್ಣು ತೆರೆಯುತ್ತಿಲ್ಲ. 

ಇದೀಗ, ವೆಬ್​ಸೈಟ್ ರಚಿಸುವಾಗಲೂ ಕನ್ನಡ ಸೇರಿದಂತೆ ಇತರ ರಾಜ್ಯಗಳ ಭಾಷೆಗಳಿಗೆ ಆದ್ಯತೆ ನೀಡದಿರುವ ವೈಖರಿ ಸರಿಯಲ್ಲ. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಎಲ್ಲ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡಬೇಕಾಗುತ್ತದೆ.

| ಲಿಂಗರಾಜ ಅಂಗಡಿ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net