ಜಿಬಿಎ ಪಂಚ ಪಾಲಿಕೆಗಳಿಗೆ ಜೂನ್​ನಲ್ಲೇ ಮುಹೂರ್ತ! ಬ್ಯಾಲೆಟ್ ಪೇಪರ್ ಬಳಕೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಪಂಚ ಪಾಲಿಕೆಗಳಿಗೆ ಜೂನ್​ನಲ್ಲೇ ಮುಹೂರ್ತ
  • 14-24ರ ನಡುವೆ ಮತದಾನ ಪ್ರಕ್ರಿಯೆ ಸಾಧ್ಯತೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಜನಪ್ರತಿನಿಧಿಗಳ ಅನುಪಸ್ಥಿತಿಗೆ ತೆರೆಬೀಳುವ ಕಾಲ ಸನ್ನಿಹಿತವಾಗಿದ್ದು, ಚುನಾವಣೆಗೆ ಮುಹೂರ್ತ ನಿಗದಿಪಡಿಸುವ ಸಿದ್ಧತೆಯನ್ನು ಚುನಾವಣಾ ಆಯೋಗ ಆರಂಭಿಸಿದೆ.

ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ. ಸಂಗ್ರೇಶಿ ಶುಕ್ರವಾರ ಈ ಕುರಿತು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಜೂನ್ ಅಂತ್ಯದೊಳಗೆ ಐದು ಪಾಲಿಕೆಗಳ 369 ವಾರ್ಡ್​ಗಳಿಗೆ ಜನಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಐದು ಪಾಲಿಕೆಗಳ ಚುನಾವಣೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿ ಸವೋಚ್ಚ ನ್ಯಾಯಾಲಯ ಅಂತಿಮ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲ, ಪರೀಕ್ಷೆ ಹಾಗೂ ಜನಗಣತಿ ಪ್ರಾಯೋಗಿಕ ಸವಾಲುಗಳ ನಡುವೆಯೂ ಜೂನ್ 14ರಿಂದ ಜೂನ್ 24ರ ನಡುವಿನ 10 ದಿನಗಳ ಅವಧಿಯಲ್ಲಿ ಯಾವುದಾದರೂ ಒಂದು ದಿನ ಮತದಾನ ನಡೆಸಲು ಆಯೋಗ ಗಂಭೀರ ಚಿಂತನೆ ನಡೆಸಿದೆ.

6 ವರ್ಷಗಳ ನಿರೀಕ್ಷೆ

ಕೊನೆಯ ಸಲ ಬಿಬಿಎಂಪಿಗೆ ಚುನಾವಣೆ ನಡೆದಿದ್ದು 2015ರಲ್ಲಿ. ಆ ಕೌನ್ಸಿಲ್​ನ ಅವಧಿ 2020ರ ಸೆಪ್ಟೆಂಬರ್​ಗೆ ಮುಕ್ತಾಯವಾಗಿತ್ತು. ಅಂದಿನಿಂದ ಇಂದಿನವರೆಗೆ ಸರಿಸುಮಾರು 5 ವರ್ಷ 8 ತಿಂಗಳುಗಳಿಂದ ಪಾಲಿಕೆ ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಆಡಳಿತದಡಿಯೇ ಸಾಗುತ್ತಿದೆ. ಪ್ರಜಾಪ್ರಭುತ್ವದ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಇದು ದೊಡ್ಡ ಮಟ್ಟದ ಹಿನ್ನಡೆ ಎಂಬ ಟೀಕೆ ಕೇಳಿಬರುತ್ತಿದೆ.

ಬ್ಯಾಲೆಟ್ ಪೇಪರ್ ಬಳಕೆ?

ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕ ಮತದಾನ ನಡೆಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಚುನಾವಣಾ ಆಯೋಗವು ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಸಾಧಕ -ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದೆ.

ಆಡಳಿತಾತ್ಮಕ ಸಿದ್ದತೆ ಪೂರ್ಣ: ಚುನಾವಣಾ ಆಯೋಗವು ಶುಕ್ರವಾರ ನಡೆಸಿದ ಮಹತ್ವದ ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಹಾಗೂ ಐದೂ ಪಾಲಿಕೆಗಳ ಆಯುಕ್ತರು ಭಾಗವಹಿಸಿದ್ದರು. ಈಗಾಗಲೇ ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಸಿದ್ಧತೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಕಾರ್ಯಕ್ಕಾಗಿ ಆರ್​ಒ, ಎಆರ್​ಒ ಹಾಗೂ ಬಿಎಲ್​ಒಗಳ ನೇಮಕಾತಿಗೆ ಆಯೋಗ ಸೂಚನೆ ನೀಡುವ ಮೂಲಕ ಚುನಾವಣಾ ಸನ್ನದ್ಧತೆ ಖಚಿತಪಡಿಸಿದೆ.

369 ವಾರ್ಡ್​ಗಳಿಗೆ ಕದನ

ಜಿಬಿಎ ವ್ಯಾಪ್ತಿಯ ಹೊಸ ಆಡಳಿತ ವ್ಯವಸ್ಥೆಯಡಿ ಮೊದಲ ಬಾರಿಗೆ 369 ವಾರ್ಡ್​ಗಳ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದೆ. ಜೂನ್ ದ್ವಿತೀಯಾರ್ಧದಲ್ಲಿ ಮತದಾರರು ತಮ್ಮ ಹೊಸ ಪ್ರತಿನಿಧಿಗಳನ್ನು ಆರಿಸುವ ಮೂಲಕ ನಗರದ ಅಭಿವೃದ್ಧಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಬಾಕಿ ಕಾರ್ಯಕ್ಕೆ ವೇಗ

ಚುನಾವಣಾ ದಿನಾಂಕ ಘೋಷಣೆಯಾದ ತಕ್ಷಣ ನೀತಿ ಸಂಹಿತೆ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಪ್ರ್ರಾಯೋಜಿತ ಯಾವುದೇ ಬಾಕಿ ಕಾರ್ಯಕ್ರಮಗಳಿದ್ದರೂ ಅವುಗಳನ್ನು ಶೀಘ್ರವೇ ಮುಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಒಂದು ವಾರದಲ್ಲಿ ಅಧಿಕೃತವಾಗಿ ಚುನಾವಣಾ ದಿನಾಂಕ ಪ್ರಕಟವಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net