ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಅತ್ಯಗತ್ಯ

ಚನ್ನರಾಯಪಟ್ಟಣದ ಬೆಲಸಿಂದ ಶ್ರೀವನದಲ್ಲಿ ಅರಣ್ಯ ಇಲಾಖೆಯ ಚನ್ನರಾಯಪಟ್ಟಣ ಪ್ರಾದೇಶಿಕ ವಲಯದ ವತಿಯಿಂದ  ತಾಲೂಕಿನ ಬಾಗೂರು ಪ್ರೌಢಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ವನದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಮಂಜುನಾಥ್, ಕಲಂದರ್, ಎನ್.ಶಂಕರ್, ಆರ್.ನಾಗರಾಜಯ್ಯ,  ಕೆ.ಆರ್.ಶಿವಕುಮಾರ್, ವಿಜಯ ದೇವೇಂದ್ರ ಇತರರು ಇದ್ದರು.
ಚನ್ನರಾಯಪಟ್ಟಣದ ಬೆಲಸಿಂದ ಶ್ರೀವನದಲ್ಲಿ ಅರಣ್ಯ ಇಲಾಖೆಯ ಚನ್ನರಾಯಪಟ್ಟಣ ಪ್ರಾದೇಶಿಕ ವಲಯದ ವತಿಯಿಂದ ತಾಲೂಕಿನ ಬಾಗೂರು ಪ್ರೌಢಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ವನದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಮಂಜುನಾಥ್, ಕಲಂದರ್, ಎನ್.ಶಂಕರ್, ಆರ್.ನಾಗರಾಜಯ್ಯ, ಕೆ.ಆರ್.ಶಿವಕುಮಾರ್, ವಿಜಯ ದೇವೇಂದ್ರ ಇತರರು ಇದ್ದರು.
Published on
ಚನ್ನರಾಯಪಟ್ಟಣ: ಮಾನವನ ಸ್ವಾರ್ಥಕ್ಕಾಗಿ ಅರಣ್ಯ ನಾಶವಾಗುತ್ತಿರುವುದನ್ನು ತಪ್ಪಿಸಲು ಮತ್ತು ಮಕ್ಕಳನ್ನು ಭವಿಷ್ಯದಲ್ಲಿ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸಲು ಅರಣ್ಯ ಇಲಾಖೆಯ ‘ಚಿಣ್ಣರ ವನದರ್ಶನ’ ಕಾರ್ಯಕ್ರಮ ಸಹಕಾರಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಬೆಲಸಿಂದ ಶ್ರೀವನದಲ್ಲಿ ಅರಣ್ಯ ಇಲಾಖೆಯ ಚನ್ನರಾಯಪಟ್ಟಣ ಪ್ರಾದೇಶಿಕ ವಲಯದ ವತಿಯಿಂದ ತಾಲೂಕಿನ ಬಾಗೂರು ಪ್ರೌಢಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ವನದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರಣ್ಯ, ವನ್ಯಜೀವಿ ಸಂಕುಲ ಸಂರಕ್ಷಣೆ, ಮಾಲಿನ್ಯ ಮುಕ್ತ ಪರಿಸರ, ಭವಿಷ್ಯಕ್ಕೆ ಅರಣ್ಯಗಳ ಉಳಿವು ಅತ್ಯವಶ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸುವುದು, ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರಸ್ನೇಹಿ ನಾಗರಿಕರನ್ನಾಗಿ ರೂಪಿಸುವ ದೃಷ್ಟಿಯಿಂದ ಶಾಲಾ ಮಕ್ಕಳಿಗೆ ಅರಿವು ಮೂಡಿಸುವುದು ಯೋಜನೆಯ ಉದ್ದೇಶವಾಗಿದೆ. ಸಸ್ಯ ಸಂಕುಲಗಳು ಮನುಷ್ಯನ ಅಸ್ತಿತ್ವ ಮತ್ತು ಜೀವ ಜಲದ ಮೂಲಗಳೇ ಹೊರತು ಆದಾಯದ ಮೂಲವಲ್ಲ ಎಂಬ ಅರಿವು ಮೂಡಲು ಇದನ್ನು ರೂಪಿಸಲಾಗಿದೆ ಎಂದರು.

ಮಕ್ಕಳಲ್ಲಿ ಪ್ರಕೃತಿ ಸಂರಕ್ಷಣೆಯ ಪ್ರಜ್ಞೆ ಬೆಳೆಸುವುದು ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯಕವಾಗಿದೆ. ಪ್ರಕೃತಿ ಬಹಳಷ್ಟು ಮಲೀನಗೊಂಡಿದೆ. ಈ ಮಲೀನತೆ ಕಡಿಮೆ ಆಗಬೇಕಾದರೆ ಅರಣ್ಯ ಸಂಪತ್ತು ಹೇರಳವಾಗಿರಬೇಕು. ಇಂತಹ ಅರಣ್ಯ ಸಂಪತ್ತು ಬೆಳೆಸುವ ಮತ್ತು ಉಳಿಸುವ ಮನೋಭಾವ ಮಕ್ಕಳಲ್ಲಿ ಮೂಡಿಬರಬೇಕು. ಈ ನಿಟ್ಟಿನಲ್ಲಿ ಮಕ್ಕಳು ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಲಂದರ್ ಮಾತನಾಡಿ, ಅನೇಕ ಸಂದರ್ಭಗಳಲ್ಲಿ ಅರಣ್ಯ ರಕ್ಷಣೆ , ವನ್ಯ ಜೀವಿಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಮುಂದಿನ ಪೀಳಿಗೆಯವರಿಗೆ ತಿಳಿಸಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಈ ಕುರಿತು ವಾಸ್ತವ ಚಿತ್ರಣವನ್ನು ತೆರೆದಿಟ್ಟು ಮಕ್ಕಳಲ್ಲಿ ಎಳವೆಯಿಂದಲೇ ಪ್ರಕೃತಿ ಪ್ರೇಮ ಮೂಡಿಸಲು ಪ್ರಯತ್ನಿಸಬೇಕಿದೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಿನ ವಿವಿಧ ಭಾಗಗಳ ಪ್ರವಾಸಿ ಉದ್ಯಾವನಗಳು, ಸಸ್ಯ ಸಂರಕ್ಷಣಾ ಕೇಂದ್ರಗಳು ಹಾಗೂ ಕಾಡಿನ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ದು ಅಲ್ಲಿನ ಗಿಡ, ಮರಗಳ, ಸಸ್ಯ ಪ್ರಭೇದಗಳ ವೈಜ್ಞಾನಿಕ ಹೆಸರು, ಉಪಯೋಗ ಹಾಗೂ ಕಾಡಿನ ಸಂರಕ್ಷಣೆ, ವನ್ಯ ಪ್ರಾಣಿಗಳ ಸಂರಕ್ಷಣೆಯ ಕುರಿತು ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡುವುದರಿಂದ ಮಕ್ಕಳಲ್ಲಿ ಪ್ರಕೃತಿಯ ಅರಿವು ಮೂಡಿಸುವಲ್ಲಿ ಸಹಾಯಕವಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧಗಳ ಮಹತ್ವವನ್ನು ಹೇಳಿಕೊಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬ್ಯಾಗ್, ಅರಣ್ಯ ಇಲಾಖೆಯ ಮಾಹಿತಿಯ ಕಿರುಹೊತ್ತಿಗೆ ನೀಡಲಾಯಿತು. ಒಟ್ಟು 50 ಮಕ್ಕಳು ವನದರ್ಶನ ಪ್ರವಾಸ ಕೈಗೊಂಡರು. ಮಕ್ಕಳು ಹಾಸನ ತಾಲೂಕಿನ ಗೆಂಡೆಕಟ್ಟೆ, ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ವೀಕ್ಷಿಸುವುದರೊಂದಿಗೆ ತಮ್ಮ ಪ್ರವಾಸ ಪ್ರಾರಂಭಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್.ಶಂಕರ್, ಆರ್.ನಾಗರಾಜಯ್ಯ, ಗಸ್ತು ಅರಣ್ಯ ಪಾಲಕರಾದ ಕೆ.ಆರ್.ಶಿವಕುಮಾರ್, ವಿಜಯ ದೇವೇಂದ್ರ, ಎಚ್.ಕೆ.ಲೋಕೇಶ್, ವಿನುತಾ ನಾಯ್ಕ, ಬಾಗೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಅಶ್ವಿನಿ, ಅನಿತಾ, ಪ್ರವೀಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net