

ಹೊಸಕೋಟೆ :
ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಜಾಬ್ಕಾರ್ಡ್ಗೆ ನೋಂದಣಿ ಕಾರ್ಯ ಸೆ.15ರವರೆಗೆ ನಡೆಯಲಿದೆ. ಅರ್ಹರು ಅಭಿಯಾನದ ಸದುಪಯೋಗ ಪಡೆದುಕೊಂಡು ಗ್ರಾಮದಲ್ಲೇ ಉದ್ಯೋಗ ಕಂಡುಕೊಳ್ಳಬೇಕು ಎಂದು ಉಪಕಾರ್ಯದರ್ಶಿ ಬಿ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಕುಂಬಳಹಳ್ಳಿಯಲ್ಲಿ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ಹಮ್ಮಿಕೊಂಡಿದ್ದ ವಿಶೇಷ ಉದ್ಯೋಗ (ಜಾಬ್ ಕಾರ್ಡ್) ಮೇಳ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ ಮಾತನಾಡಿ, ಅಭಿಯಾನದ ಮೊದಲ ಭಾಗವಾಗಿ ಪಂಚಾಯಿತಿ ಸಿಬ್ಬಂದಿ ಹಾಗೂ ಪ್ರತಿನಿಧಿಗಳು ಮನೆಮನೆಗೂ ತೆರಳಿ, ಹೊಸದಾಗಿ ಉದ್ಯೋಗ ಚೀಟಿ ಪಡೆಯುವ ವಿಧಾನ ಹಾಗೂ ಈಗಾಗಲೇ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಕೆಲಸ ಪಡೆಯುವ ವಿಚಾರ ತಿಳಿಸಲಾಗುತ್ತದೆ. ಯೋಜನೆಯ ಮಹತ್ವ, ಲಭ್ಯವಿರುವ ಕೂಲಿ ದಿನಗಳು, ಮೊತ್ತ ಹಾಗೂ ವಿವಿಧ ವೈಯಕ್ತಿಕ ಸೌಲಭ್ಯಗಳ ವಿವರ ನೀಡಿದರು.
ಸಮಾಜದ ಮುಖ್ಯವಾಹಿನಿಯಿಂದ ದೂರವಿರುವ ವಿಕಲಾಂಗರಿಗೆ ಸ್ಥಳದಲ್ಲೇ ಉಪ ಕಾರ್ಯದರ್ಶಿಗಳು ಹೊಸ ಉದ್ಯೋಗ ಚೀಟಿ ಹಾಗೂ ವೈಯಕ್ತಿಕ ಕಾಮಗಾರಿಗಳ ಆದೇಶ ಪ್ರತಿ ವಿತರಿಸಿದರು. ಒಟ್ಟಾರೆ ಹೊಸದಾಗಿ 40 ಅರ್ಜಿ ಸ್ವೀಕರಿಸಲಾಯಿತು. 20 ಕೃಷಿಹೊಂಡ ಬೇಡಿಕೆ, 18 ಕೊಳವೆ ಬಾವಿ ಮರುಪೂರಣ ಬೇಡಿಕೆ, ಹಾಗೂ 5 ಕುರಿ ಹಾಗೂ ದನದ ಕೊಟ್ಟಿಗೆಗೆ ಅರ್ಜಿ ಸ್ವೀಕರಿಸಿ ಗ್ರಾಪಂಗೆ ಸಲ್ಲಿಸಲಾಯಿತು.
ಯೋಜನೆಯಡಿ ವಿವಿಧ ವೈಯಕ್ತಿಕ ಕಾಮಗಾರಿಗಳಾದ ತೋಟಗಾರಿಕೆ, ಕೊಟ್ಟಿಗೆ ನಿಮಾರ್ಣ, ಬೋರ್ವೆಲ್ ಮರುಪೂರಣ ಇತ್ಯಾದಿಗಳಿಗೆ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಅಧಿಕೃತ ಆದೇಶ ಪ್ರತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿತರಿಸಿದರು.