ಗಡಿಯಲ್ಲಿ ಕನ್ನಡ ಭವನ ಇಲ್ಲದಿರುವುದು ಸರ್ಕಾರಕ್ಕೆ ಅವಮಾನ

It is a shame for the government that there is no Kannada Bhavan at the border.
It is a shame for the government that there is no Kannada Bhavan at the border.
Published on
ಪಾವಗಡ: ಗಡಿಭಾಗ ಪಾವಗಡದಲ್ಲಿ ಕನ್ನಡ ಭವನ ಇಲ್ಲದಿರುವುದಕ್ಕೆ ಸರ್ಕಾರವೇ ಅವಮಾನ ಅನುಭವಿಸಬೇಕು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಎಸ್​.ಎಸ್​.ಕೆ ಬಯಲು ರಂಗಮಂದಿರದಲ್ಲಿ ಮಂಗಳವಾರ ನಡೆದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಕನ್ನಡ ಭವನ ಸ್ಥಾಪಿಸಬೇಕು. ಕನ್ನಡ ಮತ್ತು ಸಂಸತಿ ಇಲಾಖೆ, ಗಡಿನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಭವನದ ಅರ್ಜಿ ಸಲ್ಲಿಸಿದರೆ. ನಿಮ್ಮ ಪರವಾಗಿ ಈ ಸಮ್ಮೇಳನದಲ್ಲಿ ನಿಂತು ನಾನು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಭವನಕ್ಕಾಗಿ ಒತ್ತಾಯಿಸುತ್ತೇನೆ ಎಂದರು.
ಆಳುವ ಸರ್ಕಾರಗಳ ರ್ನಿಲಕ್ಷ್ಯ ಮತ್ತು ದೂರದೃಷ್ಟಿ ಕೊರತೆಯಿಂದ ಶಿಕ್ಷಣವು ಬಹಳ ದೊಡ್ಡ ಪಲ್ಲಟಗಳಿಗೆ ಬಲಿಯಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ವ್ಯವಸ್ಥೆಯು ಹದಗೆಟ್ಟಿದೆ. ಬಡವರ ಮಕ್ಕಳು ಅಂಗನವಾಡಿ, ಸ್ಥಿತಿವಂತರ ಮಕ್ಕಳಿಗೆ ಖಾಸಗಿ ಕಾನ್ವೆಂಟ್ಗಳಲ್ಲಿ ಎಲ್​ಕೆಜಿ, ಯುಕೆಜಿ ಎಂದು ಕಳುಹಿಸುತ್ತಾರೆ. ಅಂಗನವಾಡಿ ಮತ್ತು ಖಾಸಗಿ ಕಾನ್ವೆಂಟಿಗೆ ಕಳುಹಿಸಲು ನನ್ನ ವಿರೋಧವಿಲ್ಲ. ಆದರೆ, ಪ್ರಾಥಮಿಕ ಶಿಕ್ಷಣದಲ್ಲಿ ಏಕರೂಪ ಪದ್ಧತಿ ತರದಿರಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.
ಉನ್ನತ ಶಿಕ್ಷಣ ಬಹರೂಪಿ, ಜ್ಞಾನಮುಖಿ ಮತ್ತು ಉದ್ಯೋಗಮುಖಿ ಶಿಕ್ಷಣ ಆಗಬೇಕಿದೆ. ಅಲ್ಲದೆ, ಪ್ರಾಥಮಿಕ ಪೂರ್ವ ಶಿಕ್ಷಣ ಕೊಡುವಲ್ಲಿ ಸರ್ಕಾರ ಪುಟ್ಟ ಮಕ್ಕಳಲ್ಲಿ ಒಂದೆಡೆ ಅಂಗನವಾಡಿ, ಮತ್ತೊಂದೆಡೆ ಕಾನ್ವೆಂಟ್​ ತೆರೆಯಲು ಅನುಮತಿ ನೀಡಿ ಶೈಕ್ಷಣಿಕ ಅಸಮಾನತೆಯನ್ನು ಬಿತ್ತುವ ಶಿಕ್ಷಣ ವ್ಯವಸ್ಥೆಯನ್ನು ಧಿಕ್ಕರಿಸುವೆ. ಅಲ್ಲದೆ, ಹತ್ತನೇ ತರಗತಿ ವಿದ್ಯಾರ್ಥಿಗಳು ಅವರ ಸ್ವಂತ ವಿವೇಚನೆಯಿಂದ ಪ್ರತಿ ವಿಷಯದಲ್ಲಿ 13 ಅಂಕಗಳನ್ನು ಪರೀಕ್ಷೆಯಲ್ಲಿ ಗಳಿಸಲು ಪ್ರಯತ್ನಿಸಿದರೆ, ಶಿಕ್ಷಣ ಇಲಾಖೆಯು ಆಂತರಿಕ 20 ಅಂಕಗಳನ್ನು ಕೊಟ್ಟು ತೇರ್ಗಡೆ ಮಾಡುವುದರಲ್ಲಿ ಅರ್ಥವೇನಿದೆ ಎಂದರು.
ಕರ್ನಾಟಕ ಶಿಕ್ಷಣ ಇಲಾಖೆ ಮತ್ತು ಸರ್ಕಾರ ದೊಡ್ಡ ಅಪಾಯಕಾರಿ ನಿಯಮಗಳನ್ನು ರೂಪಿಸಿ ಶಿಕ್ಷಣ ವ್ಯವಸ್ಥೆಯನ್ನು ನಿರ್ನಾಮ ಮಾಡುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸುಮಾರು 52,700 ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದರೆ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಲು ಸಾಧ್ಯವೆ ಎಂದರು.
ನಾನು ಮೊದಲ ಬಾರಿಗೆ ಶಿಕ್ಷಕನಾಗಿ ತಾಲೂಕಿನ ಕೊಂಡೆತಿಮ್ಮನಹಳ್ಳಿ ಗ್ರಾಮದಲ್ಲಿ ವೃತ್ತಿ ಪ್ರಾರಂಭಿಸಿದೆ. ನಾನು ಕೂಡ ಶಿರಾ ತಾಲೂಕಿನ ಬರಗೂರು ಎಂಬ ಚಿಕ್ಕ ಗ್ರಾಮದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿದ್ದೇನೆ. ಚಿಕ್ಕ ಹಳ್ಳಿಗಳಿಂದಲೂ ದೊಡ್ಡ ಪ್ರತಿಭೆಗಳು ಬರೋದಕ್ಕೆ ಸಾಧ್ಯ ಇದೆ ಎನ್ನುವುದಕ್ಕೆ ಆನೇಕ ಸಾಕ್ಷಿಗಳು ಇವೆ. ಶಿಕ್ಷಣ ಮೊದಲು ಸೆರೆಮನೆಯಲ್ಲಿತ್ತು. ಅದು ಸೆರೆಮನೆಯಿಂದ ಶಿಕ್ಷಣ ವಿಮೋಚನೆ ಆದಾಗ, ಆ ಶಿಕ್ಷಣ ಹಳ್ಳಿ, ಹಟ್ಟಿಗಳಿಗೆ ಬಂತು. ಹೀಗೆ ಎಲ್ಲೆಲ್ಲಿಗೆ ಬೇಕೋ ಅಲ್ಲೆಲ್ಲಾ ಶಿಕ್ಷಣ ಹರಿದು ಬಂದಾಗ ಅನೇಕರು ಅಕ್ಷರಸ್ಥರಾದರು ಎಂದರು.
ಆದಿಮಾನವ ಕಾಲದ ಇತಿಹಾಸ: ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಸಣ್ಣ ನಾಗಪ್ಪ ಮಾತನಾಡಿ, ತುಮಕೂರು ಜಿಲ್ಲೆಗೆ ಸೇರಿದ ಪಾವಗಡ ವೀರಭೂಮಿ. ಈ ಹೆಸರು ಕೇಳಿದೊಡನೆ ನೆನಪಾಗುವುದು ಶತಶತಮಾನಗಳ ಇತಿಹಾಸವನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಗಿರಿದುರ್ಗಗಳು, ಕಲ್ಲಿನ ಕಥೆಗಳು ಮತ್ತು ಪಾಳೆಗಾರರ ಶೌರ್ಯದ ಗಾಥೆಗಳು, ಬಿಸಿಲು ನಾಡು ಎಂದೇ ಪ್ರಸಿದ್ಧವಾಗಿದ್ದರೂ ಇತಿಹಾಸದ ಕಾಲ ದೃಷ್ಟಿಯಲ್ಲಿ ಇದು ಒಂದು ಉಜ್ವಲವಾದ ವೈಭವದ ಬೀಡಾಗಿದೆ. ಪಾವಡಗದ ಇತಿಹಾಸ ಕೇವಲ ರಾಜರ ಆಳ್ವಿಕೆಯಿಂದ ಆರಂಭವಾಗುವುದಿಲ್ಲ, ಆದಿಮಾನವನ ಕಾಲದವರೆಗೂ ವ್ಯಾಪಿಸಿದೆ. ತಾಲೂಕಿನ ಹಲವು ನೆಲೆಗಳಲ್ಲಿ ಆದಿ ಹಳೇ ಶಿಲಾಯುಗ, ಮಧ್ಯ ಹಳೇ ಶಿಲಾಯುಗ ಮತ್ತು ನವಶಿಲಾಯುಗದ ಕುರುಹುಗಳು ದೊರಕಿವೆ. ಕನ್ನಮೇಡಿ, ನಿಡುಗಲ್ಲು ಉದ್ದಂಡಪ್ಪನಪಾಳ್ಯ, ಬೊಮ್ಮದೇವರಬೆಟ್ಟದಂತಹ ತಾಣಗಳಲ್ಲಿ ಸಿಕ್ಕಿರುವ ಕೈಕೊಡಲಿಗಳು, ಅಮೃತ್​ ಪಾತ್ರೆಗಳು, ಸಮಾಧಿಗಳು ಮತ್ತು ಗೀರು ಚಿತ್ರಗಳು, ಬೂದಿಬೆಟ್ಟ, ನಾಗಲಾಪುರಗಳಲ್ಲಿ ಸಿಕ್ಕಿರುವ ಕುರುಹುಗಳು ಸಾಕ್ಷಿಯಾಗಿವೆ. ಸಹಸ್ರಾರು ವರ್ಷಗಳ ಹಿಂದೆಯೇ ಮಾನವನ ವಸತಿಗೆ ಯೋಗ್ಯವಾಗಿತ್ತು ಎಂಬುದನ್ನು ಸಾರುತ್ತವೆ ಎಂದರು.
ಮುಂದುವರಿದು ಪಾವಗಡ ಬೆಟ್ಟವು ಹಾವಿನ ಹೆಡೆಯಂತೆ ಕಾಣುವುದರಿಂದ ಇದಕ್ಕೆ ಪಾಮುಕೊಂಡ ಎಂಬ ಹೆಸರಿತ್ತು. ಇದು ಕಾಲಕ್ರಮೇಣ "ಪಾವುಕೊಂಡವಾಗಿ ನಂತರ ಪಾವಗಡವಾಗಿ ಮಾರ್ಪಟ್ಟಿತು. ಪಾಮುಕೊಂಡ ಎಂದರೆ "ಸರ್ಪಗಳ ಬೆಟ್ಟ' ಎಂದರ್ಥ, ನಾಗರ ಶಿಲೆಗಳು ದೊರೆತಿರುವುದರಿಂದಲೂ ಈ ಹೆಸರು ಬಂತು ಎಂಬ ಕತೆಯಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net