ಧಾರವಾಡ: ಕಳೆದ ಸೆಪ್ಟೆಂಬರ್- ಅಕ್ಟೋಬರ್‌ನಲ್ಲಿ ನಡೆದಿದ್ದ ಬಿ.ಎಡ್ 2 ಮತ್ತು 4ನೇ ಸೆಮಿಸ್ಟರ್‌ಗಳ ಆಂತರಿಕ ಅಂಕಗಳ ಪರಿಶೀಲನೆಗೆ ಕರ್ನಾಟಕ ವಿಶ್ವವಿದ್ಯಾಲಯ ಮಾಡರೇಷನ್ ಕಮೀಟಿ ಮಾಡಿದೆ. ಈಗಾಗಲೇ ಈ ಎರಡೂ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಅಂಕಪಟ್ಟಿಗಳು ವಿದ್ಯಾರ್ಥಿಗಳ ಕೈ ಸೇರಿವೆ. ಇದೀಗ ಕಮೀಟಿ ರಚಿಸಿ ಕಾಲೇಜುಗಳಿಗೆ ಭೇಟಿ ನೀಡುವ ವೇಳಾಪಟ್ಟಿ ಹೊರಡಿಸಲಾಗಿದ್ದು, ವಿಶ್ವವಿದ್ಯಾಲಯದ ವಿಳಂಬ ನೀತಿಗೆ ಖಾಸಗಿ ಬಿ.ಎಡ್ ಕಾಲೇಜುಗಳ ಆಡಳಿತ ಮಂಡಳಿಗಳು ಮತ್ತು ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಮೂವರು ವಿಷಯತಜ್ಞರ ಸಮಿತಿ ಜ. 30ರಿಂದ ಫೆ. 7ರವರೆಗೆ ಧಾರವಾಡ, ಉತ್ತರ ಕನ್ನಡ, ಗದಗ ಜಿಲ್ಲೆಗಳ ಬಿ.ಎಡ್ ಕಾಲೇಜುಗಳಿಗೆ ಭೇಟಿ ನೀಡಲಿದೆ. ಈಗಾಗಲೇ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ 2025ರ ಬಿ.ಎಡ್ 2ನೇ ಮತ್ತು 4ನೇ ಸೆಮಿಸ್ಟರ್‌ಗಳ ದೃಢೀಕೃತ ಆಂತರಿಕ ಅಂಕಗಳನ್ನು ನೀಡಿದ ಎಲ್ಲ ದಾಖಲೆಗಳು ಸೈದ್ಧಾಂತಿಕ- ಪ್ರಾಯೋಗಿಕ ದಾಖಲಾತಿಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಅಗತ್ಯವಿದ್ದರೆ 3ನೇ ಸೆಮಿಸ್ಟರ್‌ನ ಆಯ್ದ ವಿದ್ಯಾರ್ಥಿಗಳನ್ನು ಸಂದರ್ಶಿಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಬಿ.ಎಡ್ 4ನೇ ಸೆಮಿಸ್ಟರ್ ಫಲಿತಾಂಶ ಬಂದ ನಂತರ ಕೆಲ ವಿದ್ಯಾರ್ಥಿಗಳು ಎಂ.ಎಡ್‌ಗೆ ಪ್ರವೇಶ ಪಡೆದಿದ್ದಾರೆ. ಮತ್ತೆ ಕೆಲವರು ಖಾಸಗಿ ಶಾಲೆಗಳಲ್ಲಿ ಬೋಧನಾ ವೃತ್ತಿ ಆರಂಭಿಸಿದ್ದಾರೆ. ಮಾಡರೇಷನ್ ಕಮೀಟಿಯ ಭೇಟಿ ಮತ್ತು ಆಂತರಿಕ ಪರಿಶೀಲನೆಯ ನಂತರ ಅಂಕಗಳ ವ್ಯತ್ಯಾಸವಾಗುವ ಆತಂಕ ವಿದ್ಯಾರ್ಥಿಗಳದ್ದು. ಅಂಕಗಳು ಹೆಚ್ಚು ಅಥವಾ ಕಡಿಮೆಯಾದರೂ ವಿದ್ಯಾರ್ಥಿಗಳು ಮತ್ತೊಂದು ಅಂಕಪಟ್ಟಿ ಪಡೆಯಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.
"
ಬಿ.ಎಡ್ ಫಲಿತಾಂಶ ಬಂದು 3 ತಿಂಗಳಾಗಿದ್ದು, ಅಂಕಗಳ ಆಧಾರದ ಮೇಲೆ ನಾನು ಖಾಸಗಿ ಕಾಲೇಜಿನಲ್ಲಿ ಎ.ಎಡ್‌ಗೆ ಪ್ರವೇಶಾತಿ ಪಡೆದಿದ್ದೇನೆ. ಈಗ ಸಮಿತಿಯ ಪರಿಶೀಲನೆಯ ನಂತರ ಅಂಕಗಳ ವ್ಯತ್ಯಾಸವಾದರೆ ಎಂ.ಎಡ್ ಸೀಟು ಕೈತಪ್ಪುವ ಆತಂಕವಿದೆ. ಹೀಗಾದರೆ ಈಗಾಗಲೇ ಭರಿಸಿದ ಶುಲ್ಕವನ್ನೂ ಮರಳಿ ಕೊಡುವುದಿಲ್ಲ.