ಭಕ್ತಿ, ಏಕತೆ ಮತ್ತು ಸಮಾಜಾಭಿವೃದ್ಧಿಯ ಸಂಕೇತ ಜಾತ್ರಾಮಹೋತ್ಸವ

ಭಕ್ತಿ, ಏಕತೆ ಮತ್ತು ಸಮಾಜಾಭಿವೃದ್ಧಿಯ ಸಂಕೇತ ಜಾತ್ರಾಮಹೋತ್ಸವ
ಭಕ್ತಿ, ಏಕತೆ ಮತ್ತು ಸಮಾಜಾಭಿವೃದ್ಧಿಯ ಸಂಕೇತ ಜಾತ್ರಾಮಹೋತ್ಸವ
Published on

ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು

ಸನಾತನ ಧರ್ಮವು ಭಾರತೀಯ ಸಂಸ್ಕೃತಿಯ ಆತ್ಮವಾಗಿದೆ. ಸಹಸ್ರಾರು ವರ್ಷಗಳಿಂದ ಸಮಾಜಕ್ಕೆ ಧರ್ಮ, ನೀತಿ, ಕರ್ಮ ಮತ್ತು ಅಧ್ಯಾತ್ಮದ ದಾರಿಯನ್ನು ತೋರಿಸುವಲ್ಲಿ ಸನಾತನ ಧರ್ಮ ಮಹತ್ತರ ಪಾತ್ರವಹಿಸಿದೆ. ಈ ಧರ್ಮದ ವೈಶಿಷ್ಟ್ಯವೆಂದರೆ ಅದು ಕೇವಲ ಅಧ್ಯಾತ್ಮ ಅಥವಾ ದೇವರು, ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗಿಲ್ಲ; ಅದು ವ್ಯಕ್ತಿಯ ಜೀವನಶೈಲಿಯನ್ನು, ಸಮಾಜದ ಮೌಲ್ಯಗಳನ್ನು ಮತ್ತು ಒಗ್ಗಟ್ಟಿನ ಸಂಸ್ಕೃತಿಯನ್ನು ರೂಪಿಸುತ್ತದೆ. ಈ ಮಹತ್ವದ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಮುಖ ಕೇಂದ್ರಗಳಾಗಿ ದೇವಾಲಯಗಳು, ಭಜನಾ ಮಂದಿರಗಳು ಮಹತ್ತರ ಪಾತ್ರವಹಿಸುತ್ತವೆ. ಹಾಗಾಗಿ ದೇವಾಲಯಗಳು, ಭಜನಾ ಮಂದಿರಗಳು ಕೇವಲ ಪೂಜೆಯ ಸ್ಥಳವಲ್ಲ; ಅವು ಸಮಾಜದ ಸಂಸ್ಕೃತಿ, ಸೇವೆ ಮತ್ತು ಏಕತೆಯ ಕೇಂದ್ರಗಳಾಗಿವೆ.
ದೇವಾಲಯಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ, ಜಾತ್ರಾಮಹೋತ್ಸವ ಮೊದಲಾದ ಉತ್ಸವಗಳು ಸನಾತನ ಧರ್ಮದ ಭಕ್ತಿ ಪರಂಪರೆಯನ್ನು ಜೀವಂತವಾಗಿಡುವುದರ ಜೊತೆಗೆ ಜನರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಉಂಟುಮಾಡುತ್ತವೆ. ಇಂತಹ ಉತ್ಸವಗಳು ಸಮಾಜದ ಒಗ್ಗಟ್ಟು ಮತ್ತು ಏಕತೆಯನ್ನು ಬಲಪಡಿಸುವ ಮಹತ್ತರ ವೇದಿಕೆಗಳಾಗಿವೆ. ಬ್ರಹ್ಮಕಲಶೋತ್ಸವ ಅಥವಾ ಜಾತ್ರಾಮಹೋತ್ಸವ ಎಂದರೆ ಅದು ಕೇವಲ ಧಾರ್ವಿುಕ ಕಾರ್ಯಕ್ರಮವಲ್ಲ; ಅದು ಭಕ್ತಿ, ಸೇವಾ ಮನೋಭಾವ, ಸಾಂಸ್ಕೃತಿಕ ಸಂಭ್ರಮ ಮತ್ತು ಸಮಾಜದ ಸಮಗ್ರ ಅಭಿವೃದ್ಧಿಯ ಸಂಕೇತವಾಗಿದೆ. ದೇವಸ್ಥಾನ ಅಥವಾ ಪೂಜಾಸ್ಥಳಗಳನ್ನು ವೈಭವೀಕರಿಸುವುದು ಈ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ.
ಸನಾತನ ಧರ್ಮದಲ್ಲಿ ದೇವಾಲಯಗಳು ಮಾನವನ ಆತ್ಮೋನ್ನತಿಯ ಕೇಂದ್ರಗಳೆಂದು ಪರಿಗಣಿಸಲ್ಪಟ್ಟಿವೆ. ದೇವಾಲಯಕ್ಕೆ ಹೋಗುವಾಗ ವ್ಯಕ್ತಿಯ ಮನಸ್ಸು ಶಾಂತವಾಗುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಜೀವನದ ಗುರಿ ಸ್ಪಷ್ಟವಾಗುತ್ತದೆ. ದೇವಾಲಯಗಳು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತವೆ. ಇಲ್ಲಿ ಜಾತಿ, ವರ್ಣ, ಸಂಪತ್ತು ಅಥವಾ ಸ್ಥಾನಮಾನ ಎಂಬ ಭೇದವಿಲ್ಲ; ಎಲ್ಲರೂ ಭಕ್ತರಾಗಿ ದೇವರ ಮುಂದೆ ನಿಲ್ಲುತ್ತಾರೆ. ಊರಿನ ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ಸೇರಿ ಕೆಲಸ ಮಾಡುತ್ತಾರೆ. 
ಯಾರಿಗೂ ವಿಶೇಷ ಸ್ಥಾನಮಾನ ಇಲ್ಲ; ಎಲ್ಲರೂ ಸೇವಕರೇ. ಈ ಸಮಾನತೆ ಮತ್ತು ಸಹಕಾರವೇ ಹಿಂದೂ ಸಮಾಜದ ಶಕ್ತಿ. ಈ ರೀತಿಯಲ್ಲಿ ದೇವಾಲಯಗಳು ಹಿಂದೂ ಸಮಾಜದ ಏಕತೆಯನ್ನು ಬಲಪಡಿಸುತ್ತವೆ. ವಿಶೇಷವಾಗಿ ಬ್ರಹ್ಮಕಲಶೋತ್ಸವ ಅಥವಾ ಜಾತ್ರಾಮಹೋತ್ಸವಗಳ ಸಮಯದಲ್ಲಿ ಈ ಏಕತೆ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ಊರಿನ ಪ್ರತಿಯೊಬ್ಬರೂ ತಮ್ಮನ್ನು ಈ ಉತ್ಸವದ ಭಾಗವೆಂದು ಭಾವಿಸಿ ಸೇವೆಯಲ್ಲಿ ತೊಡಗುತ್ತಾರೆ.
ಜಾತ್ರಾಮಹೋತ್ಸವದ ಯಶಸ್ಸಿಗೆ ಪ್ರಮುಖ ಕಾರಣ ಜನರ ಶ್ರಮದಾನ. ಊರಿನ ಜನರು ಸ್ವಯಂಪ್ರೇರಿತವಾಗಿ ಕೆಲಸಗಳನ್ನು ವಹಿಸಿಕೊಂಡು ದೇವಾಲಯದ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಚಪ್ಪರ ಹಾಕುವುದು, ಮಂಟಪ ನಿರ್ವಣ, ವಿದ್ಯುತ್ ವ್ಯವಸ್ಥೆ, ಸ್ವಚ್ಛತೆ, ಅತಿಥಿ ವ್ಯವಸ್ಥೆ, ಅನ್ನದಾನ ವ್ಯವಸ್ಥೆ, ನೀರು ಮತ್ತು ಸಾರಿಗೆ ವ್ಯವಸ್ಥೆ ಇವುಗಳೆಲ್ಲವೂ ಜನರ ಸಹಕಾರದಿಂದಲೇ ನಡೆಯುತ್ತವೆ. ಅನೇಕರು ತಮ್ಮ ಕೆಲಸಗಳನ್ನು ಬದಿಗಿಟ್ಟು ದಿನಗಳ ಕಾಲ ದೇವಾಲಯದ ಸೇವೆಗೆ ತಮ್ಮನ್ನು ಅರ್ಪಿಸುತ್ತಾರೆ. ಈ ಶ್ರಮದಾನವು ಕೇವಲ ಕೆಲಸವಲ್ಲ; ಅದು ಭಕ್ತಿಯ ಅಭಿವ್ಯಕ್ತಿ. ದೇವರ ಸೇವೆ ಮಾಡುವ ಮೂಲಕ ಅವರು ಧರ್ಮದ ಪಾಲನೆ ಮಾಡುತ್ತಿರುವ ಭಾವನೆ ಹೊಂದಿರುತ್ತಾರೆ.
ಜಾತ್ರಾಮಹೋತ್ಸವದ ಸಂದರ್ಭದಲ್ಲಿ ಕಾಣಿಸುವ ಒಂದು ಸುಂದರ ಸಂಪ್ರದಾಯವೆಂದರೆ ಹಸಿರುವಾಣಿ ಹೊರೆಕಾಣಿಕೆಗಳ ಸಮರ್ಪಣೆ ಮೆರವಣಿಗೆ. ಈ ಮೆರವಣಿಗೆಯಲ್ಲಿ ಭಕ್ತರು ತಮ್ಮ ಹೊಲಗಳಲ್ಲಿ ಬೆಳೆದ ಅಕ್ಕಿ, ಹಣ್ಣು, ತರಕಾರಿ ಮತ್ತು ಇತರ ಉತ್ಪನ್ನಗಳನ್ನು ದೇವರಿಗೆ ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಇದು ರೈತರ ಕೃತಜ್ಞತೆಯ ಸಂಕೇತ. ಪ್ರಕೃತಿಯ ಅನುಗ್ರಹದಿಂದ ದೊರೆತ ಬೆಳೆಗಾಗಿ ದೇವರಿಗೆ ಧನ್ಯವಾದ ಸಲ್ಲಿಸುವ ಸಂಪ್ರದಾಯ ಇದಾಗಿದೆ. ಮೆರವಣಿಗೆಯಲ್ಲಿ ಜನರು ಸಂಗೀತ, ಭಜನೆ ಮತ್ತು ನೃತ್ಯಗಳೊಂದಿಗೆ ಭಕ್ತಿಭಾವದಿಂದ ಸಾಗುತ್ತಾರೆ. ಈ ಮೆರವಣಿಗೆ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಪ್ರತಿಬಿಂಬಿಸುವ ಜೊತೆಗೆ ಸಮುದಾಯದ ಒಗ್ಗಟ್ಟಿನ ಸಂಕೇತವೂ ಆಗಿದೆ.
ಬ್ರಹ್ಮಕಲಶೋತ್ಸವ, ದೇವರ ಪುನಃಪ್ರತಿಷ್ಠೆ ಅಥವಾ ದೇವಾಲಯದ ಜೀಣೋದ್ಧಾರ ಪ್ರಕ್ರಿಯೆ ಎನ್ನುವುದು ದೇವಾಲಯಕ್ಕೆ, ದೇವರ ಬಿಂಬಕ್ಕೆ ಶಕ್ತಿ ತುಂಬುವ ಪ್ರಕ್ರಿಯೆ. ದೇವರ ಸಾನ್ನಿಧ್ಯಕ್ಕೆ ಹೊಸ ಚೈತನ್ಯವನ್ನು ಒದಗಿಸಿ ತನ್ಮೂಲಕ ಸಮಾಜಕ್ಕೂ ಹೊಸ ಭರವಸೆ, ಹೊಸ ದಿಕ್ಕು ತೋರುವ ಪಥವಾಗಿದೆ. ಈ ಮಹೋತ್ಸವವು ಭಕ್ತರಲ್ಲಿ ಭಕ್ತಿ, ಭಾವನೆ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಹೆಚ್ಚಿಸುತ್ತದೆ. ಜನರು ದಿನಗಳ ಕಾಲ ಉಪವಾಸ, ಪೂಜೆ, ಜಪ, ಹೋಮ-ಹವನಗಳಲ್ಲಿ ಭಾಗವಹಿಸಿ ದೇವರ ಅನುಗ್ರಹವನ್ನು ಪಡೆಯುತ್ತಾರೆ. ಇದರಿಂದ ಅವರ ಮನಸ್ಸು ಶುದ್ಧವಾಗುತ್ತದೆ ಮತ್ತು ಜೀವನದಲ್ಲಿ ಧರ್ಮದ ಮೌಲ್ಯಗಳು ಬಲವಾಗುತ್ತವೆ.
 ಇವು ಆಧ್ಯಾತ್ಮಿಕವಾಗಿ ಮನುಷ್ಯನ ಮೇಲೆ ಪ್ರಭಾವ ಬೀರುವುದರ ಜೊತೆಗೆ ಊರಿನ ಅಭಿವೃದ್ಧಿಗೂ ಮಹತ್ತರ ಕೊಡುಗೆ ನೀಡುತ್ತವೆ. ಜಾತ್ರೆಯ ಸಮಯದಲ್ಲಿ ರಸ್ತೆ, ನೀರು, ವಿದ್ಯುತ್, ಸ್ವಚ್ಛತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲಾಗುತ್ತದೆ. ಇದು ಹೆಚ್ಚಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂಢಿಯಲ್ಲಿದೆ.
ಅದೇ ರೀತಿ ವ್ಯಾಪಾರ ಚಟುವಟಿಕೆಗಳೂ ಹೆಚ್ಚಾಗುತ್ತವೆ. ಸಣ್ಣ ವ್ಯಾಪಾರಿಗಳು, ಹಸ್ತಕಲಾ ಕಲಾವಿದರು ಮತ್ತು ಸ್ಥಳೀಯ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಪಡೆಯುತ್ತಾರೆ. ಇದರಿಂದ ಸ್ಥಳೀಯ ಆರ್ಥಿಕತೆಯೂ ಅಭಿವೃದ್ಧಿಯಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತವೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಶಿಕ್ಷಣ ಜಾಗೃತಿ ಕಾರ್ಯಕ್ರಮಗಳು ಮೊದಲಾದವುಗಳಿಂದ ಸಮಾಜಕ್ಕೆ ಉಪಕಾರವಾಗುತ್ತದೆ.
ಜಾತ್ರಾಮಹೋತ್ಸವಗಳಲ್ಲಿ ಧಾರ್ವಿುಕ ವಿಧಿಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮಹತ್ವ ನೀಡಲಾಗುತ್ತದೆ. ಯಕ್ಷಗಾನ, ಭಜನೆ, ನಾಟಕ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಜನರಲ್ಲಿ ಸಂಸ್ಕೃತಿಯ ಅರಿವು ಮೂಡಿಸುತ್ತವೆ. ಈ ಕಾರ್ಯಕ್ರಮಗಳು ಯುವಜನತೆಗೆ ತಮ್ಮ ಪರಂಪರೆಯನ್ನು ಪರಿಚಯಿಸುತ್ತವೆ. ನಮ್ಮ ಪೂರ್ವಜರು ನೀಡಿದ ಸಂಸ್ಕೃತಿ ಮತ್ತು ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅತ್ಯುತ್ತಮ ವೇದಿಕೆ ಜಾತ್ರಾಮಹೋತ್ಸವಗಳೇ. ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಸಂತೋಷ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತವೆ. ಜೊತೆಗೆ ಊರಿನ ಪ್ರತಿಭಾವಂತರಿಗೆ ತಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶ ನೀಡುತ್ತವೆ. ಮುಂದಿನ ಪೀಳಿಗೆಗೆ ವಿಶೇಷ ಉತ್ಸಾಹವನ್ನು ನೀಡುತ್ತದೆ.
ಗ್ರಾಮಾಭಿವೃದ್ಧಿ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ. ಈ ಯೋಜನೆಯ ಕಾರ್ಯಕರ್ತರು ಜಾತ್ರಾಮಹೋತ್ಸವಗಳಲ್ಲಿ ಅತ್ಯಂತ ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತಾರೆ. ಅವರು ಜನರನ್ನು ಸಂಘಟಿಸಿ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸ್ವಚ್ಛತೆ, ಶಿಸ್ತು, ಸೇವಾ ವ್ಯವಸ್ಥೆ ಮತ್ತು ಸಮಾಜದ ಸಹಕಾರವನ್ನು ಹೆಚ್ಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಅನ್ನದಾನ, ಭಕ್ತರ ವ್ಯವಸ್ಥೆ, ಸಾರಿಗೆ ಮತ್ತು ಇತರ ಸೇವಾ ಕಾರ್ಯಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಅವರ ಸೇವಾ ಮನೋಭಾವವು ಇತರರಿಗೆ ಪ್ರೇರಣೆಯಾಗುತ್ತದೆ. ಹೀಗೆ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಕಾರ್ಯಕರ್ತರು ಜಾತ್ರೆಯ ಸಂದರ್ಭದಲ್ಲಿ ಮಾತ್ರವಲ್ಲ ವಿವಿಧ ಸಂದರ್ಭಗಳಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಶೌರ್ಯ ತಂಡ ಜನರಿಗೆ ಸಂಕಷ್ಟಗಳ ಸಮಯದಲ್ಲಿ ಸಹಾಯಹಸ್ತ ಚಾಚಲು ಸದಾ ಸನ್ನದ್ಧವಾಗಿರುತ್ತದೆ. 
ಒಟ್ಟಿನಲ್ಲಿ ನೋಡಿದರೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವಗಳು ಹಿಂದೂ ಸಮಾಜದ ಭಕ್ತಿ ಮತ್ತು ಪ್ರಗತಿಯ ಸಂಕೇತಗಳಾಗಿವೆ. ಈ ಉತ್ಸವಗಳು ಜನರಲ್ಲಿ ಧರ್ಮಭಾವವನ್ನು ಹೆಚ್ಚಿಸುತ್ತವೆ, ಸಮಾಜದಲ್ಲಿ ಒಗ್ಗಟ್ಟನ್ನು ನಿರ್ವಿುಸುತ್ತವೆ ಮತ್ತು ಊರಿನ ಅಭಿವೃದ್ಧಿಗೆ ಪ್ರೇರಣೆ ನೀಡುತ್ತವೆ. ದೇವಾಲಯಗಳು ನಮ್ಮ ಸಂಸ್ಕೃತಿಯ ಹೃದಯವಾಗಿದ್ದರೆ, ಜಾತ್ರಾಮಹೋತ್ಸವಗಳು ಅದರ ಜೀವಂತಿಕೆಯ ನಾಡಿಮಿಡಿತ. ಭಕ್ತಿ, ಸೇವೆ, ಸಂಸ್ಕೃತಿ ಮತ್ತು ಸಹಕಾರ- ಈ ನಾಲ್ಕು ಮೌಲ್ಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹೋತ್ಸವವೇ ಜಾತ್ರಾಮಹೋತ್ಸವ.
ಸನಾತನ ಧರ್ಮದ ಪರಂಪರೆಗಳು ನಮ್ಮ ಸಮಾಜವನ್ನು ಶಕ್ತಿಶಾಲಿಯಾಗಿಸಲು ನೆರವಾಗುತ್ತಿವೆ. ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವಗಳು ಈ ಪರಂಪರೆಯ ಅದ್ಭುತ ಉದಾಹರಣೆಗಳಾಗಿವೆ. ಇವು ಭಕ್ತಿಯನ್ನು ಗಟ್ಟಿಗೊಳಿಸುವುದರ ಜೊತೆಗೆ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ದಾರಿ ತೋರಿಸುತ್ತವೆ.
ಆದ್ದರಿಂದ ಪ್ರತಿಯೊಬ್ಬರೂ ಈ ಮಹೋತ್ಸವಗಳಲ್ಲಿ ಭಕ್ತಿಯಿಂದ ಭಾಗವಹಿಸಿ ಸೇವೆ ಸಲ್ಲಿಸುವುದು ಕರ್ತವ್ಯವಾಗಿದೆ. ದೇವರ ಅನುಗ್ರಹ, ಜನರ ಸಹಕಾರ ಮತ್ತು ಸೇವಾ ಮನೋಭಾವ ಒಂದಾಗಿ ಬಂದಾಗ ನಮ್ಮ ಸಮಾಜ ಇನ್ನಷ್ಟು ಸಮೃದ್ಧ ಮತ್ತು ಶಕ್ತಿಶಾಲಿಯಾಗುತ್ತದೆ. ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವಗಳು ಸದಾ ನಮ್ಮ ಸಂಸ್ಕೃತಿಯ ಬೆಳಕಾಗಿ, ಸಮಾಜದ ಏಕತೆಯ ಸಂಕೇತವಾಗಿ ಮತ್ತು ಊರಿನ ಸರ್ವತೋಮುಖ ಅಭಿವೃದ್ಧಿಯ ದಾರಿದೀಪವಾಗಿ ಮುಂದುವರಿಯಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net