ಧಾರವಾಡ: ನಗರದ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ರ್ಯಾಪಿಡ್ ಸಂಸ್ಥೆ ಮತ್ತು ಮೂರ್ತಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿ. 14ರಂದು ಜೆಎಸ್ಎಸ್ ಸಂಸ್ಥೆಯ ಆವರಣದಲ್ಲಿ ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಸಂಸ್ಥೆಯ ಕಾರ್ಯದಶಿರ್ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ರಿಂದ ಉದ್ಯೋಗ ಮೇಳ ಆರಂಭಗೊಳ್ಳಲಿದೆ. 18ರಿಂದ 45 ವರ್ಷದೊಳಗಿನ ಮಹಿಳೆಯರು ಭಾಗವಹಿಸಬಹುದು. ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ನಸಿರ್ಂಗ್, ಇಂಜಿನಿಯರಿಂಗ್, ಇತರೆ ಪದವೀಧರರು ಪಾಲ್ಗೊಳ್ಳಬಹುದು. ಸುಮಾರು 35 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಪ್ರತ್ಯೇಕ ಕೊಠಡಿಗಳಲ್ಲಿ ಸಂದರ್ಶನ ನಡೆಸುವರು. ಈಗಾಗಲೇ ಸಾವಿರಾರು ಅಭ್ಯಥಿರ್ಗಳು ಹೆಸರುಗಳನ್ನು ನೋಂದಾಯಿಸಿದ್ದು, 14ರಂದು ಸ್ಥಳದಲ್ಲೂ ನೋಂದಣಿ ಸೌಲಭ್ಯ ಇದೆ. ಸಂದರ್ಶನಕ್ಕೆ ಹಾಜರಾಗುವ ಮಹಿಳೆಯರು ಸ್ವವಿವರ, ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು.
ರ್ಯಾಪಿಡ್ ಸಂಸ್ಥೆಯ ಸಿಇಒ ಮಾಳವಿಕಾ ಕಡಕೋಳ ಮಾತನಾಡಿ, ಜೆಎಸ್ಎಸ್ ಸಂಸ್ಥೆಯ ಸಹಯೋಗದೊಂದಿಗೆ ಇದು 5ನೇ ಉದ್ಯೋಗ ಮೇಳವಾಗಿದೆ. 2001ರಿಂದ ಈವರೆಗೆ 6,000ಕ್ಕೂ ಹೆಚ್ಚು ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿದೆ. ಮೇಳದಲ್ಲಿ ಪಾಲ್ಗೊಂಡು ವಯೋಮಿತಿ, ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ಇದು ಸದವಕಾಶ ಎಂದರು.