ಕನ್ನಡಿಗರ ಸಹನೆ ಕೆಣಕುವುದು ತರವಲ್ಲ

ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುವ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಚನ್ನಪಟ್ಟಣದಲ್ಲಿ ಪ್ರತಿಭಟಿಸಲಾಯಿತು. ವೇದಿಕೆ ಅಧ್ಯಕ್ಷ ರಮೇಶ್ ಗೌಡ, ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ಪ್ರಗತಿಪರ ರೈತ ರಾಂಪುರ ಲೋಕೇಶ್, ವಕೀಲ ದಶವಾರ ಶಿವರಾಜೇಗೌಡ ಇತರರು ಇದ್ದರು.
ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುವ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಚನ್ನಪಟ್ಟಣದಲ್ಲಿ ಪ್ರತಿಭಟಿಸಲಾಯಿತು. ವೇದಿಕೆ ಅಧ್ಯಕ್ಷ ರಮೇಶ್ ಗೌಡ, ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ಪ್ರಗತಿಪರ ರೈತ ರಾಂಪುರ ಲೋಕೇಶ್, ವಕೀಲ ದಶವಾರ ಶಿವರಾಜೇಗೌಡ ಇತರರು ಇದ್ದರು.
Published on
ಚನ್ನಪಟ್ಟಣ :ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುವ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಬುಧವಾರ ನಗರದಲ್ಲಿ ಪ್ರತಿಭಟಿಸಲಾಯಿತು.
ವೇದಿಕೆ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಮಳೆ ಇಲ್ಲದ ಬರದ ನಡುವೆ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶ ಖಂಡನೀಯ. ಕನ್ನಡಿಗರ ಸಹನೆ ಕೆಣಕುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರಡಿಸುವ ಮೂಲಕ, ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯದ ಜನತೆ ಮೇಲೆ ಗದಾಪ್ರಹಾರ ಮಾಡಿದೆ. ರಾಜ್ಯ ಈ ಹಿಂದೆ ಎಂದೂ ಕಾಣದಷ್ಟು ಬರ ಎದುರಿಸುತ್ತಿದೆ.
ಇಂತಹ ತೀವ್ರ ಬರಗಾಲದ ಸಂಕಷ್ಟದ ಪರಿಸ್ಥಿತಿ ನಡುವೆಯೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶ ಖಂಡನೀಯ. ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲ ದಶವಾರ ಶಿವರಾಜೇಗೌಡ ಮಾತನಾಡಿ, ಕಳೆದ 1 ತಿಂಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಮಂಡ್ಯ ಜಿಲ್ಲೆ ರೈತರು ವಿಭಿನ್ನ ಚಳವಳಿ ಮಾಡುತ್ತಾ ಬಂದಿದ್ದಾರೆ. ಸರ್ಕಾರ ಈ ವೇಳೆ ಎಚ್ಚೆತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗೆ ರಾಜ್ಯದ ಜಲಾಶಯದ ನೀರಿನ ವಾಸ್ತವಾಂಶ ತಿಳಿಸಬೇಕಿತ್ತು. ನಮ್ಮ ನೀರಿಗಾಗಿ ನಾವುಗಳೇ ಹೋರಾಡಬೇಕಾದ ಪರಿಸ್ಥಿತಿ ಸರಿಯಲ್ಲ, ಕಾವೇರಿ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಲು ಮುಂದಾಗದಿದ್ದರೆ ನಮ್ಮ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದರು.
ನಿವೃತ್ತ ಪ್ರಾಂಶುಪಾಲ ಸಿ. ಚನ್ನಪ್ಪ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿನ ನಾಲ್ಕು ಅಣೆಕಟ್ಟೆಗಳಲ್ಲಿ ನೀರಿದ್ದರೆ ತಮಿಳುನಾಡಿಗೆ ಜಲ ಬಿಡಬಹುದು. ಆದರೆ, ನಮ್ಮ ಪರಿಸ್ಥಿತಿ ಟ್ಯಾಂಕ್‌ನಲ್ಲಿ ನೀರಿಲ್ಲದಿದ್ದರೂ ನಲ್ಲಿಯಲ್ಲಿ ನೀರು ಹರಿಸಿ ಎನ್ನುವಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಿತಿ ಆದೇಶಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಡಬಾರದು.
ರಾಜ್ಯದ ಜನತೆ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತದೆ ಎಂದರು.ಪ್ರಗತಿಪರ ರೈತ ರಾಂಪುರ ಲೋಕೇಶ್ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಕಳೆದ 50 ವರ್ಷಗಳಿಂದ ರಾಜ್ಯದ ಮೇಲೆ ಮಲತಾಯಿ ಧೋರಣೆ ಮಾಡುತ್ತಾ ಬಂದಿದೆ. ನೀರಿಲ್ಲದ ವೇಳೆ ನೀರು ಬಿಡಲು ಸಾಧ್ಯವಿಲ್ಲ. ಇದರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮನವರಿಕೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ನೀಲಸಂದ್ರ ಸಿದ್ದರಾಮು, ಮುದಗೆರೆ ಪಿಎಸಿಎಸ್ ನಿರ್ದೇಶಕ ಜಯಕುಮಾರ್(ಜೆಕೆ), ಉಪನ್ಯಾಸಕ ಜಾಕೀರ್, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ನಿವೃತ್ತ ಉಪನ್ಯಾಸಕ ಚನ್ನವೀರೇಗೌಡ, ನಗರಸಭಾ ಸದಸ್ಯ ಮತಿನ್, ಮುಖಂಡ ರಾಜೇಂದ್ರ(ಪಾಲೀಸ್‌ರಾಜು), ಪುನೀತ್, ಅಜಯ್, ಬೀರೇಶ್, ಬಾವಿಪ ವಸಂತ್‌ಕುಮಾರ್, ಮಂಗಳವಾರಪೇಟೆ ಕೃಷ್ಣಪ್ರಸಾದ್, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಮಂಗಳವಾರಪೇಟೆ ಸತೀಶ್, ಎಲೇಕೇರಿ ಈಶ್ವರ್ ಇದ್ದರು.
ಕಾವೇರಿ ನೀರಿಗೆ ಖ್ಯಾತೆ ತೆಗೆದಿರುವ ತಮಿಳುನಾಡಿನ ತಮಿಳು ಸಿನಿಮಾ ರಾಜ್ಯದಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಬಾರದು ಎಂದು ವೇದಿಕೆ ಕಾರ್ಯಕರ್ತರು, ನಗರದ ಶಿವಾನಂದ ಚಿತ್ರಮಂದಿರದ ಮುಂದೆ ಹಾಕಿಸಿದ್ದ ತಮಿಳುನಾಡು ಸಿಎಂ ವಿಜಯ್ ಅವರ ನಟನೆಯ ಸಿನಿಮಾ ಬ್ಯಾನರ್ ತೆರವು ಮಾಡಲು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಎಲ್ಲ ಭಾಷೆ ಜನರಿದ್ದಾರೆ. ತಮಿಳುನಾಡು ಸಿಎಂ ನಟಿಸಿರುವ ಸಿನಿಮಾ ತೆರವು ಮಾಡಲು ಚಿತ್ರಮಂದಿರದ ಮಾಲೀಕರು ಕ್ರಮಕ್ಕೆ ಮುಂದಾಗಬೇಕು, ಬ್ಯಾನರ್ ತೆರವು ಮಾಡಬೇಕು ಎಂದರು. ಈ ವೇಳೆ ಪೊಲೀಸ್ ಸಿಬ್ಬಂದಿ ಸಹ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಚಿತ್ರಮಂದಿರದ ಮುಂದೆ ಹಾಕಿದ್ದ ಬ್ಯಾನರ್‌ಗಳನ್ನು ತೆರವು ಮಾಡಿಸಿದರು.
29 ಸಿಪಿಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net