ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದ ಕೆಲ ವಿದೇಶೀ ಆಟಗಾರರು ಹೊರತುಪಡಿಸಿ ಉಳಿದೆಲ್ಲ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಗ್ಗೂಡಿದ ಎಲ್ಲ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಇಂಗ್ಲೆಂಡ್‌ನ ಜೋರ್ಡನ್ ಕಾಕ್ಸ್, ಜಿತೇಶ್ ಶರ್ಮ, ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ, ಸುಯಶ್ ಶರ್ಮ, ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್ ಹಾಗೂ ವೆಂಕಟೇಶ್ ಅಯ್ಯರ್ ತಂಡ ಕೂಡಿಕೊಂಡಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಎಡಗೈ ವೇಗಿ ಯಶ್ ದಯಾಳ್ ಹಾಲಿ ಸೀಸನ್‌ನಲ್ಲಿ ಕಣಕ್ಕಿಳಿಯುವ ಬಗ್ಗೆ ಫ್ರಾಂಚೈಸಿ ಅಥವಾ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಗುಟ್ಟಾಗಿ ಮದುವೆ ಆಗಿರುವ ಯಶ್ ದಯಾಳ್, ಮುಂಬೈನಲ್ಲಿ ಫ್ರಾಂಚೈಸಿ ಆಯೋಜಿಸಿದ್ದ ಪೂರ್ವಸಿದ್ಧತಾ ಶಿಬಿರದಿಂದಲೂ ದೂರವುಳಿದಿದ್ದರು.