ಫೆ.1ರಿಂದ ಅಂತಾರಾಷ್ಟ್ರೀಯ ನಾಟಕೋತ್ಸವ

ಅಂತರಾಷ್ಟ್ರೀಯ ನಾಟಕೋತ್ಸವ
ಅಂತರಾಷ್ಟ್ರೀಯ ನಾಟಕೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • * ಐದು ವೇದಿಕೆಗಳಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ದೆಹಲಿ ನಾಟಕ ಶಾಲೆಯ ಸಹಯೋಗದಲ್ಲಿ ‘ಭಾರತ ರಂಗ ಮಹೋತ್ಸವ’ದ ಅಂಗವಾಗಿ ಫೆ.1ರಿಂದ 6ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದೆ.
ಐದು ವೇದಿಕೆಗಳಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ. ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಬ್ರೆಜಿಲ್, ಪೋಲೆಂಡ್ ಹಾಗೂ ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆ ರೆಪರ್ಟರಿ ತಂಡ, ಕೋಲ್ಕೊತ್ತಾದ ಭಗವತಿ ನೃತ್ಯ ಮಂದಿರ, ಚೆನ್ನೈನ ರಂಗಮಂದಿರ ಹಾಗೂ ಮೈಸೂರು ರಂಗಾಯಣ ತಂಡದ ನಾಟಕಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ನಾಲ್ಕು ದಶಕಗಳಿಂದ ನಿರಂತರವಾಗಿ ರಂಗ ಚಟುವಟಿಕೆಯಲ್ಲಿ ತೊಡಗಿರುವ ರಾಜ್ಯದ ನಾನಾ ಜಿಲ್ಲೆಗಳಿಂದ ಆಯ್ದ 12 ರಂಗ ತಂಡಗಳಿಗೆ ‘ರಂಗಗೌರವ’ ನೀಡಲಾಗುತ್ತಿದೆ. ಹಾಗೆಯೇ ಹಿರಿಯ ರಂಗ ಕಲಾವಿದರು, ನಾಟಕಕಾರರು, ಸಂಘಟಕರು ಮತ್ತು ತಂತ್ರಜ್ಞರನ್ನು ಗುರುತಿಸಿ ಉತ್ಸವ ಗೌರವ ನೀಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಕಲಾಗ್ರಾಮ ಬಯಲು ರಂಗಮಂದಿರದ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಕರ್ನಾಟಕ ರಂಗೋತ್ಸವ ಆಯೋಜಿಸಲಾಗುತ್ತಿದ್ದು, ಕಲಾಗಂಗೋತ್ರಿ, ಬೆಂಗಳೂರು ವಿವಿಯ ಪ್ರದರ್ಶನ ಕಲಾ ವಿಭಾಗ, ಧಾರವಾಡದ ರಂಗಾಯಣ, ಬೆನಕ ಮತ್ತು ಹಶ್ಮಿ ಥಿಯೇಟರ್ ೆರಂ ತಂಡಗಳ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಯುವರಂಗ ನಾಟಕೋತ್ಸವವನ್ನು ಡಾ. ಸಿದ್ದಲಿಂಗಯ್ಯ ವೇದಿಕೆಯಲ್ಲಿ ಆಯೋಜಿಸಲಾಗಿದೆ. ರಂಗಚಿರಂತನ, ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಮನ್ವಯ ಸಾಂಸ್ಕೃತಿಕ ಟ್ರಸ್ಟ್, ರಂಗಸಿರಿ, ಅಹಿಂದಾ ಕಲಾ ತಂಡ, ವಿಜಯನಗರ ಬಿಂಬ, ದೃಶ್ಯಾಂತರ, ಚಾಣಕ್ಯ ವಿಶ್ವವಿದ್ಯಾಲಯ, ಅಭಿನಯ ತರಂಗ ತಂಡಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಮಳವಳ್ಳಿ ಸುಂದರಮ್ಮ ವೇದಿಕೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿಯನ್ನು ಪ್ರತಿದಿನ ಸಂಜೆ 4 ರಿಂದ ಆಯೋಜಿಸಲಾಗಿದ್ದು, ಯುವಕವಿಗಳೂ ಸೇರಿದಂತೆ ನಾಡಿನ ಹೆಸರಾಂತ 50ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ. ನಾನಾ ಅಕಾಡೆಮಿಗಳ ಸಹಕಾರದೊಂದಿಗೆ ಜಾನಪದ ಕಲಾ ತಂಡಗಳಿಂದ ಪ್ರದರ್ಶನ, ಶಾಸೀಯ ಸಂಗೀತ, ದೊಡ್ಡಾಟ, ನೃತ್ಯ, ಚಿತ್ರಕಲಾ ಪ್ರದರ್ಶನ ಮುಂತಾದ ಚಟುವಟಿಕೆಗಳು ನಡೆಯಲಿವೆ.
ಶ್ರೀರಂಗ ವೇದಿಕೆಯಲ್ಲಿ ಪ್ರತಿದಿನ ಸಂಜೆ 4 ರಿಂದ 6.30ರವರೆಗೆ ರಂಗ ತಂಡಗಳಿಂದ ರಂಗಗೀತೆಗಳ ಗಾಯನ, ಬೀದಿನಾಟಕ, ಕಿರುನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಸಂಧರ್ಭದಲ್ಲಿ ಪುಸ್ತಕ ಮಳಿಗೆ ಮತ್ತು ಆಹಾರ ಮಳಿಗೆಗಳೂ ಇರಲಿವೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net