ಬಾಗೇಪಲ್ಲಿ: ಕಾಟಾಚಾರಕ್ಕೆ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕುಪಿತಗೊಂಡು ಕಾರ್ಯಕ್ರಮ ಬಹಿಷ್ಕರಿಸಿದ ದಲಿತ ಮುಖಂಡರು, ಶಾಸಕ ಸುಬ್ಬಾರೆಡ್ಡಿ ಉಪಸ್ಥಿತಿಯಲ್ಲೇ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಭಾನುವಾರ ನಡೆಯಿತು.
ಪಟ್ಟಣದ ತಾಲೂಕು ಪಂಚಾಯಿತಿಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡಿರುವ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಜಯಂತಿಯನ್ನು ಬಹಿಷ್ಕರಿಸಿ ಪಟ್ಟು ಹಿಡಿದ ದಲಿತ ಮುಖಂಡರು ತಾಲೂಕು ಕಚೇರಿ ಸಭಾಂಗಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರೊಂದಿಗೆ ಚರ್ಚಿಸಿ ತೆಗೆದುಕೊಂಡಿರುವ ತೀರ್ಮಾನದಂತೆ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ಈಗ ಏಕಾಏಕಿ ಜಯಂತಿ ಬಗ್ಗೆ ಅಪಸ್ವರ ಎತ್ತುವುದು ಸಮಂಜಸ ಅಲ್ಲ ಎಂದು ತಹಸೀಲ್ದಾರ್ ಮನೀಷಾಪತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ದಲಿತ ಮುಖಂಡರಿಗೆ ಮಾಹಿತಿ ನೀಡಿದರು.
ಅಧಿಕಾರಿಗಳ ವಿರುದ್ಧ ಏರು ಧ್ವನಿಯಲ್ಲಿ ವಾಗ್ವಾದಕ್ಕಿಳಿದ ದಲಿತ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಸಭಾಂಗಣದಿಂದ ಹೊರ ನಡೆದರು, ಆದರೆ, ಎಸ್.ಎನ್.ಸುಬ್ಬಾರೆಡ್ಡಿ, ದಲಿತ ಮುಖಂಡರ ಪ್ರತಿಭಟನೆಗೆ ಜಗ್ಗದೆ ಜಯಂತ್ಯುತ್ಸವನ್ನು ಯಶಸ್ವಿಗೊಳಿಸಿ ಕಾರ್ಯಕ್ರಮದಿಂದ ಹೊರ ನಡೆದರು. ಈ ವೇಳೆ ಶಾಸಕರು ಹಾಗೂ ದಲಿತ ಮುಖಂಡರ ನಡುವೆ ವಾಗ್ವಾದ ನಡೆಯಿತು.