ಐ.ಟಿ.ಎಫ್ ಮಹಿಳಾ ಟೆನಿಸ್ ಟೂರ್ನಿ-2026 ಲೋಗೋ ಬಿಡುಗಡೆ

Photo
Photo
Published on

ಪ್ರಮುಖ ಮುಖ್ಯಾಂಶಗಳು

  • ದಶಕದ ಬಳಿಕ ಕಲಬುರಗಿಯಲ್ಲಿ ಮಹಿಳಾ ಟೆನಿಸ್ ಕಲರವ ನಾಳೆಯಿಂದ
ಕಲಬುರಗಿ: ಕಲಬುರಗಿ ನೆಕ್ಸ್ಟ್ ಫೌಂಡೇಷನ್ ಪ್ರಾಯೋಜಕತ್ವದ 30,000 ಯು.ಎಸ್. ಡಾಲರ್ ಮೊತ್ತದ ಕಲಬುರಗಿ ಐ.ಟಿ.ಎಫ್ ಮಹಿಳಾ ಟೆನಿಸ್ ಟೂರ್ನಿ-2026 ಇದೇ ಮಾರ್ಚ್ 1 ರಿಂದ 8ರ ವರೆಗೆ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಶನಿವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಟೆನಿಸ್ ಟೂರ್ನಿಯ ಲೋಗೋ ಅನಾವರಣ ಮಾಡಿದರು.
ಕಲಬುರಗಿ ತನ್ನ ಇತಿಹಾಸದಲ್ಲೇ ಅತಿದೊಡ್ಡ ಅಂತರರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿ ಆತಿಥ್ಯ ವಹಿಸಲು ದಶಕದ ಬಳಿಕ ಸಜ್ಜಾಗಿದೆ. ಕಲಬುರಗಿ ಈ ಹಿಂದೆ 2012 ಮತ್ತು 2015ರಲ್ಲಿ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿ ಜರುಗಿದ್ದು, ಬಹುಮಾನದ ಮೊತ್ತ 10,000 ಯು.ಎಸ್. ಡಾಲರ್‌ದಾಗಿತ್ತು. ಇದೀಗ 30,000 ಯು.ಎಸ್. ಡಾಲರ್ ಮೊತ್ತದ ಈ ಟೂರ್ನಿ ಐಟಿಎಫ್ ಮಹಿಳಾ ವರ್ಲ್ಡ್ ಟೆನಿಸ್ ಟೂರ್ನಿಯ ಭಾಗವಾಗಿದೆ. ಇದರಿಂದ ಪ್ರದೇಶದ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಹೊಸ ಹುರುಪು ಸಿಗಲಿದೆ.
ಮಾಚ್ 3 ರಿಂದ ಮುಖ್ಯ ಪಂದ್ಯಗಳು:
ಟೂರ್ನಿಯಲ್ಲಿ 32 ಆಟಗಾರ್ತಿಯರ ಸಿಂಗಲ್ಸ್ ಮುಖ್ಯ ಡ್ರಾ ಇರಲಿದೆ. ಜೊತೆಗೆ 16 ಜೋಡಿಗಳ ಡಬಲ್ಸ್ ಡ್ರಾ ಕೂಡ ಆಯೋಜಿಸಲಾಗಿದೆ. ಅದಕ್ಕೂ ಮೊದಲು ಮಾರ್ಚ್ 1 ಮತ್ತು 2 ರಂದು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಮಾರ್ಚ್ 3 ರಿಂದ ಮುಖ್ಯ ಡ್ರಾ ಪಂದ್ಯಗಳು ಆರಂಭವಾಗಲಿವೆ. ಒಟ್ಟಾರೆ ಮಾರ್ಚ್ 1 ರಿಂದ 8ರವರೆಗೆ ಕಲಬುರಗಿ ನಗರವು ಅಂತರಾಷ್ಟ್ರಿಯ ಆಟಗಾರರ ಟೆನಿಸ್ ಆಟಕ್ಕೆ ಸಾಕ್ಷಿಯಾಗಲಿದೆ.
ಟೂರ್ನಿಯಲ್ಲಿ 11ಕ್ಕೂ ಹೆಚ್ಚಿನ ವಿದೇಶಿಯರು ಭಾಗಿ:
ಟೂರ್ನಿಯಲ್ಲಿ 11ಕ್ಕೂ ಹೆಚ್ಚು ದೇಶಗಳ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಭಾರತದ ಪ್ರಮುಖ ಹಾಗೂ ಉದಯೋನ್ಮುಖ ಪ್ರತಿಭೆಗಳಾದ ವೈಷ್ಣವಿ ಆಡ್ಕರ್, ಶ್ರೀವಳ್ಳಿ ರಶ್ಮಿಕಾ ಭಮಿಡಿಪಾಟಿ, ಅಂಕಿತಾ ರೈನಾ, ಜೀಲ್ ದೇಸಾಯಿ, ಆಕಾಂಕ್ಷಾ ದಿಲೀಪ್ ನಿಟ್ಟೂರು, ಶ್ರುತಿ ಅಹ್ಲಾವತ್ ಮತ್ತು ಸೋನಲ್ ಪಾಟೀಲ್ ಸೇರಿದಂತೆ ಬಲಿಷ್ಠ ಭಾರತೀಯ ಬಳಗವೂ ಕಣಕ್ಕಿಳಿಯಲಿದೆ. ನಾಲ್ವರು ಭಾರತೀಯ ಆಟಗಾರ್ತಿಯರಾದ ಜೆನ್ನಿಫರ್ ಲುಇಖಾಮ್, ಸೋಹಾ ಸಾದಿಕ್, ಸಾಮಾ ಚಿವಿಕಾ ರೆಡ್ಡಿ ಮತ್ತು ಅಮೋದಿನಿ ನಾಯಕ್ ಅವರಿಗೆ ಮುಖ್ಯ ಡ್ರಾಕ್ಕೆ ವೈಲ್ಡ್ ಕಾರ್ಡ್ ನೀಡಲಾಗಿದೆ. ಇನ್ನೂ ಐವರು ಭಾರತೀಯರು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಟೂರ್ನಿಯ ಅವಧಿಯೆಲ್ಲಾ ದೇಶೀಯ ಪ್ರತಿನಿಧಿತ್ವ ಬಲವಾಗಿ ಕಾಣಿಸಿಕೊಳ್ಳಲಿದೆ.
ಕ್ರೀಡಾ ನಗರಿಗೆ ಬೂಸ್ಟ್:
ಕಲಬುರಗಿಯನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ನಗರಿಯನ್ನಾಗಿ ಮಾಡಲು ಪಣ ತೊಟ್ಟಿದ್ದು, ಅದರಂತೆ ಈಗಾಗಲೆ ರಾಷ್ಟ್ರೀಯ ನಾಟಕೋತ್ಸವ ಜರುಗಿದೆ. ಮಾರ್ಚ್ 1 ರಿಂದ ಟೆನಿಸ್ ಕಲರವ ಹೆಚ್ಚಲಿದೆ. ಇಂತಹ ಅಂತರಾಷ್ಟ್ರೀಯ ಕ್ರೀಡೆಗಳ ಆಯೋಜನೆಯಿಂದ ಸ್ಥಳೀಯ ಪ್ರತಿಭೆಗಳಿಗೆ ಬೂಸ್ಟ್ ಸಿಗಲಿದೆ. ಇದೆಲ್ಲವು ಕಲಬುರಗಿ ನೆಕ್ಷ್ಟ್ ಫೌಂಡೇಷನ್ ಮೂಲಕ ಸಾಧ್ಯವಾಗುತ್ತಿದೆ ಎಂದು ವರ್ಚುವಲ್ ಮೂಲಕ ಲೋಗೋ ಅನವಾರಣದಲ್ಲಿ ಭಾಗವಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪರಿಯಾಂಕ್ ಖರ್ಗೆ ಹೇಳಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ, ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್. ಸುಮಿತ್ ಪಾಟೀಲ, ಡಿ.ಐ.ಸಿ. ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net