ಜೆಸಿಬಿ, ಟ್ರಾೃಕ್ಟರ್ ಬಾಡಿಗೆ ದರ ಹೆಚ್ಚಳ

ಬಾಡಿಗೆ ದರವನ್ನು ಹೆಚ್ಚಿಸಲು ಸಂಘ ತೀರ್ಮಾನ
ಬಾಡಿಗೆ ದರವನ್ನು ಹೆಚ್ಚಿಸಲು ಸಂಘ ತೀರ್ಮಾನ
Published on

ಪ್ರಮುಖ ಮುಖ್ಯಾಂಶಗಳು

  • ಜೆಸಿಬಿ ವಸ್ತುಗಳ ಬೆಲೆ ಏರಿಕೆ, ಡೀಸೆಲ್ ದರ ಹಾಗೂ ಜೆಸಿಬಿ ಬಿಡಿಭಾಗಗಳ ಬೆಲೆ ಗಗನ
  • ಅನಿವಾರ್ಯವಾಗಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಾಡಿಗೆ ದರವನ್ನು ಹೆಚ್ಚಿಸಲು ಸಂಘ ತೀರ್ಮಾನ
ಹೊಳೆನರಸೀಪುರ: ಜೆಸಿಬಿ ವಸ್ತುಗಳ ಬೆಲೆ ಏರಿಕೆ, ಡೀಸೆಲ್ ದರ ಹಾಗೂ ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿರುವುದರಿಂದ ಅನಿವಾರ್ಯವಾಗಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಾಡಿಗೆ ದರವನ್ನು ಹೆಚ್ಚಿಸಲು ಸಂಘ ತೀರ್ಮಾನಿಸಿದೆ.
ಈ ಹಿಂದೆ 25 ಲಕ್ಷ ರೂ.ರಷ್ಟಿದ್ದ ಜೆಸಿಬಿ ಯಂತ್ರದ ಬೆಲೆ ಪ್ರಸ್ತುತ 41 ಲಕ್ಷ ರೂ. ತಲುಪಿದೆ. ತೈಲ ಮತ್ತು ಬಿಡಿಭಾಗ, ಡೀಸೆಲ್ ದರದ ಜತೆಗೆ ಜೆಸಿಬಿಗೆ ಬಳಸುವ ವಿವಿಧ ಮಾದರಿಯ ಆಯಿಲ್ ಕ್ಯಾನ್‌ಗಳ ಬೆಲೆ 5,000 ರೂ.ಗಳಿಂದ 8,000 ರೂ.ಗೆ ಏರಿಕೆಯಾಗಿದೆ. ಗ್ರೀಸ್, ಕಿಟ್ ಹಾಗೂ ಇತರ ಬಿಡಿಭಾಗಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ ಎಂದು ಶ್ರೀ ಲಕ್ಷ್ಮಿ ನರಸಿಂಹ ಜೆಸಿಬಿ ಮಾಲೀಕರ ಸಂಘದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಲಕರು ಮತ್ತು ಆಪರೇಟರ್‌ಗಳ ಸಂಬಳವೂ 15,000 ರೂ.ಗಳಿಂದ 18,000 ರೂ.ಗಳಿಗೆ ಏರಿಕೆಯಾಗಿದೆ. ವೆಚ್ಚಗಳು ಏರಿಕೆಯಾದ ಹಿನ್ನೆಲೆಯಲ್ಲಿ ಸಂಘವು ನೂತನ ಬಾಡಿಗೆ ದರಗಳನ್ನು ನಿಗದಿಪಡಿಸಿದೆ. ಈವರೆಗೆ ಪ್ರತಿ ಗಂಟೆಗೆ ಜೆಸಿಬಿ ಬಾಡಿಗೆ 1,000 ರೂ. ಇದ್ದು, ಇನ್ನು ಮುಂದೆ 1,200 ರೂ. ಇರಲಿದೆ. ಸ್ಥಳೀಯವಾಗಿ ಯಾವುದೇ ಕೆಲಸವಿದ್ದರೂ ಕನಿಷ್ಠ 3 ಗಂಟೆಗಳ ಕಾಲ ಜೆಸಿಬಿ ಬಾಡಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಂತೆಯೆ ಜೆಸಿಬಿ ಜತೆಗಿನ ಟ್ರ್ಯಾಕ್ಟರ್ ಬಳಕೆಗೆ ಪ್ರತಿ ಗಂಟೆಗೆ 600 ರೂ. ದರ ನಿಗದಿಪಡಿಸಲಾಗಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಧರ್ಮ ಮಾತನಾಡಿ, ಹೊಳೆನರಸೀಪುರದಲ್ಲಿ ಜೆಸಿಬಿ ವಾಹನಗಳನ್ನು ನಿಲ್ಲಿಸಲು ಸೂಕ್ತ ನಿಲ್ದಾಣ ಇಲ್ಲ. ಅನಿವಾರ್ಯವಾಗಿ ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸಬೇಕಾಗಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಪುರಸಭೆ ಅಥವಾ ತಾಲೂಕಿನ ಸಂಬಂಧಪಟ್ಟ ಇಲಾಖೆಯು ಜೆಸಿಬಿ ನಿಲ್ದಾಣಕ್ಕೆ ಪ್ರತ್ಯೇಕ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರೈತರು ತಮ್ಮ ಜಮೀನುಗಳ ಕೆಲಸಕ್ಕೆಂದು ಜೆಸಿಬಿಗಳನ್ನು ಕರೆದೊಯ್ದ ವೇಳೆ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಜಾಗಗಳಲ್ಲಿ ಕೆಲಸ ಮಾಡಿಸಿ ಸಿಕ್ಕಿಬಿದ್ದಾಗ ವಾಹನಗಳ ಮೇಲೆ ಕೇಸ್ ದಾಖಲಾಗುತ್ತಿದೆ. ಹಾಗೆಯೇ, ಅಣ್ಣ-ತಮ್ಮಂದಿರ ಆಸ್ತಿ ವಿವಾದ ಅಥವಾ ಹಳೇ ಮನೆ ಉರುಳಿಸುವ ವಿಚಾರದಲ್ಲಿ ಕೌಟುಂಬಿಕ ಕಲಹಗಳಿದ್ದಾಗಲೂ ಜೆಸಿಬಿ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ನಾವು ಕೇವಲ ಕೂಲಿಗಾಗಿ ಕೆಲಸಕ್ಕೆ ಹೋಗುವುದರಿಂದ ಇಂತಹ ವಿವಾದಾತ್ಮಕ ಜಾಗಗಳಿಗೆ ಕರೆದೊಯ್ಯುವ ರೈತರು ಅಥವಾ ಮಾಲೀಕರ ಮೇಲೆಯೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಸಿಬಿ ಮಾಲೀಕರ ಸಂಘದ ರವೀಂದ್ರ, ಮಂಜೇಗೌಡ, ರವಿ, ದಯಾನಂದ ಮಹೇಶ್ ಮಲ್ಲೇಶ್ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net