ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾದದ್ದು: ನಿವೃತ್ತ ನ್ಯಾ. ಶಿವರಾಜ್ ಪಾಟೀಲ
Samvidhana Nudi Samhithe book release
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
* ಸಂತೋಷ ಹಾನಗಲ್ಲ ಅವರು ಸಂಪಾದಿಸಿದ ‘ಸಂವಿಧಾನ ನುಡಿ ಸಂಹಿತೆ’ ಕೃತಿ ಬಿಡುಗಡೆ
ಬೆಂಗಳೂರು: ಭಾರತವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನ ಹೊಂದಿದ್ದು, ಎಲ್ಲಾ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಜನರಿಗೆ ಸಮಾನ ಅವಕಾಶ ಕಲ್ಪಿಸಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಶಿವರಾಜ್ ಪಾಟೀಲ ಶ್ಲಾಘಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಅವರು ಸಂಪಾದಿಸಿದ ‘ಸಂವಿಧಾನ ನುಡಿ ಸಂಹಿತೆ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಎಂತಹುದೇ ಕಠಿಣ ಸಂದರ್ಭಗಳಲ್ಲೂ ದೇಶದ ಅಖಂಡತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡಿರುವುದರಲ್ಲಿ ಸಂವಿಧಾನ ಪ್ರಧಾನ ಪಾತ್ರ ವಹಿಸಿದೆ. ಸಂವಿಧಾನ ಒದಗಿಸಿದ ಅವಕಾಶಗಳಡಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು, ಸಮಾಜದಲ್ಲಿ ಮಹತ್ತರ ಬದಲಾವಣೆ ತರುವ ಸಾಮರ್ಥ್ಯ ಹೊಂದಿರುತ್ತಾರೆ. ಸಂವಿಧಾನ ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೃತಿಯ ಕುರಿತು ಅಜೀಂ ಪ್ರೇಮ್‌ಜಿ ವಿವಿಯ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿ, ಸಂವಿಧಾನ ಕೂಡ ಕಥಾ ರೂಪದಲ್ಲಿ ಜನರನ್ನು ತಲುಪಬೇಕು. ನಮ್ಮ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂವಿಧಾನವನ್ನು ಇನ್ನಷ್ಟು ಮೌಲ್ಯಾಧಾರಿತವಾಗಿ ಗ್ರಹಿಸಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಈ ಕೃತಿ ಪ್ರಾಧಿಕಾರದ ಭಾಷಾ ಪರ ಆಶಯಗಳಿಗೆ ಮಹತ್ವದ ಸೇರ್ಪಡೆ ಆಗಲಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ಇಲಾಖೆಯ ನಿರ್ದೇಶಕ ಬಿ.ಎಸ್.ಮಂಜುನಾಥ ಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ರವಿಕುಮಾರ್ ನೀಹ ಹಾಗೂ ಟಿ. ತಿಮ್ಮೇಶ್ ಇತರರು ಇದ್ದರು.
ಒಂಬತ್ತು ಅಧ್ಯಾಯಗಳ ಈ ಕೃತಿ, ಭಾಷೆಗಳ ಕುರಿತು ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಗಳು, ಅಧಿಕೃತ ಭಾಷೆಗಳ ಆಯ್ಕೆ, ಭಾಷಾ ಆಯೋಗದ ಮಹತ್ವ, 1956ರ ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ, ಭಾಷೆಗಳ ಕುರಿತು ಕೇಂದ್ರ ಹಾಗೂ ರಾಜ್ಯದ ಕಾಯ್ದೆಗಳ ಮಹತ್ವದ ಮಾಹಿತಿ ಒಳಗೊಂಡಿದೆ.