ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್​ ಜಾರಿಗೊಳಿಸಿ

ಯಡ್ರಾಮಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವೀರಣ್ಣ ಕೌಲಗಿ ಇದ್ದರು.
ಯಡ್ರಾಮಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವೀರಣ್ಣ ಕೌಲಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲಿಕಾರ್ಜುನ ಹಲಕರ್ಟಿ ಸೂಚನೆ
  • ಯಡ್ರಾಮಿಯಲ್ಲಿ ಗ್ಯಾರಂಟಿ ಪ್ರಗತಿ ಪರಿಶೀಲನೆ ಸಭೆ
ಯಡ್ರಾಮಿ: ಸಮಾಜದಲ್ಲಿರುವ ಪ್ರತಿ ವ್ಯಕ್ತಿಗೂ ಪಂಚ ಗ್ಯಾರಂಟಿ ಯೋಜನೆ ತಲುಪಿಸುವುದಕ್ಕಾಗಿ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿದೆ. ಆದರೆ ತಾಲೂಕಿನ ಕೆಲ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಯಲ್ಲಿ ಸದಸ್ಯರು ಸೂಚಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಿರ್ಲಕ್ಷ ವಹಿಸುತ್ತಿದ್ದು, ಅಂತವರ ವಿರುದ್ಧ ನೋಟಿಸ್​ ಜಾರಿಗೊಳಿಸಿ ಕ್ರಮಕ್ಕೆ ಮುಂದಾಗಿ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚ ಗ್ಯಾರಂಟಿ ಸರ್ಕಾರದ ಮಹತ್ವಾಕಾಂ ಯೋಜನೆಯಾಗಿದ್ದು, ಇದಕ್ಕಾಗಿ ಸಾಕಷ್ಟು ಅನುದಾನ ಒದಗಿಸುತ್ತಿದೆ. ಅಧಿಕಾರಿಗಳು ಸೇವಾ ಮನೋಭಾವದೊಂದಿಗೆ ಕಾರ್ಯ ನಿರ್ವಹಿಸಿದರೆ ಮಾತ್ರ ಯೋಜನೆ ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಲು ಸಾಧ್ಯ ಎಂದರು.
ತಾಲೂಕಿನಲ್ಲಿ ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆ ಬಗ್ಗೆ ಹೆಚ್ಚು ದೂರುಗಳಿದ್ದು, ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಅಧಕಾರಿಗಳು ಈವರೆಗೂ ಕ್ರಮ ಕೈಗೊಂಡಿಲ್ಲ. ಜತೆಗೆ ಸಭೆಗೆ ಸರಿಯಾದ ಮಾಹಿತಿಯೂ ನೀಡುತ್ತಿಲ್ಲ. ಹೀಗಾಗಿ ಎರಡು ಇಲಾಖೆ ಅಧಿಕಾರಿಗಳಿಗೆ ಕೂಡಲೇ ನೋಟಿಸ್​ ಜಾರಿ ಮಾಡಿ ಎಂದು ತಾಪಂ ಇಒಗೆ ತಾಕೀತು ಮಾಡಿದರು.
ತಾಪಂ ಇಒ ವೀರಣ್ಣ ಕೌಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಮಹಾಂತೇಶ ದೊರಿ, ಕಾವೇರಿ ಪಾಟೀಲ್​, ಸಿದ್ದು ಹಿರೇಗೌಡ್ರ, ಮಹಿಬೂಬ್​ ಮನಿಯಾರ್​, ಭೀಮಣ್ಣ ಮಾಳಪ್ಪ, ವಿಠ್ಠಲ್​ ಹರೀಶಚಂದ್ರ, ಮಲ್ಕಪ್ಪ ಶಿವಪ್ಪ, ನಾನಾಗೌಡ ಮಾಲಿಪಾಟೀಲ್​, ಮಂಜುನಾಥರೆಡ್ಡಿ, ಹಸನ್​ಪಟೇಲ್​, ಇಸ್ಮಾಯಿಲ್​ಸಾಬ್​, ತಾಪಂ ವಿಷಯ ನಿರ್ವಾಹಕ ವಿರೇಶ ಕುಂಬಾರ ಇತರರಿದ್ದರು.
"

ತಾಲೂಕು ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಯಲ್ಲಿ ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಅಲ್ಲದೆ ಮುಖ್ಯ ಅಧಿಕಾರಿಗಳು ಸಭೆಗೆ ಬಾರದೆ, ಸಿಬ್ಬಂದಿಯನ್ನು ಕಳುಹಿಸುತ್ತಿದ್ದಾರೆ. ಇದು ಸರಿಯಲ್ಲ, ಮುಂದಿನ ಸಭೆಗೆ ಖಡ್ಡಾಯವಾಗಿ ತಾಲೂಕು ಅಧಿಕಾರಿಗಳು ಹಾಜರಾಗಬೇಕು.

— > ಮಲ್ಲಿಕಾರ್ಜುನ ಹಲಕರ್ಟಿ, ತಾಲೂಕು ಅಧ್ಯಕ್ಷ, ಗ್ಯಾರಂಟಿ ಅನುಷ್ಠಾನ ಸಮಿತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net