ಮೃದು ಕೌಶಲ ಬೆಳೆಸಿಕೊಳ್ಳವುದು ಅಗತ್ಯ

ಕಲಬುರಗಿ ಸಿಯುಕೆನಲ್ಲಿ ವಿಶ್ವ ಕೌಶಲ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಸುಷ್ಮಾ ಎಚ್​, ಪ್ರೊ.ಪವಿತ್ರಾ ಆಲೂರ್​, ಪ್ರೊ.ವಿಕ್ರಮ್​ ವಿಸಾಜಿ ಇತರರಿದ್ದರು.
ಕಲಬುರಗಿ ಸಿಯುಕೆನಲ್ಲಿ ವಿಶ್ವ ಕೌಶಲ ದಿನದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಸುಷ್ಮಾ ಎಚ್​, ಪ್ರೊ.ಪವಿತ್ರಾ ಆಲೂರ್​, ಪ್ರೊ.ವಿಕ್ರಮ್​ ವಿಸಾಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ
  • ಸಿಯುಕೆನಲ್ಲಿ ವಿಶ್ವ ಕೌಶಲದಿನ ಅಂಗವಾಗಿ ಕಾರ್ಯಾಗಾರ
ಕಲಬುರಗಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೈಕ್ಷಣಿಕ ಜ್ಞಾನ ಸಾಕಾಗುವುದಿಲ್ಲ. ಶೈಕ್ಷಣಿಕ ಸಾಧನೆಯ ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಮೃದು ಕೌಶಲ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ ನೀಡಿದರು.
ವಿಶ್ವ ಯುವ ಕೌಶಲ ದಿನದ ಅಂಗವಾಗಿ ಭವಿಷ್ಯಕ್ಕಾಗಿ ಕೌಶಲ ಎಂಬ ಜಾಗತಿಕ ಧ್ಯೇಯವಾಕ್ಯದಡಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಾಫ್ಟ್​ ಸ್ಕಿಲ್​ ಡೆವಲಪ್​ಮೆಂಟ್​ ಸೆಂಟರ್​, ಮಾನವಿಕ ಮತ್ತು ಭಾಷಾ ನಿಕಾಯ ಹಾಗೂ ಸಮಾಜ ಮತ್ತು ವರ್ತನಾ ವಿಜ್ಞಾನ ನಿಕಾಯಗಳ ಸಹಯೋಗದಲ್ಲಿ ಧ್ವನಿ, ಕ್ರಿಯಾಪದ ಮತ್ತು ದೃಶ್ಯಗಳು: ಭಾಷೆ ಮತ್ತು ಮೃದು ಕೌಶಲ ಕುರಿತು ಒಂದು ದಿನದ ಕಾರ್ಯಾಗಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಪರಿಣಾಮಕಾರಿ ಸಂವಹನ, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ, ನಾಯಕತ್ವ, ಸಮಯ ನಿರ್ವಹಣೆ, ಸೃಜನಶೀಲತೆ, ಹೊಂದಾಣಿಕೆ, ಸಹಾನುಭೂತಿ ಹಾಗೂ ಸಮಸ್ಯೆ ಪರಿಹಾರ ಕೌಶಲಗಳು ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಪ್ರಮುಖ ಆಧಾರ. ಆದ್ದರಿಂದ ವಿದ್ಯಾರ್ಥಿಗಳು ಈ ಕೌಶಲ ಅಳವಡಿಸಿಕೊಂಡು ತಮ್ಮ ವ್ಯಕ್ತಿತ್ವ ಸಮಗ್ರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೌಶಲದಿಂದ ಉದ್ಯೋಗಾರ್ಹತೆ ಹೆಚ್ಚಳ
ವಿದ್ಯಾರ್ಥಿಗಳನ್ನು ಈ ಅಗತ್ಯ ಕೌಶಲಗಳಿಂದ ಸಜ್ಜುಗೊಳಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಸಾಫ್ಟ್​ ಸ್ಕಿಲ್​ ಡೆವಲಪ್​ಮೆಂಟ್​ ಸೆಂಟರ್​ ಸ್ಥಾಪಿಸಲಾಗಿದ್ದು, ಕೌಶಲ ಕೇಂದ್ರ ಆಯೋಜಿಸುವ ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇಂತಹ ತರಬೇತಿಗಳು ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವುದರ ಜತೆಗೆ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಸಹಕಾರಿಯಾಗುತ್ತವೆ ಎಂದರು.
ಸಾಫ್ಟ್​ ಸ್ಕಿಲ್​ ಡೆವಲಪ್​ಮೆಂಟ್​ ಸೆಂಟರ್​ನ ನಿರ್ದೇಶಕಿ ಡಾ.ಸುಷ್ಮಾ ಎಚ್​. ಸ್ವಾಗತಿಸಿದರು. ಮುಖ್ಯ ಭಾಷಣ ಮಾಡಿದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್​ ಪ್ರೊ.ವಿಕ್ರಮ್​ ವಿಸಾಜಿ, ನಿರಂತರ ಅಭ್ಯಾಸ ಮತ್ತು ಕಲಿಕೆಯ ಮೂಲಕ ಭಾಷಾ ಪ್ರಾವಿಣ್ಯತೆ ವೃದ್ಧಿಯಾಗುತ್ತದೆ. ಜಾಗತಿಕ ಮಟ್ಟದ ಶೈಕ್ಷಣಿಕ ಹಾಗೂ ವೃತ್ತಿಪರ ಅವಕಾಶ ಪಡೆದುಕೊಳ್ಳಲು ವಿದ್ಯಾರ್ಥಿಗಳು ಓದು, ಬರವಣಿಗೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ ಮತ್ತಷ್ಟೂ ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಿಕೆ ನಿರಂತರ ಪ್ರಕ್ರಿಯೆ
ಸಮಾಜ ಮತ್ತು ವರ್ತನಾ ವಿಜ್ಞಾನ ನಿಕಾಯದ ಡೀನ್​ ಪ್ರೊ.ಪವಿತ್ರಾ ಆಲೂರ್​ ಮಾತನಾಡಿ, ಕಲಿಕೆಯು ಜೀವನಪರ್ಯಂತ ನಡೆಯುವ ನಿರಂತರ ಪ್ರಕ್ರಿಯೆ. ಹೊಸ ಕೌಶಲ ಕಲಿಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ತಪ್ಪುಗಳನ್ನು ಕಲಿಕೆಯ ಅವಕಾಶಗಳಾಗಿ ಸ್ವೀಕರಿಸಿ, ತಾರ್ಕಿಕ ಚಿಂತನೆ, ಪರಿಣಾಮಕಾರಿ ಸಂವಹನ ಹಾಗೂ ವಿಮರ್ಶಾತ್ಮಕ ವಿಶ್ಲೇಷಣಾ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಹೆಚ್ಚುತ್ತಿರುವ ಸ್ಪರ್ಧಾತ್ಮಕ ಆಧುನಿಕ ಜಾಗತಿಕ ವಾತಾವರಣದಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಅವರಿಗೆ ಅಗತ್ಯ ಸಂವಹನ ಕೌಶಲ, ನಾಯಕತ್ವ ಗುಣ, ಪರಸ್ಪರ ಮತ್ತು ಉದ್ಯೋಗ ಕೌಶಲಗಳೊಂದಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು. ವಿಶೇಷ ತರ ಉಪನ್ಯಾಸ, ಸಂವಾದಾತ್ಮಕ ಚರ್ಚೆ, ಪ್ರಶ್ನೋತ್ತರ ಮತ್ತು ಭಾಷಾ ಪ್ರಾವಿಣ್ಯತೆ, ಸಾರ್ವಜನಿಕ ಭಾಷಣ, ಪ್ರಸ್ತುತ ಅಗತ್ಯ ಕೌಶಲ, ತಂಡವಾಗಿ ಕೆಲಸ ನಿರ್ವಹಣೆ ಮತ್ತು ವೃತ್ತಿಪರ ಸಂವಹನದ ಮೇಲೆ ಕೇಂದ್ರೀಕರಿಸುವ ಪ್ರಾಯೋಗಿಕ ಅವಧಿಗಳು ನಡೆದವು. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿವಿ ಆಂಗ್ಲ ಮತ್ತು ವಿದೇಶಿ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣೂರ, ಪ್ರೊ.ಚನ್ನವಿರ ಆರ್​.ಎಂ. ಪ್ರೊ. ರೊಮೇಟ್​ ಜಾನ್​, ಪ್ರೊ.ಶಿವಗಂಗಾ ರುಮ್ಮಾ, ಪ್ರೊ.ಜಯವೇಲ್​ ಎಸ್​, ಪ್ರೊ.ವಿಜಯೇಂದ್ರ ಪಾಂಡೆ, ಪ್ರೊ.ಗಣೇಶ್​ ಪವಾರ್​, ಪ್ರೊ.ಸಂದೀಪ್​ ರಣಭೀರ್ಕರ್​, ಪ್ರೊ.ಮನೋಹರ್​ ಭಂಡಾರೆ, ಪ್ರೊ.ಪ್ರಭಾಕರನ್​ ಸೆಲ್ವರಾಜ್​, ಡಾ.ಪಿ.ಕುಮಾರ್​ ಮಂಗಲಂ, ಡಾ.ಮಲ್ಲಿಕಾರ್ಜುನ್​ ಹೂಗಾರ, ಡಾ.ಸಂಜೀವರಾಯಪ್ಪ ಎನ್​.ಸಿ, ಡಾ.ರೋಹಿಣಾಕ್ಷ ಶಿರಾಲಾಲು, ಡಾ.ಪಿಯಾಲಿ ರಾಯ್​ ಇತರರು ಪಾಲ್ಗೊಂಡಿದ್ದರು.
"

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ ಹಾಗೂ ವೃತ್ತಿ ಆಧಾರಿತ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರ ಆಗಾಗ ಆಯೋಜಿಸುವ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣಗಳ ಸದುಪಯೋಗ ಪಡೆದುಕೊಳ್ಳಬೇಕು.

— ಡಾ.ಸುಷ್ಮಾ ಎಚ್​, ನಿರ್ದೇಶಕಿ, ಸಾಫ್ಟ್​ ಸ್ಕಿಲ್​ ಡೆವಲಪ್​ಮೆಂಟ್​ ಸೆಂಟರ್​, ಸಿಯುಕೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net