ಅವುಡುಗಚ್ಚಿದ ಅಬ್ಬರದ ನಡುವೆ ಕರಿ ಹರಿದ ಕೆಂಪು ಬಣ್ಣದ ಎತ್ತು
ಒಂದೂವರೆ ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ
ಬಬಲೇಶ್ವರ : ತಾಲೂಕಿನ ಸುಪ್ರಸಿದ್ಧ ಕಾಖಂಡಕಿ ಕಾರಹುಣ್ಣಿಮೆ ಸಂಭ್ರಮ ಅತೀ ವಿಜೃಂಭಣೆಯಿಂದ ಭಾನುವಾರ ನೆರವೇರಿತು. ಕಾರಹುಣ್ಣಿಮೆ ಆದ ಏಳನೇ ದಿನ ಕಾಖಂಡಕಿಯಲ್ಲಿ ಕರಿ ಆಚರಿಸುವುದು ಸಂಪ್ರದಾಯ.
ಕರಿ ಹರಿಯಲು ಅನ್ನದಾತರು ಎತ್ತು, ಎಮ್ಮೆ, ಆಕಳು, ಹೋರಿ ಜೊತೆಗೆ ಅಂದವಾಗಿ ಬಣ್ಣ ಹಚ್ಚಿ, ಸಿಂಗರಿಸಿದ್ದರು. ಜೊತೆಗೆ ಕೃಷಿ ಚಟುವಟಿಕೆಗೆ ಬಳಸುವ ಕೂರಿಗೆ, ಕುಂಟೆ, ಗುದ್ದಲಿ, ಸಲಿಕೆ, ಕುಡುಗೋಲು ಮುಂತಾದ ಸಾಮಾಗ್ರಿಗಳಿಗೆ ಕುಂಕುಮ-ಅರಿಶಿನ ಹಚ್ಚಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಬೆಳಗ್ಗೆ 10ಕ್ಕೆ ಗ್ರಾಮದ ಪ್ರಮುಖರಾದ ರಾಮನಗೌಡ ಪಾಟೀಲ ಹಾಗೂ ಹಿರಿಯರ ಸಮಕ್ಷಮ ಮನೆತನದ ಪೂಜೆ, ಮೆರವಣಿಗೆ ಆಚರಿಸುವ ಮೂಲಕ ಕಾರ ಹುಣ್ಣಿಮೆಗೆ ಚಾಲನೆ ನೀಡಿದರು. ಕರಿಗೆ ಬಿಡುವ ಬಲಿಷ್ಠ ಎತ್ತುಗಳ ಮೆರವಣಿಗೆ ಆಕರ್ಷಕವಾಗಿತ್ತು. ಅವುಗಳಿಗೆ ಜ್ಯೂಲಾ, ಗೆಜ್ಜೆಸರ, ಬಲೂನ್, ಬಣ್ಣಗಳನ್ನು ಹಚ್ಚಿ ಅಲಂಕರಿಸಲಾಗಿತ್ತು. ರೈತರು ಪ್ರತಿಯೊಂದಕ್ಕೂ ಒಂದೊಂದು ಹೆಸರಿನಿಂದ ಕರೆಯುತ್ತಿದ್ದರು.
ಮಧ್ಯಾಹ್ನದ ನಂತರ ನಲ್ವತ್ತಕ್ಕೂ ಅಧಿಕ ರಂಗುರಂಗಿನಿಂದ ಅಲಂಕೃತಗೊಂಡ ಬಲಿಷ್ಠ ಎತ್ತುಗಳನ್ನು ಕರಿ ಬಿಡಲಾಯಿತು. ಅವುಗಳು ರಣರಂಗದಲ್ಲಿ ಸೈನಿಕರು ನುಗ್ಗಿದಂತೆ ಎಲ್ಲೆಂದರಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದರೆ, ಅವುಗಳನ್ನು ಹಿಡಿಯಲು ರೈತ ಯುವಕರು ಹೋರಾಡುತ್ತಿದ್ದರು. ಈ ಅಮೋಘ ದೃಶ್ಯವನ್ನು ಕಣ್ತುಂಬಿಕೊಳ್ಳಲು ಒಂದೂವರೆ ಲಕ್ಷಕ್ಕೂ ಅಧಿಕ ಜನತೆ ಗ್ರಾಮದ ಚಾವಡಿ, ಶಾಲೆ, ಮನೆ ಮಾಳಿಗೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕೂಗು, ಸಿಳ್ಳೆ, ಚಪ್ಪಾಳೆ ಹಾಕುತ್ತಾ ಹುರಿದುಂಬಿಸುತ್ತಿದ್ದ ದೃಶ್ಯ ಹೃನ್ಮನ ತುಂಬಿತು.
ಎತ್ತುಗಳು ಜನರತ್ತ ವೇಗವಾಗಿ ಮುನ್ನುಗ್ಗುತ್ತಿದ್ದರೆ, ಜನತೆ ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನ ರೋಮಾಂಚನವಾಗಿತ್ತು. ಮೂರುಗಂಟೆಗೂ ಅಧಿಕ ಕಾಲ ನಡೆದ ಕರಿಯನ್ನು ವೀಕ್ಷಿಸಲು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾದಿಂದಲೂ ಜನತೆ ಆಗಮಿಸಿದ್ದು ವಿಶೇಷವಾಗಿತ್ತು.
ಈ ಬಾರಿ ಕೆಂಪು ಎತ್ತು ಮುಂದೆ ಓಡಿರುವುದರಿಂದ ತೊಗರಿ, ಬೆಲ್ಲ, ಗೋಧಿ, ಬಂಗಾರ ಮುಂತಾದ ಕೆಂಪು ಬಣ್ಣದ ವಸ್ತುಗಳ ದರ ಹೆಚ್ಚಾಗುತ್ತದೆ ಎಂಬುದು ರೈತರ ನಂಬಿಕೆ. ಕಾರಹುಣ್ಣಿಮೆ ನೋಡಲು ಅನುಕೂಲವಾಗುವಂತೆ ಜನರು ಸುರಕ್ಷಿತ ಜಾಗದಲ್ಲಿ ನಿಲ್ಲಲೆಂದು ಕಾಖಂಡಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಬಲೇಶ್ವರ ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.