ಷೇರುದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅಗತ್ಯ

 ಹೆತ್ತೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನ್ಯಾಯಮೂರ್ತಿ ಸಂದೇಶ್ ಉದ್ಘಾಟಿಸಿದರು. ಎಂ.ಜೆ.ದಿನೇಶ್, ಡಾ.ಕೂರ್ಮಾರಾವ್, ಎಚ್.ಟಿ.ಸುಧಾಕರ್, ಡಾ.ನವೀನ್, ಮಹೇಂದ್ರ, ನಾಗಭೂಷಣ, ಸಚಿನ್ ಇದ್ದರು.
ಹೆತ್ತೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನ್ಯಾಯಮೂರ್ತಿ ಸಂದೇಶ್ ಉದ್ಘಾಟಿಸಿದರು. ಎಂ.ಜೆ.ದಿನೇಶ್, ಡಾ.ಕೂರ್ಮಾರಾವ್, ಎಚ್.ಟಿ.ಸುಧಾಕರ್, ಡಾ.ನವೀನ್, ಮಹೇಂದ್ರ, ನಾಗಭೂಷಣ, ಸಚಿನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಸಿ. ಸಂದೇಶ್
  • ಹೆತ್ತೂರು ಹೋಬಳಿಯ ಖಾಸಗಿ ರೆಸಾರ್ಟ್‌
ಸಕಲೇಶಪುರ: ಹೆತ್ತೂರು ಹೆಸರಿನ ಕಾಫಿ ಬ್ರಾೃಂಡ್ ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಸಿ. ಸಂದೇಶ್ ಆಶಯ ವ್ಯಕ್ತಪಡಿಸಿದರು.
ತಾಲೂಕಿನ ಹೆತ್ತೂರು ಹೋಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಮಂಗಳವಾರ ಹೆತ್ತೂರು ವೆಸ್ಟ್ರನ್ ಘಾಟ್ ಫಾರ್ಮರ್ಸ್ ಪ್ರೊಡ್ಯೂಸರ್ ಸಂಸ್ಥೆ ಉದ್ಘಾಟಿಸಿ ಮಾತನಾಡಿ, ಮಗು ಹುಟ್ಟಿದ ನಂತರ ಅದರ ಬೆಳವಣಿಗೆಯನ್ನು ಹೇಗೆ ಕಾಳಜಿಯಿಂದ ಗಮನಿಸುತ್ತೇವೋ ಅದೇ ರೀತಿಯಲ್ಲಿ ಸಂಸ್ಥೆಯ ಬೆಳವಣಿಗೆಯ ಮೇಲೂ ಎಲ್ಲರೂ ಜವಾಬ್ದಾರಿಯುಖ್ಖಎಐ ಗಮನ ಹರಿಸಬೇಕು. ಶ್ರಮ, ನಂಬಿಕೆ, ಸಾಮರಸ್ಯ ಹಾಗೂ ಪಾರದರ್ಶಕತೆ ಸಂಸ್ಥೆಯ ಯಶಸ್ಸಿನ ಮೂಲ ಆಧಾರ ಎಂದು ಹೇಳಿದರು.
ಕಂಪನಿ ಸ್ಥಾಪನೆಯಾದ ಬಳಿಕ ಷೇರುದಾರರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಸಮನ್ವಯತೆ ಹೊಂದಬೇಕು. ಹಣಕಾಸು ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ನಿರ್ದೇಶಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆಯಿಂದ ಸಂಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದರು.
ರೈತರು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಬೇಕೆಂಬುದು ಕಂಪನಿ ಸ್ಥಾಪನೆಯ ಪ್ರಮುಖ ಉದ್ದೇಶ. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗುತ್ತದೆ. ರೋಸ್ಟಿಂಗ್ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಸರ್ಕಾರದ ಸಬ್ಸಿಡಿ ಸಿಗುವ ಅವಕಾಶಗಳಿವೆ. ನಿಮ್ಮ ಸಂಸ್ಥೆಗೆ ನಾನು ಸದಾ ಸಲಹೆಗಾರನಾಗಿ ಇರುತ್ತೇನೆ ಎಂದು ಹೇಳಿದರು.
ಕಾಫಿ ಸೇವನೆಯಿಂದಾಗುವ ಉಪಯೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕಾಫಿ ಬ್ರಾೃಂಡ್ ಅನ್ನು ನಾವೇ ಹೆಚ್ಚು ಉಪಯೋಗಿಸಬೇಕು. ನಿರ್ದೇಶಕರು ಸಮಯಪ್ರಜ್ಞೆ ಹಾಗೂ ಶಿಸ್ತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಂಸ್ಥೆಯ ಸದೃಢ ಬೆಳವಣಿಗೆಗಾಗಿ 2 ಲಕ್ಷ ರೂ. ಧನಸಹಾಯ ಘೋಷಿಸಿದ ನ್ಯಾಯಮೂರ್ತಿಗಳು, ಈ ನೆರವು ಸಂಸ್ಥೆಯ ಸಬಲೀಕರಣ ಹಾಗೂ ರೈತಪರ ಚಟುವಟಿಕೆಗಳಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಕಾಫಿ ಬೆಳೆಗಾರರು ಕೇವಲ ಒಂದು ಬೆಳೆಗೆ ಸೀಮಿತವಾಗದೆ ಪರ್ಯಾಯ ಬೆಳೆಗಳತ್ತಲೂ ಗಮನ ಹರಿಸಬೇಕು. ರೈತ ಉತ್ಪಾದಕ ಸಂಸ್ಥೆಗಳು ರೈತರ ಆರ್ಥಿಕ ಬಲವರ್ಧನೆಗೆ ಅತ್ಯಂತ ಅಗತ್ಯ. ರೈತರು ಹೊಸ ಚಿಂತನೆ ಅಳವಡಿಸಿಕೊಂಡು ಕಾರ್ಪೊರೇಟ್ ಮಾದರಿಯಲ್ಲಿ ಬೆಳೆಯಬೇಕು. ಏಲಕ್ಕಿಗೆ ಕಟ್ಟೆ ರೋಗ ಬಂದು ಇಳುವರಿ ಕುಸಿದಿರುವುದು ಬೇಸರದ ಸಂಗತಿ. ಕಾಫಿ ದರದಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು. ಕಾಫಿಯನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕಾಫಿ ಮಂಡಳಿಯ ಸಿಇಒ ಡಾ.ಕೂರ್ಮಾರಾವ್ ಮಾತನಾಡಿ, ವೆಸ್ಟ್ರನ್ ಘಾಟ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಪಶ್ಚಿಮ ಘಟ್ಟ ಪ್ರದೇಶದ ರೈತರ ಅಭಿವೃದ್ಧಿಗಾಗಿ ಸ್ಥಾಪನೆಯಾದ ರೈತ ಉತ್ಪಾದಕ ಸಂಸ್ಥೆಯಾಗಿದೆ. ರೈತರಿಗೆ ಉತ್ತಮ ಮಾರುಕಟ್ಟೆ, ನ್ಯಾಯಯುತ ಬೆಲೆ, ತಾಂತ್ರಿಕ ಮಾರ್ಗದರ್ಶನ ಹಾಗೂ ಆರ್ಥಿಕ ಬಲ ನೀಡುವ ಉದ್ದೇಶದಿಂದ ಸಂಸ್ಥೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಗೆ ಉತ್ತಮ ಬೆಲೆ ಸಿಗುವಂತೆ ಕಾಫಿ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು. ರೈತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ಪಾದನೆ, ಮಾರುಕಟ್ಟೆ ಹಾಗೂ ರಫ್ತು ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಸಾಧ್ಯ. ಹೆತ್ತೂರಿನಲ್ಲಿ ಉತ್ತಮ ನಾಯಕತ್ವ ಇರುವುದರಿಂದ ಈ ಸಂಸ್ಥೆ ಯಶಸ್ವಿಯಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಚ್.ಟಿ.ಸುಧಾಕರ್ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಕಾಫಿ ಮಂಡಳಿಯ ಸಲಹೆಗಾರ ಡಾ. ನವೀನ್, ಹಟ್ಟಿ ಕಾಫಿ ಸಂಸ್ಥಾಪಕ ಮಹೇಂದ್ರ, ಸಂಸ್ಥೆಯ ನಿರ್ದೇಶಕ ನಾಗಭೂಷಣ, ಎಚ್‌ಡಿಪಿಎ ಉಪಾಧ್ಯಕ್ಷ ಸಚಿನ್ ಉಪಸ್ಥಿತರಿದ್ದರು.
27 ಎಸ್‌ಕೆಪಿಪಿ 3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net