ಕೊರಟಗೆರೆ:-ದೇಶವೇ ದೇವರು, ದೇಶದಲ್ಲಿರುವ ಪ್ರತಿಯೊಬ್ಬರೂ ನಮ್ಮವರೇ ಎನ್ನುವ ಭಾವನೆ ಮಕ್ಕಳಲ್ಲಿ ಬೇರೂರಬೇಕು. ದೇಶಭಕ್ತಿ, ಮಾನವೀಯತೆ ಮತ್ತು ಸಂಸ್ಕಾರಗಳನ್ನು ಬಾಲ್ಯದಲ್ಲೇ ರೂಢಿಸಿಕೊಂಡರೆ ಜೀವನ ಯಶಸ್ವಿಯಾಗುತ್ತದೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಆಯೋಜಿಸಿದ್ದ ಸಂಸ್ಕಾರ ಶಿಬಿರದಲ್ಲಿ ಮಾತನಾಡಿ, ಈ ದೇಶದಲ್ಲಿ ಒಬ್ಬ ಸಾಮಾನ್ಯ ಪ್ರಜೆಯೂ ರಾಷ್ಟಪತಿ ಹುದ್ದೆಗೂ ಏರಬಹುದಾದ ಅಪಾರ ಅವಕಾಶಗಳಿವೆ. ಇದಕ್ಕೆ ಉದಾಹರಣೆ ಎಂದರೆ ಎಪಿಜೆ ಅಬ್ದುಲ್ ಕಲಾಮ್ ಮತ್ತು ದ್ರೌಪದಿ ಮುಮುರ್ ಎಂದರು.
ಜ್ಞಾನಕ್ಕಿಂತ ಶ್ರೇಷ್ಠವಾದ ಸಂಪತ್ತು ಇನ್ನೊಂದಿಲ್ಲ. ಅದನ್ನು ಪಡೆಯಲು ನಿರಂತರ ಪರಿಶ್ರಮ ಮತ್ತು ಶಿಸ್ತು ಅಗತ್ಯ. ಅದೃಷ್ಟವಂತರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ, ಆದರೆ ಬುದ್ಧಿವಂತರು ತಮ್ಮದೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಎಲ್ಲರಿಗೂ ಅದೃಷ್ಟ ಸಿಗುವುದಿಲ್ಲ, ಆದರೆ ಪ್ರತಿಯೊಬ್ಬರಿಗೂ ಬುದ್ಧಿವಂತರಾಗುವ ಅವಕಾಶವಿದೆ. ಕೇವಲ ಪ್ರಾರ್ಥನೆ ಸಾಕಾಗದು, ಅದನ್ನು ಸಾಧಿಸಲು ಕಠಿಣ ಪರಿಶ್ರಮ ಅಗತ್ಯ ಎಂದರು.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸಂಸ್ಕಾರ ಶಿಬಿರಗಳು ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ವೇದಿಕೆಗಳು. ಶಿಬಿರದಲ್ಲಿ ಕಲಿತ ಉತ್ತಮ ಆಚಾರ-&ವಿಚಾರಗಳನ್ನು ಜೀವನಪೂರ್ತಿ ಅನುಸರಿಸುವುದು ಮಕ್ಕಳ ಕರ್ತವ್ಯ ಎಂದರು.
ಮಧುಗಿರಿ ತಾಲೂಕಿನ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸದ್ವಿದ್ಯಾ ಸಂಸತಿ ಶಾಲೆಯ ಆಡಳಿತಾಧಿಕಾರಿ ಡಾ.ನಂಜುಂಡಯ್ಯ, ವಿದ್ವಾನ್ ಗಣೇಶ್, ಡಾ.ಕುಮಾರಸ್ವಾಮಿ, ಹುಲೀಕುಂಟೆ ಗ್ರಾಮ ಪಂಚಾಯಿತಿ ಗ್ರಂಥಪಾಲಕ ಲೋಕೇಶ್, ಮುಖಂಡರಾದ ಗೋಪಾಲಯ್ಯ, ರಾಮಣ್ಣ ಇದ್ದರು.