ಕೃಷಿ ಜಮೀನಿನಲ್ಲಿ ಅಪಘಾತ ಸಂಭವಿಸಿದರೂ ವಿಮೆ| High court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಪಾವತಿಸಲು ಕಂಪನಿ ಬಾಧ್ಯಸ್ಥ ಎಂದ ಹೈಕೋರ್ಟ್​
  • ಜನ ಪ್ರವೇಶವಿರುವ ಖಾಸಗಿ ಜಾಗಗಳೂ ಸಾರ್ವಜನಿಕ ಪ್ರದೇಶ

ಬೆಂಗಳೂರು: 

ಮುಕ್ತವಾಗಿ ಅಥವಾ ನಿಯಂತ್ರಿತ ಮಿತಿಯೊಂದಿಗೆ ಸಾರ್ವಜನಿಕರಿಗೆ ಪ್ರವೇಶವಿರುವ ಯಾವುದೇ ಖಾಸಗಿ ಸ್ಥಳವನ್ನು ಕೂಡ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಖಾಸಗಿ ಕೃಷಿ ಜಮೀನಿನಲ್ಲಿ ವಾಹನ ಅಪಘಾತ ಸಂಭವಿಸಿದರೂ, ಪರಿಹಾರ ಪಾವತಿಸುವ ಬಾಧ್ಯತೆ ವಿಮಾ ಕಂಪನಿಗಿದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.

ಚಿಕ್ಕಬಳ್ಳಾಪುರದ ಜಿಲ್ಲೆಯ ಶಿಡ್ಲಟ್ಟ ತಾಲೂಕಿನ ತಲಕಾಯಲಬೆಟ್ಟದ ಖಾಸಗಿ ಕೃಷಿ ಜಮೀನೊಂದರಲ್ಲಿ 2019ರ ನ.8ರಂದು ನಡೆದ ಅಪಘಾತದಲ್ಲಿ ಮೃತಪಟ್ಟ ಕೃಷ್ಣಪ್ಪ ಎಂಬುವರ ಕುಟುಂಬಕ್ಕೆ ಪರಿಹಾರವನ್ನು ವಾಹನ ಮಾಲೀಕ ಮಾತ್ರ ನೀಡಬೇಕು, ವಿಮಾ ಕಂಪನಿ ಬಾಧ್ಯಸ್ಥವಲ್ಲ ಎಂದು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್​ ಈ ಆದೇಶ ನೀಡಿದೆ.
ಅಪಘಾತದ ದಿನದಂದು ಮೃತ ಕೃಷ್ಣಪ್ಪ ಅವರು ಚಂದ್ರಪ್ಪ ಎಂಬುವರ ಜಮೀನಿನಲ್ಲಿ ಮರ ಕಡಿದು ವಿಶ್ರಾಂತಿ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಮರ ಸಾಗಿಸಲು ಬಂದ ಟಾಟಾ ಏಸ್​ ವಾಹನವನ್ನು ಚಾಲಕ ರ್ನಿಲಕ್ಷ$್ಯದಿಂದ ರಿವರ್ಸ್​ ತೆಗೆದುಕೊಂಡಾಗ ಅದು ಕೃಷ್ಣಪ್ಪ ಅವರ ಮೇಲೆ ಹರಿದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದ ಪರಿಹಾರ ಅರ್ಜಿಯನ್ನು ವಿಚಾರಣೆ ನಡೆಸಿದ ಎಂಎಸಿಟಿ, 14.35 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ಅಪಘಾತವು ಖಾಸಗಿ ಜಮೀನಿನಲ್ಲಿ ನಡೆದಿರುವುದರಿಂದ ವಿಮಾ ಕಂಪನಿಯ ಬದಲು ವಾಹನ ಮಾಲೀಕನೇ ಪರಿಹಾರ ನೀಡಬೇಕು ಎಂದಿತ್ತು. ಈ ಆದೇಶ ಮತ್ತು ಪರಿಹಾರ ಮೊತ್ತ ಹೆಚ್ಚಳ ಕೋರಿ ಮೃತನ ಪತ್ನಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ವಿಶಾಲ ವ್ಯಾಖ್ಯಾನ ಮಾಡಿದ ಕೋರ್ಟ್​:

ಎಂಎಸಿಟಿ ಆದೇಶ ಪ್ರಶ್ನಿಸಿ ಮೃತನ ಪತ್ನಿ ರಾಮಕ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್​ ಅಮರಣ್ಣವರ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ಸ್ಪಷ್ಟನೆ ನೀಡಿದೆ. ಬಾಂಬೆ, ಮದ್ರಾಸ್​ ಮತ್ತು ಕೇರಳಂ ಹೈಕೋರ್ಟ್​ಗಳ ವಿವಿಧ ಪೀಠಗಳು ಈ ಹಿಂದೆ ನೀಡಿದ ತೀರ್ಪುಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಮೋಟಾರು ವಾಹನ ಕಾಯ್ದೆಯು ಜನಪರ ಕಾಯ್ದೆಯಾಗಿರುವುದರಿಂದ ಸಾರ್ವಜನಿಕ ಸ್ಥಳ ಎಂಬ ಪದವನ್ನು ವಿಶಾಲವಾಗಿ ವ್ಯಾಖ್ಯಾನಿಸಬೇಕು. ಖಾಸಗಿ ಒಡೆತನದ ಜಾಗಗಳಾಗಿದ್ದರೂ ಸಾರ್ವಜನಿಕರಿಗೆ ಪ್ರವೇಶವಿದ್ದರೆ ಅದು ಸಾರ್ವಜನಿಕ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಕೃಷಿ ಜಮೀನು ಕೂಡ ಈ ವ್ಯಾಪ್ತಿಗೆ ಬರುತ್ತದೆ ಎಂದು ಆ ತೀರ್ಪುಗಳಲ್ಲಿ ವಿವರಿಸಲಾಗಿತ್ತು. 

ತಪ್ಪು ಲೆಕ್ಕ ಮಾಡಿದ್ದ ಎಂಎಸಿಟಿ 

14.35 ಲಕ್ಷ ರೂ. ಪರಿಹಾರ ಘೋಷಿಸುವಾಗ ಮೃತನು ವಿವಾಹಿತ ಎಂಬ ಅಂಶವನ್ನು ಎಂಎಸಿಟಿ ಪರಿಗಣಿಸಿರಲಿಲ್ಲ. ಅವಿವಾಹಿತ ಎಂದು ಲೆಕ್ಕಹಾಕಿ ವೈಯಕ್ತಿಕ ಖರ್ಚಿನ ಮೊತ್ತ ಎಂದು ಶೇ.50ರಷ್ಟು ಕಡಿತ ಮಾಡಲಾಗಿತ್ತು. ಆದರೆ, ಮೃತಪಟ್ಟವರು ವಿವಾಹಿತರಾಗಿದ್ದರೆ ಅವರ ವೈಯಕ್ತಿಕ ಖರ್ಚಿನ ಮೊತ್ತವನ್ನು ಮೂರನೇ ಒಂದು ಭಾಗ ಎಂದು ಮಾತ್ರ ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಪರಿಹಾರದ ಮೊತ್ತವನ್ನು ಮರುಲೆಕ್ಕಾಚಾರ ಮಾಡಿದ ಹೈಕೋರ್ಟ್​ 18.90 ಲಕ್ಷ ರೂ. ಗೆ ಏರಿಸಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net