ಅಂದು ಅಧಿಕಾರಕ್ಕಾಗಿ 17 ಶಾಸಕರನ್ನು ಖರೀದಿಸಿದ್ದೆವು: ಈಶ್ವರಪ್ಪ ಸ್ಫೋಟಕ ಹೇಳಿಕೆ!

KS Eshwarappa
KS Eshwarappa
Published on
ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ನ 17 ಶಾಸಕರು(MLAs) ಬಿಜೆಪಿಗೆ ಬಂದಿದ್ದು ನಿಜ. ಅವರಿಗೆ ಹಣ ನೀಡಿ ಪಕ್ಷಕ್ಕೆ ಕರೆತಂದಿದ್ದೂ ನಿಜ. ಬಳಿಕ ಉಪಚುನಾವಣೆಯಲ್ಲಿ ಅವರನ್ನೇ ಅಭ್ಯರ್ಥಿಗಳಾಗಿ ನಿಲ್ಲಿಸಿ ಬಿಜೆಪಿ ಹಣ ಖರ್ಚು ಮಾಡಿದ್ದೂ ನಿಜ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿದ್ದಾರೆ.
ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬಿಜೆಪಿ ಮಾಡಿದ್ದು ಕೂಡ ಭ್ರಷ್ಟಾಚಾರದ ಒಂದು ಭಾಗವೇ ಆಗಿತ್ತು ಎಂದು ಒಪ್ಪಿಕೊಂಡರು.

ಜನಬೆಂಬಲ ಸಿಗಲಿಲ್ಲ

17 ಶಾಸಕರ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಆದರೆ ಹಣದ ಬಲ ಇದ್ದರೂ ಉಪಚುನಾವಣೆಯಲ್ಲಿ ಜನಬೆಂಬಲ ಸಿಗಲಿಲ್ಲ. ಪರಿಣಾಮವಾಗಿ ಆ ಶಾಸಕರಲ್ಲಿ ಹಲವರು ಸೋಲು ಕಂಡರು ಎಂದು ಹೇಳಿದರು. ಬಿಜೆಪಿ ಅಂದು ಮಾಡಿದ ಕ್ರಮದ ಪರಿಣಾಮ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಯಿತು. ಮತದಾರರು ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಒಪ್ಪುವುದಿಲ್ಲ ಎಂಬುದು ಇದರಿಂದ ಸಾಬೀತಾಯಿತು ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ನ ಕೆಲ ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅಲ್ಲಿಯೂ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ. ಯಾರಿಗೆ ಎಷ್ಟು ಹಣ ಹೋಗಿದೆ ಎಂಬುದನ್ನು ಅವರವರ ಆತ್ಮಸಾಕ್ಷಿಗೆ ಬಿಡಬೇಕು ಎಂದು ಹೇಳಿದರು. ಅಂದು ಬಿಜೆಪಿ ಮಾಡಿದ್ದ ತಪ್ಪನ್ನೇ ಇಂದು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿಗೆ ಆದ ಪರಿಸ್ಥಿತಿಯೇ ಕಾಂಗ್ರೆಸ್‌ಗೂ ಆಗಲಿದೆ. ಭ್ರಷ್ಟಾಚಾರಕ್ಕೆ ಮತ್ತೆ ನಾಂದಿ ಹಾಡಿರುವ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರೋಪಿಸಿದರು.

ಧರ್ಮಸ್ಥಳವನ್ನು ರಾಜಕೀಯಕ್ಕೆ ಎಳೆಯಬೇಡಿ

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯನ್ನು ರಾಜಕೀಯ ವಿವಾದಗಳಿಗೆ ಎಳೆಯಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಈಶ್ವರಪ್ಪ ಸಲಹೆ ನೀಡಿದರು. ಅಡ್ಡಮತದಾನ ಮಾಡಿದವರನ್ನು ಪತ್ತೆ ಹಚ್ಚಲು ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವಂತೆ ಹೇಳಿರುವುದು ಸರಿಯಲ್ಲ. ಧರ್ಮಸ್ಥಳ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರ. ದೇವರ ಹೆಸರಿನಲ್ಲಿ ರಾಜಕೀಯ ಆಣೆ-ಪ್ರಮಾಣ ಮಾಡುವುದು ತಪ್ಪು ಎಂದು ಹೇಳಿದರು.

ತನಿಖೆಗೆ ಒತ್ತಾಯ

ಅಡ್ಡಮತದಾನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಯಾರು ಹಣ ನೀಡಿದರು, ಎಷ್ಟು ಹಣದ ವ್ಯವಹಾರ ನಡೆದಿದೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು. ಶಾಸಕ ಎಸ್.ಟಿ. ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿಗಾಗಿ ಮತ ಚಲಾಯಿಸಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಅಭಿವೃದ್ಧಿಗೆ ಹಣ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಇದರ ಹಿಂದಿನ ಸತ್ಯವೂ ತನಿಖೆಯಿಂದ ಗೊತ್ತಾಗಬೇಕು ಎಂದು ಹೇಳಿದರು.
ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿದ್ದ ವಿಚಾರವನ್ನು ಉಲ್ಲೇಖಿಸಿದ ಅವರು, ಯಾರೇ ಆಗಿದ್ದರೂ ದೇವರ ಮುಂದೆ ರಾಜಕೀಯ ಆಣೆ-ಪ್ರಮಾಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net