ಆಲಮೇಲ ಪಟ್ಟಣದ ಪೊಲೀಸ್ ಠಾಣೆಯ ವತಿಯಿಂದ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಪಿಎಸ್ ಐ ಅರವಿಂದ ಅಂಗಡಿ ನೇತೃತ್ವದಲ್ಲಿ ವಿವಿಧ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ಮುಜಮಿಲ್ ಜುಮನಾಳ, ಅಯುಬ ಬಾಗವಾನ, ಅಭಿಷೇಕ ಕೆಳಗಿನಮನಿ ಮತ್ತಿತರರಿದ್ದರು.
ಆಲಮೇಲ: ಯುವ ಸಮುದಾಯವನ್ನು ಮಾದಕ ಲೋಕದಿಂದ ರಕ್ಷಿಸಿ, ವ್ಯಸನ ಮುಕ್ತ ಸಮಾಜದ ನಿರ್ಮಾಣದ ಜತೆಗೆ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಪಿಎಸ್ ಐ ಅರವಿಂದ ಅಂಗಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಪೊಲೀಸ್, ಆಲಮೇಲ ಪೊಲೀಸ್ ಠಾಣೆಯ ವತಿಯಿಂದ ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ವಿವಿಧ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕಲು ಕಾನೂನಿನೊಂದಿಗೆ ಸಹಕರಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಜನತೆ ಮುಂದಾಗಬೇಕಾಗಿದೆ ಎಂದರು.
ವಿವಿಧ ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವ್ಯಸನ ಮುಕ್ತ ಸಮಾಜದ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಸರ್ಕಾರಿ ಮೌಲಾನಾ ಅಜಾದ್ ಶಾಲೆಯ ಶಿಕ್ಷಕ ಮುಜಮಿಲ್ ಜುಮನಾಳ, ಅಯುಬ ಬಾಗವಾನ, ಅಭಿಷೇಕ ಕೆಳಗಿನಮನಿ, ದಾನೇಶ್ವರಿ ಬಂಟನೂರ, ಅಂಜುಮ ಮೋಮಿನ, ವಿನಾಯಕ ಮಠಪತಿ, ಪ್ರೊಪೆಷನರಿ ಪಿಎಸ್ ಐ ಅನೀಲ ಮುನವಾಲಿ, ಎಎಸ್.ಐ. ತಾಜೋದ್ದಿನ್ ಶೇಖ, ಸಿಬ್ಬಂದಿಗಳಾದ ರೋಹಿತ ಗೊಡೇಕರ, ಸಿದ್ಧರಾಯ ಪಾಟೀಲ ಇದ್ದರು.