ಆಳಂದನಲ್ಲಿ ಮತ್ತೆ ಜೆಸಿಬಿ ಸದ್ದು

ಆಳಂದನ ಹಳೇ ತಹಸಿಲ್​ ಕಚೇರಿಯಿಂದ ದರ್ಗಾ ಬೇಸ್​ವರೆಗಿನ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿರುವುದು.
ಆಳಂದನ ಹಳೇ ತಹಸಿಲ್​ ಕಚೇರಿಯಿಂದ ದರ್ಗಾ ಬೇಸ್​ವರೆಗಿನ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹಳೇ ತಹಸಿಲ್​ ಕಚೇರಿ&ದರ್ಗಾ ಬೇಸ್​ವರೆಗಿನ ರಸ್ತೆ ಅಗಲೀಕರಣ ಕಾರ್ಯ ಶುರು
ಆಳಂದ : ಹಳೇ ತಹಸಿಲ್​ ಕಚೇರಿಯಿಂದ ದರ್ಗಾ ಬೇಸ್​ವರೆಗಿನ ರಸ್ತೆ ಕಾರ್ಯಕ್ಕೆ ಮರು ಚಾಲನೆ ಸಿಕ್ಕಿದ್ದು, ಶನಿವಾರ ಜೆಸಿಬಿ ಸಹಾಯದಿಂದ ಮಾರ್ಗದಲ್ಲಿನ ಅಂಗಡಿ&ಮನೆಗಳನ್ನು ನೆಲಸಮ ಮಾಡಲಾಯಿತು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಹಳೇ ತಹಸಿಲ್​ ಕಚೇರಿಯಿಂದ ಅಂಬಾ ಭವಾನಿ ಮಂದಿರ, ಹಳೇ ಪೊಲೀಸ್​ ಸ್ಟೇಷನ್​ ಮಾರ್ಗವಾಗಿ ಸನ್ಮಿತಿ ಕ್ರಾಸ್​ ಮಹಾದೇವ ಮಂದಿರ ದರ್ಗಾ ಬೇಸ್​ವರೆಗೆ ಸುಮಾರು 1.4 ಕಿಮೀ ವರೆಗೆ ರಸ್ತೆ ಅಗಲೀಕರಣ ಕಾರ್ಯ ಇದಾಗಿದೆ. ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳನ್ನು ನೆಲ ಸಮಗೊಳಿಸಿ ರಸ್ತೆ, ಚರಂಡಿ, ಬೀದಿ ದೀಪ ಅಳವಡಿಸುವ ಕೆಲಸ ನಡೆಯಲಿದೆ.
ರಸ್ತೆ ಅಗಲೀಕರಣ ಕಾಮಗಾರಿ 2025ರ ಡಿ.23ಕ್ಕೆ ಶುರುವಾಗಿದ್ದು, ಇದಕ್ಕೆ ತಕರಾರು ತೆಗೆದು ಕೆಲ ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆ ಆಜ್ಞೆ ತಂದಿದ್ದರಿಂದ ಕೆಲಸ ಕುಂಠಿತವಾಗಿತ್ತು. 35 ಕಟ್ಟಡ ಮಾಲೀಕರು ನ್ಯಾಯಾಲಯಕ್ಕೆ ಸರಿಯಾದ ದಾಖಲೆ ಸಲ್ಲಿಸದೆ ಪದೇ&ಪದೆ ವಿಚಾರಣೆಗೆ ಗೈರಾಗುತ್ತಿದ್ದರು. ಹೀಗಾಗಿ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ ಅವರ ಆದೇಶ ಮೇರೆಗೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಎಲ್ಲರ ಹೆಸರುಗಳನ್ನು ಒಳಗೊಂಡ ನೋಟಿಸ್​ ಆಸ್ತಿ ಮಾಲೀಕರ ಕಟ್ಟಡಗಳಲ್ಲಿ ಅಂಟಿಸಿ ನೆಲಸಮ ಮಾಡುತ್ತಿದ್ದಾರೆ.
ಶನಿವಾರ ಬೆಳಗ್ಗೆಯೇ 6 ಹಿಟಾಚಿ ಹಾಗೂ 6 ಜೆಸಿಬಿಗಳೊಂದಿಗೆ ಸ್ಥಳಕ್ಕಾಗಮಿಸಿದ ಪುರಸಭೆ ಅಧಿಕಾರಿ ಶಫಿ ರೋತೆ, ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದ ಕಟ್ಟಡಗಳನ್ನು ತೆರವು ಮಾಡಿದರು. ಕಾರ್ಯಾಚರಣೆಗೆ ಕೆಲವು ಕಟ್ಟಡ ಮಾಲೀಕರು ಅಡ್ಡಿಪಡಿಸಿದ್ದರಿಂದ ಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಸುಮಾರು 100ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್​ ಕಲ್ಪಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net