ಡ್ರಗ್ಸ್ ಹಬ್‌ನಿಂದ ಡ್ರಗ್ಸ್ ಉತ್ಪಾದನಾ ಕೇಂದ್ರದತ್ತ ಬೆಂಗಳೂರು?

synthetic drugs
synthetic drugs
Published on

ಪ್ರಮುಖ ಮುಖ್ಯಾಂಶಗಳು

  • ಸಿಂಥೆಟಿಕ್ಸ್ ಜಾಲದ ಹೊಸ ತಂತ್ರ, ಪೊಲೀಸರಿಗೆ ಸವಾಲು
  • ಈಶಾನ್ಯ ರಾಜ್ಯಗಳಿಂದ ನಗರಕ್ಕೆ ಕಚ್ಚಾವಸ್ತು ಸಾಗಣೆ

ರವಿ ನಾಯಕ್

ಬೆಂಗಳೂರು: ಬೆಂಗಳೂರು ನಗರ ಕಳೆದ ಕೆಲವು ವರ್ಷಗಳಿಂದ ಮಾದಕ ವಸ್ತುಗಳ ಅಕ್ರಮ ಜಾಲದ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ.ಆದರೆ ಈಗ ಡ್ರಗ್ಸ್ ಸಾಗಾಣಿಕೆಗಿಂತಲೂ ಹೆಚ್ಚು ಆತಂಕಕಾರಿ ಬೆಳವಣಿಗೆಯೊಂದು ತನಿಖಾ ಸಂಸ್ಥೆಗಳ ಗಮನ ಸೆಳೆದಿದೆ. ಅದೇನೆಂದರೆ, ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಉತ್ಪಾದನೆಗೆ ಪ್ರಿಕ್ಕರ್ಸ್‌ ಮಟೆರಿಯಲ್ಸ್ (ಕಚ್ಚಾ ವಸ್ತುಗಳನ್ನು ಸಂಗ್ರಹ) ಸ್ಥಳೀಯ ಮಟ್ಟದಲ್ಲೇ ಎಂಡಿಎಂಎ ಮತ್ತು ಎಕ್ಸ್‌ಟಸ್ಸಿ ಮಾದರಿಯ ಮಾದಕ ವಸ್ತುಗಳನ್ನು ತಯಾರಿಸಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ವಿದೇಶಗಳಿಂದ ಹಾಗೂ ದೇಶದ ವಿವಿಧ ಭಾಗಗಳಿಂದ ಡ್ರಗ್ಸ್ ಸಾಗಣೆ, ಪಾರ್ಟಿ ಸಂಸ್ಕೃತಿ, ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡ ಪೆಡ್ಲರ್‌ಗಳ ಜಾಲದ ಬಗ್ಗೆ ನಿರಂತರವಾಗಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರ ಜತೆಗೆ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಯಾಗುವ ಅಪಾಯದ ಮುನ್ಸೂಚನೆಯಾಗಿದೆ.
ಹಿಂದೆ ವಿದೇಶಗಳಿಂದ ನೇರವಾಗಿ ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದ ಜಾಲಗಳು ಈಗ ತಮ್ಮ ಕಾರ್ಯವೈಖರಿಯನ್ನು ಬದಲಿಸಿವೆ. ಏರ್‌ಪೋರ್ಟ್, ಬಂದರು, ವಿದೇಶಿ ಅಂಚೆ ಸೇವೆ ಹಾಗೂ ಕಸ್ಟಮ್ಸ್ ಇಲಾಖೆಗಳ ಕಟ್ಟುನಿಟ್ಟಿನ ನಿಗಾ ವಹಿಸಿರುವ ಪರಿಣಾಮ ಸಿದ್ಧ ಮಾದಕ ವಸ್ತುಗಳ ಬದಲಿಗೆ ಅವುಗಳ ತಯಾರಿಕೆಗೆ ಬೇಕಾದ ರಾಸಾಯನಿಕ ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳುವ ಹೊಸ ಮಾರ್ಗವನ್ನು ದಂಧೆ ಕೋರರು ಕಂಡು ಕೊಂಡಿದ್ದಾರೆ.

ಪೊಲೀಸರಿಗೆ ಅನುಮಾನ ಕಡಿಮೆ:

ರಾಸಾಯನಿಕ ಹಾಗೂ ಕಚ್ಚಾ ವಸ್ತುಗಳನ್ನು ಬೇರೆ ಬೇರೆಯಾಗಿ ಬೇರ್ಪಡಿಸಿ ಅವುಗಳ ಸಾಗಾಣೆ ಮಾಡುವುದರಿಂದ ಪೊಲೀಸರ ಕಣ್ಣುತಪ್ಪಿಸಿ ತರಬಹುದಾಗಿದೆ. ಬಸ್, ರೈಲ್ವೆ, ಲಾರಿ, ಸರಕು ಸಾಗಣೆ ವಾಹನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಬೇರೆ ಬೇರೆ ಮಾರ್ಗಗಳ ಮೂಲಕ ನಗರಕ್ಕೆ ತಲುಪಿಸಿ ನಂತರ ಗುಪ್ತ ಸ್ಥಳಗಳಲ್ಲಿ ಸಂಗ್ರಹಿಸಿ ಡ್ರಗ್ ತಯಾರಿಸಲಾಗುತ್ತಿದೆ.

ಪ್ರಯೋಗಾಲಯ ಸ್ಥಾಪನೆ:

ಮುಂಬೈ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಈಗಾಗಲೇ ಹಲವು ಸಿಂಥೆಟಿಕ್ಸ್ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾಗಿವೆ. ಅಲ್ಲಿನ ಜಾಲಗಳು ದೇಶದ ವಿವಿಧ ನಗರಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ಪೊಲೀಸ್ ತನಿಖೆಗಳಿಂದ ಸಾಬೀತಾಗಿದೆ. ಇದೇ ಮಾದರಿಯ ಜಾಲ ಬೆಂಗಳೂರಿನಲ್ಲೂ ಬೇರುಬಿಟ್ಟಿರುವ ಸಾಧ್ಯತೆ ಹೆಚ್ಚಿರುವುದರಿಂದ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಕಳೆದ ವರ್ಷ ಮೈಸೂರು ಭಾಗದಲ್ಲಿ ಪತ್ತೆಯಾದ ಡ್ರಗ್ಸ್ ತಯಾರಿಕಾ ಘಟಕಗಳು ಕರ್ನಾಟಕದಲ್ಲಿಯೇ ಸಿಂಥೆಟಿಕ್ಸ್ ಡ್ರಗ್ಸ್ ಉತ್ಪಾದನೆಯ ಸಾಧ್ಯತೆಯನ್ನು ಬಹಿರಂಗಪಡಿಸಿದ್ದವು. ಇದೀಗ ರಾಜಧಾನಿ ಬೆಂಗಳೂರಿನಲ್ಲೂ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನ ವಿಶೇಷತೆ ಎಂದರೆ ಇಲ್ಲಿ ಸಾವಿರಾರು ಬಾಡಿಗೆ ಮನೆಗಳು, ಅಪಾರ್ಟ್‌ಮೆಂಟ್‌ಗಳು, ಗೋದಾಮುಗಳು ಮತ್ತು ಕೈಗಾರಿಕಾ ಪ್ರದೇಶಗಳಿವೆ. ಇಂತಹ ಸ್ಥಳಗಳಲ್ಲಿ ಸಣ್ಣ ಪ್ರಮಾಣದ ರಾಸಾಯನಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಸುಲಭ. ಮಾದಕ ವಸ್ತು ಉತ್ಪಾದನೆಗೆ ದೊಡ್ಡ ಕಾರ್ಖಾನೆಗಳ ಅಗತ್ಯವಿಲ್ಲದ ಕಾರಣ, ಮನೆಯ ಒಂದು ಕೊಠಡಿಯಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ತಯಾರಿಸುವ ಸಾಧ್ಯತೆ ಇದೆ.

ಪರಿಣಿತಿ ಹೊಂದಿರುವ ವಿದೇಶಿ ಪೆಡ್ಲರ್ಸ್‌ಗಳು:

ಮತ್ತೊಂದು ಆತಂಕಕಾರಿ ಅಂಶವೆಂದರೆ ವಿದೇಶಿ ಪ್ರಜೆಗಳ ಪಾತ್ರ ಏನೆಂದರೆ, ಸಿಂಥೆಟಿಕ್ ಡ್ರಗ್ಸ್ ತಯಾರಿಕೆಗೆ ರಾಸಾಯನಿಕ ಮಿಶ್ರಣ ಜ್ಞಾನ ಮತ್ತು ಪರಿಣತಿ ಅಗತ್ಯವಾಗುತ್ತದೆ. ಹೀಗಾಗಿ ಕೆಲವು ವಿದೇಶಿ ಜಾಲಗಳು ಕಚ್ಚಾ ವಸ್ತುಗಳಿಂದ ಎಂಡಿಎಂ, ಟ್ರಮಟಾಲ್, ಪೆನ್‌ಕಿಲ್ಲರ್‌ಗಲಂತಹ ಡ್ರಗ್ಸ್ ಮಾತ್ರೆಗಳನ್ನು ತಯಾರಿಸುತ್ತಿದ್ದಾರೆ.
ನಗರದಲ್ಲಿ ಡ್ರಗ್ಸ್ ಬಳಕೆಯ ಬೇಡಿಕೆಯೂ ಹೆಚ್ಚುತ್ತಿರುವುದು ಈ ಜಾಲಗಳಿಗೆ ಉತ್ತೇಜನ ನೀಡುತ್ತಿದೆ. ಪಬ್‌ಗಳು, ಖಾಸಗಿ ಪಾರ್ಟಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಹೆಚ್ಚಿನ ಆದಾಯ ಹೊಂದಿರುವ ಯುವಕರನ್ನು ಗುರಿಯಾಗಿಸಿಕೊಂಡು ಪೆಡ್ಲರ್‌ಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದಾರೆ. ಒಂದು ಕೆಜಿ ಸಿಂಥೆಟಿಕ್ಸ್ ಡ್ರಗ್ಸ್ ತಯಾರಿಕೆಗೆ ಆಗುವ ವೆಚ್ಚಕ್ಕಿಂತ ಅದರ ಮಾರಾಟದಿಂದ ಸಿಗುವ ಲಾಭ ದುಪಟ್ಟಾಗಿರುವುದರಿಂದ ಈ ಅಕ್ರಮ ವ್ಯವಹಾರ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಾ ಹೋಗುತ್ತಿದೆ. ಕಚ್ಚಾ ವಸ್ತುಗಳ ಖರೀದಿ, ಸಾಗಣೆ ಮತ್ತು ಸಂಗ್ರಹಣೆಯು ಸಾಮಾನ್ಯ ವಾಣಿಜ್ಯ ಚಟುವಟಿಕೆಗಳಂತೆ ಕಾಣುತ್ತದೆ. ಹೀಗಾಗಿ ಗುಪ್ತಚರ ಮಾಹಿತಿ, ತಾಂತ್ರಿಕ ತನಿಖೆ ಹಾಗೂ ರಾಸಾಯನಿಕ ವಸ್ತುಗಳ ಮೇಲಿನ ನಿಗಾವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ.
ಒಟ್ಟಾರೆ, ಬೆಂಗಳೂರು ಕೇವಲ ಡ್ರಗ್ಸ್ ಮಾರಾಟ ಮತ್ತು ಸಾಗಾಣಿಕೆ ಕೇಂದ್ರವಾಗಿರುವುದಕ್ಕಿಂತ ಡ್ರಗ್ಸ್ ಉತ್ಪಾದನಾ ಕೇಂದ್ರವಾಗಿ ರೂಪುಗೊಳ್ಳುತ್ತಿರುವ ಲಕ್ಷಣಗಳು ಕಂಡುಬರುತ್ತಿದೆ.

ಗಡಿ ರಾಜ್ಯಗಳಲ್ಲಿ ಹೆಚ್ಚು ಅಕ್ರಮ

ಬೆಂಗಳೂರಿಗೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳಿಂದ ಕಚ್ಚಾ ವಸ್ತುಗಳು ಹಾಗೂ ಗಾಂಜಾ ಅಪಾರ ಪ್ರಮಾಣದಲ್ಲಿ ಕೇಂದ್ರಾಡಳಿತ ಪ್ರದೇಶ ದೆಹಲಿಯಿಂದ ಹರಿದು ಬರುತ್ತಿದೆ.
ಈ ರಾಜ್ಯಗಳಿಗೆ ವಿದೇಶಿ ಕಚ್ಚಾ ವಸ್ತುಗಳು ಭೂತಾನ್, ಚೀನಾ, ನೇಪಾಳ, ನೈಜೀರಿಯಾ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳೊಂದಿಗಿನ ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿವೆ. ಅಲ್ಲಿಂದ ಈ ಅಕ್ರಮ ದಂಧೆಗೆ ಪ್ರಮುಖ ಕಾರಿಡಾರ್ ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net