ಇಂಡಿ ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಲಶಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಗವಿಸಿದ್ಧೇಶ್ವರ ಶ್ರೀಗಳು ಉದ್ಘಾಟಿಸಿದರು. ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ ಮತ್ತಿತರರಿದ್ದರು.
ಇಂಡಿ : ಜಗತ್ತಿನಲ್ಲಿ ಪ್ರತಿಯೊಂದು ವಸ್ತುವು ಧರ್ಮವನ್ನು ಆಶ್ರಯಿಸಿದೆ. ನಮ್ಮ ಕಣ್ಣಿಗೆ ಕಾಣುವ ವಿಶಾಲವಾದ ವಿಶ್ವವಾಗಲಿ ಅದರ ಸೌಂದರ್ಯವಾಗಲಿ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಒಂದು ಸುಂದರ ಹೂ ಅರಳಿ ಸುವಾಸನೆ ಬೀರುತ್ತದೆ. ಒಂದು ದೀಪ ಉರಿದು ಸುತ್ತ ಮುತ್ತ ಬೆಳಕು ಚಲ್ಲುತ್ತದೆ. ಅರಳುವುದು ಹೂವಿನ ಧರ್ಮ, ಬೆಳಗುವುದು ದೀಪದ ಧರ್ಮ ಎಂದು ಸಂಸ್ಥಾನ ಗವಿಮಠ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಬೊಳೆಗಾಂವ ಗ್ರಾಮದಲ್ಲಿ ಗುರುವಾರ ಸಾಯಂಕಾಲ ಭದ್ರಕಾಳಿ ಶ್ರೀ ವೀರಭದ್ರೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಮೂರ್ತಿ, ಪ್ರಾಣ ಪ್ರತಿಷ್ಠಾಪನೆ ಕಲಶರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮೆಚ್ಚುಗೆ ಮಾತು ಚುಚ್ಚು ಮಾತು, ನೋವು ನಲಿವು, ಕಷ್ಟ ಸುಖ, ಸೋಲು, ಗೆಲುವು, ಬಡತನ, ಶ್ರೀಮಂತಿಕೆ ಲಾಭ, ಹಾನಿ ಮಧ್ಯೆ ಬದುಕಲು ಕಲಿಯಬೇಕು ಎಂದರು.
ದೇಹದ ಒಂಬತ್ತು ರಂಧ್ರಗಳು ದೇವರ ಕೊಟ್ಟ ಕೊಡುಗೆ. ಹಾಗೆಯೇ ಅನ್ನ ನೀರು ಭೂಮಿಯಿಂದ, ಪತ್ರಿ ಬಿಲ್ವಾರ್ಚನೆ ಗಿಡದಿಂದ ಬರುತ್ತವೆ, ಅಭಿಷೇಕ ಮಾಡಿ ಸಂಪತ್ತು, ಬೆಳ್ಳಿ, ಬಂಗಾರ, ವಸ್ತು ಬೇಡುವ ಬದಲಾಗಿ ದೇವರು ಕೊಟ್ಟಿದ್ದಕ್ಕೆ
ಧನ್ಯತಾ ಭಾವ ಇರಬೇಕು ಎಂದರು.
ಸಾಲೋಟಗಿ ಶ್ರೀ ಸಿದ್ಧೇಶ್ವರ ಆಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ, ಹೂಗಳಲ್ಲಿ ಹತ್ತಿ ಹೂ, ಚುಕ್ಕೆಗಳಲ್ಲಿ ಬೆಳ್ಳಿ ಚುಕ್ಕೆ, ಹಾಲಿನಲ್ಲಿ ತಾಯಿಯ ಹಾಲು ಶ್ರೇಷ್ಠ. ಹಾಗೆಯೇ ಪ್ರಾಣಿಗಳಲ್ಲಿ ಮಾನವ ಜನ್ಮ ಶ್ರೇಷ್ಠ ಅದರ ಸದುಪಯೋಗ ಪಡೆಯಬೇಕು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳು ಮಾತನಾಡಿ, ಈ ಜಗತ್ತಿನಲ್ಲಿ ಬದುಕಿ ಬಾಳಿದ ಋಷಿಮುನಿಗಳು, ತತ್ವಜ್ಞಾನಿಗಳು, ದಾರ್ಶನಿಕರು, ದಾಸರು, ಸಂತರು, ಶರಣರು, ಮಹಾಂತರು ಕಣ್ಣಿಗೆ ಕಾಣುವ ಈ ವಿಶಾಲವಾದ ವಿಶ್ವವು ದೇವನ ಅಭಿವ್ಯಕ್ತ ರೂಪವೆಂದರು.
ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಆನಂದಪ್ಪ ಹುಣಸಗಿ, ಬಸವಂತರಾಯಗೌಡ ಪಾಟೀಲ, ಶ್ರೀಮಂತ ಇಂಡಿ, ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ಧರಾಮೇಶ್ವರ, ಡಾ. ಸುಶೀಲಕುಮಾರ ಹುಣಸಗಿ, ಬಾಬು ಸಾವಕಾರ ಮೇತ್ರಿ ಇದ್ದರು.