ಕೈಮರ ಟು ಸೀತಾಳಯ್ಯನಗಿರಿ ಪಿಪಿಪಿ ಮಾದರಿಯಲ್ಲಿ ಬೃಹತ್​ ರೋಪ್​ ವೇ; ಸಿಎಂ ಸಿದ್ದರಾಮಯ್ಯ Karnataka Budget 2026-27

Karnataka Budget 2026-27
Karnataka Budget 2026-27
Published on
ಬೆಂಗಳೂರು: ಕರ್ನಾಟಕ ರಾಜ್ಯ ಬಜೆಟ್ 2026ರಲ್ಲಿ (Karnataka Budget 2026-27) ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿರುವ ಪ್ರಮುಖ ಯೋಜನೆಗಳಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ಯೋಜಿಸಲಿರುವ ರೋಪ್​ ವೇ ಒಂದು ಕುತೂಹಲಕಾರಿ ಮತ್ತು ದೂರದೃಷ್ಟಿಯ ಕ್ರಮವಾಗಿದೆ.
ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವುದು ಸರ್ಕಾರದ ಜಾಣತನದ ನಡೆಯಾಗಿದೆ. ಪ್ರಸ್ತುತ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿ ತಲುಪಲು ಇರುವ ರಸ್ತೆಗಳು ಕಿರಿದಾಗಿದ್ದು, ರೋಪ್​ ವೇ ನಿರ್ಮಾಣವಾದರೆ ಪ್ರವಾಸಿಗರು ಇದರ ಮೂಲಕ ಶಿಖರವನ್ನು ತಲುಪಬಹುದು. ಇದರಿಂದ ಶಬ್ಧ ಮಾಲಿನ್ಯ ಕಡಿಮೆಯಾಗುತ್ತದೆ.
ಚಿಕ್ಕಮಗಳೂರು ಕರ್ನಾಟಕದ ಕಾಫಿ ನಾಡು ಎಂದೇ ಪ್ರಸಿದ್ಧ. ಕರ್ನಾಟಕದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಮತ್ತು ಪಶ್ಚಿಮ ಘಟ್ಟಗಳ ಹಸಿರು ಸಿರಿ ಇಲ್ಲಿನ ಆಕರ್ಷಣೆಯಾಗಿದ್ದು, ಮಲೆನಾಡಿನ ಸೊಬಗು, ಜಲಪಾತಗಳು ಪ್ರವಾಸಿಗರಿಗೆ ಸ್ವರ್ಗವೆನಿಸುತ್ತದೆ.
ಮುಳ್ಳಯ್ಯನಗಿರಿ ಶಿಖರಕ್ಕೆ ಹೋಗುವ ದಾರಿಯಲ್ಲಿ ಸಿಗುವ ಮೊದಲ ಪ್ರಮುಖ ನಿಲ್ದಾಣವೇ ಸೀತಾಳಯ್ಯನಗಿರಿ. ಇಲ್ಲಿಂದ ಸುಮಾರು 3-4 ಕಿ.ಮೀ ದೂರದಲ್ಲಿ ಮುಳ್ಳಯ್ಯನಗಿರಿ ಇದೆ. ಬೆಟ್ಟದ ತುದಿಯಲ್ಲಿ ಮುಳ್ಳಪ್ಪ ಸ್ವಾಮಿಯ ದೇವಸ್ಥಾನವಿದ್ದು, ಇಲ್ಲಿಗೆ ತಲುಪಲು ಸುಮಾರು 500 ಮೆಟ್ಟಿಲುಗಳನ್ನು ಹತ್ತಬೇಕು.
ಈಗಿನ ಬಜೆಟ್ ಘೋಷಣೆಯಂತೆ, ಈ ಎರಡು ಗಿರಿಗಳ ನಡುವೆ ರೋಪ್‌ವೇ ನಿರ್ಮಾಣವಾದರೆ, ಮೆಟ್ಟಿಲು ಹತ್ತಲಾಗದ ವೃದ್ಧರಿಗೆ ಮತ್ತು ಮಕ್ಕಳಿಗೆ ಸೌಂದರ್ಯವನ್ನು ಸವಿಯಲು ಅನುಕೂಲವಾಗಿದೆ.

ಸಿಎಂ ದಾಖಲೆ ಬಜೆಟ್​

ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ (2026-27 ಸಾಲಿನ ರಾಜ್ಯ ಆಯವ್ಯಯ) ಕರ್ನಾಟಕ ಇತಿಹಾಸದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಏಕೆಂದರೆ, ಯಾವುದೇ ಮುಖ್ಯಮಂತ್ರಿ ಇಷ್ಟೊಂದು ಬಾರಿ ಬಜೆಟ್ ಮಂಡಿಸಿಲ್ಲ.
ಸುಮಾರು 4.48 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ (ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿ) ಮುಖ್ಯ ಆದ್ಯತೆ ನೀಡಲಾಗಿದ್ದು, ಆದಾಯ ಕೊರತೆ, ಜಿಎಸ್‌ಟಿ ಸುಧಾರಣೆಯಿಂದ ಉಂಟಾದ ನಷ್ಟ ಮತ್ತು ಹೆಚ್ಚುತ್ತಿರುವ ಖರ್ಚುಗಳ ನಡುವೆಯೂ ಮಹಿಳೆಯರು, ರೈತರು, ಯುವಕರು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ (ವಿಶೇಷವಾಗಿ ಬೆಂಗಳೂರು ಮತ್ತು ಹಿಂದುಳಿದ ಪ್ರದೇಶಗಳು) ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net